ಬೆಂಗಳೂರು: ಅಸ್ಥಿಮಜ್ಜೆ ಕಸಿ ಚಿಕಿತ್ಸಾ ಕಟ್ಟಡಕ್ಕೆ ಮುಖ್ಯಮಂತ್ರಿ ಶಂಕುಸ್ಥಾಪನೆ

Update: 2019-01-18 16:24 GMT

ಬೆಂಗಳೂರು, ಜ.18: ಬಡ ಕ್ಯಾನ್ಸರ್ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಅಸ್ಥಿಮಜ್ಜೆ ಕಸಿ ಚಿಕಿತ್ಸಾ ಘಟಕ’ ಕಟ್ಟಡಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.

ನಗರದ ಕಿದ್ವಾಯಿಯಲ್ಲಿ 12 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇದು ದೇಶದ ಅತಿದೊಡ್ಡ ಅಸ್ತಿಮಜ್ಜೆ ಕಸಿ ಚಿಕಿತ್ಸಾ ಘಟಕವಾಗಿದೆ. ಈ ಘಟಕವು 15 ಸಾವಿರ ಚದರ ಅಡಿಯ ವಿಸ್ತೀರ್ಣದಲ್ಲಿ ಇಲ್ಲಿನ ಜಿಂದಾಲ್ ಬ್ಲಾಕ್‌ನ ಮೂರನೇ ಅಂತಸ್ತಿನಲ್ಲಿ ನಿರ್ಮಾಣವಾಗುತ್ತಿದೆ. ಇಲ್ಲಿಗೆ ಹೋಗಲು ಹಿಂಭಾಗದಲ್ಲಿ ಮೆಟ್ಟಿಲುಗಳು ಹಾಗೂ ಲಿಫ್ಟ್ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.

ಘಟಕದಲ್ಲಿ ಸುಮಾರು 2.3 ಕೋಟಿ ರೂ. ಮೌಲ್ಯದ ಯಂತ್ರೋಪಕರಣಗಳ ಅಳವಡಿಕೆ ಮಾಡಲಾಗುತ್ತಿದೆ. 20 ಪ್ರತ್ಯೇಕ ಸುಸಜ್ಜಿತ ಕೊಠಡಿಗಳನ್ನು, ಮೂರು ಕಿರು ಶಸ್ತ್ರಚಿಕಿತ್ಸಾ ಘಟಕಗಳು, ವಿಶ್ರಾಂತಿ ಕೊಠಡಿ ಇರುತ್ತದೆ. ಅಲ್ಲದೆ, ಸಂಪೂರ್ಣ ಸೋಂಕು ರಹಿತವಾದ ಕೊಠಡಿಗಳನ್ನು ಒಳಗೊಂಡಿರುತ್ತದೆ.

ಬಡ ಕ್ಯಾನ್ಸರ್‌ರೋಗಿಗಳಿಗೆ ನೆರವಾಗಲಿದೆ: ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ನೀಡಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಅನೇಕ ಬಡ ಮಕ್ಕಳು ಹಾಗೂ ಅವರ ಪೋಷಕರು ಅಸ್ಥಿಮಜ್ಜೆ ಚಿಕಿತ್ಸೆಗಾಗಿ ನೆರವು ಕೋರಿ ಜನತಾದರ್ಶನ ಸಮಯದಲ್ಲಿ ನನ್ನ ಬಳಿ ಬರುತ್ತಿದ್ದಾರೆ. ಅಂತಹ ಬಡ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಅಸ್ಥಿಮಜ್ಜೆ ಚಿಕಿತ್ಸೆ ಒದಗಿಸುವ ಉದ್ದೇಶದಿಂದ 12 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿಯಲ್ಲಿ ದೇಶದಲ್ಲೇ ಅತೀ ದೊಡ್ಡ 'ಅಸ್ತಿಮಜ್ಜೆ ಚಿಕಿತ್ಸಾ ಘಟಕ’ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕಿದ್ವಾಯಿ ಸಂಸ್ಥೆಗೆ ಕಳೆದ ಏಳು ತಿಂಗಳ ಅವಧಿಯಲ್ಲಿ ಮೂರು ಸಲ ಭೇಟಿ ಮಾಡಿದ್ದೆ. ಇಲ್ಲಿಗೆ ಸಾಕಷ್ಟು ದಾನಿಗಳು ನೆರವು ನೀಡುತ್ತಿರುವುದರಿಂದ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಈ ಹಿಂದೆ ಶಿಫಾನಿ ಹಾಗೂ ದಾಗ ಕುಟುಂಬ ಮೂರು ಅಂತಸ್ಥಿನ ಕಟ್ಟಡ ನಿರ್ಮಿಸಿಕೊಟ್ಟಿದ್ದರು. ಈಗ ಮತ್ತೊಮ್ಮೆ ಕಟ್ಟಡ ನಿರ್ಮಿಸಿಕೊಡಲು ಮುಂದಾಗಿದ್ದರೂ, ಸಂಸ್ಥೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಬೇಡಿಕೆಗೆ ತಕ್ಕಂತೆ ಸಿಬ್ಬಂದಿ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಂ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್, ಕಿದ್ವಾಯಿ ಸಂಸ್ಥೆ ನಿರ್ದೇಶಕ ಡಾ. ಸಿ. ರಾಮಚಂದ್ರ, ಡಾ. ಕೆ.ಬಿ.ಲಿಂಗೇಗೌಡ ಮೊದಲಾದವರು ಉಪಸ್ಥಿತರಿದ್ದರು.

ಮನೆ ಎಂದ ಮೇಲೆ ಸಣ್ಣ ಪುಟ್ಟ ಸಮಸ್ಯೆ ಇದ್ದೇ ಇರುತ್ತದೆ, ಅದನ್ನು ನಾವು ಚರ್ಚೆ ಮಾಡಿ ಪರಿಹಾರ ಮಾಡಿಕೊಳ್ಳುತ್ತೇವೆ. ಆದರೆ, ಶಾಸಕರು ಯಾರೂ ಅಸಮಾಧಾನಗೊಂಡಿಲ್ಲ. ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ.

-ಇ. ತುಕಾರಂ, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News