ಅಪಾರ್ಟ್‌ಮೆಂಟ್ಸ್ ಪರಿಷ್ಕೃತ ಯೋಜನೆಗೆ ಅನುಮೋದನೆ: ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಹೈಕೋರ್ಟ್ ಸೂಚನೆ

Update: 2019-01-18 16:34 GMT

ಬೆಂಗಳೂರು, ಜ.18: ನಗರದ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್‌ಮೆಂಟ್ಸ್‌ನ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿದ ತಕರಾರಿಗೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್ ಮಾಲಕರು, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಕಟ್ಟಡ ನಿರ್ಮಾಣ ಕಂಪೆನಿಯ ಪ್ರತಿನಿಧಿಗಳು ಮಾತುಕತೆಯ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.

ಈ ಸಂಬಂಧ ಉತ್ತರಹಳ್ಳಿ ಹೋಬಳಿಯ ಜರಗನಹಳ್ಳಿಯ ಕನಕಪುರ ಮುಖ್ಯ ರಸ್ತೆಯಲ್ಲಿರುವ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್‌ಮೆಂಟ್ ಮಾಲಕರ ಸಂಘದ ಅಧ್ಯಕ್ಷ ಪ್ರದೀಪ್ ರಾವ್ ಮತ್ತು ಕಾರ್ಯದರ್ಶಿ ಎಂ.ಹೇಮೇಂದ್ರ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರೂ ಆದ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್‌ಮೆಂಟ್ ಮಾಲಕರ ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಎಸ್.ರಾಜಗೋಪಾಲ್ ಅವರು, ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡುವ ಅಧಿಕಾರ ಬಿಡಿಎಗೆ ಇಲ್ಲ ಎಂದರು.

ಈ ಕ್ರಮ ಸಂಪೂರ್ಣ ಕಾನೂನು ಬಾಹಿರ. ಒಂದೊಮ್ಮೆ ಮಾಡುವುದಾದರೆ ಅದಕ್ಕೆ ಕಾಮಗಾರಿ ಜಾರಿಯಲ್ಲಿರುವ ಯೋಜನೆಯಲ್ಲಿ ಮಾತ್ರವೇ ಅವಕಾಶವಿದೆ. ಪೂರ್ಣಗೊಂಡ ಯೋಜನೆಗೆ ಈ ರೀತಿಯ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಲು ಬರುವುದಿಲ್ಲ ಎಂದು ಪ್ರತಿಪಾದಿಸಿದರು.

2003ರಲ್ಲಿ ಮೂಲ ಯೋಜನೆಗೆ ಅನುಮತಿ ನೀಡಲಾಗಿದೆ. ಇದರ ಪರಿವರ್ತನೆಗೆ ಅರ್ಜಿದಾರರು ಅನುಮತಿ ಕೊಟ್ಟಿಲ್ಲ. ಇದು ಬಿಡಿಎ ಮತ್ತು ಡೆವಲಪರ್ಸ್ ನಡುವಿನ ಒಳ ಒಪ್ಪಂದವಾಗಿದೆ ಎಂದು ದೂರಿದರು.

ಪ್ರಕರಣವೇನು: 3 ಎಕರೆ 18 ಗುಂಟೆ ಪ್ರದೇಶದ ಜಮೀನಿನಲ್ಲಿ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್‌ಮೆಂಟ್ಸ್ ನಾಲ್ಕು ಅಪಾರ್ಟ್‌ಮೆಂಟ್ ಬ್ಲಾಕ್‌ಗಳನ್ನು ಹೊಂದಿದೆ. ಇದರಲ್ಲಿ ಒಟ್ಟು 242 ಅಪಾರ್ಟ್‌ಮೆಂಟ್‌ಗಳಿವೆ. 242 ಅಪಾರ್ಟ್‌ಮೆಂಟ್ ಕಟ್ಟಿದ ನಂತರ ಉಳಿದಿದ್ದ 32 ಗುಂಟೆ ಜಾಗದಲ್ಲಿ ಮತ್ತಷ್ಟು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಡೆವಲಪರ್ಸ್, ಯೋಜನೆಯ ಪರಿಷ್ಕೃತ ಅನುಮೋದನೆಗೆ 2016ರ ಡಿಸೆಂಬರ್‌ನಲ್ಲಿ ಅನುಮತಿ ಪಡೆದಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News