ಬಿಬಿಎಂಪಿ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡನೆ: ಹೇಮಲತಾ ಗೋಪಾಲಯ್ಯ

Update: 2019-01-18 16:40 GMT

ಬೆಂಗಳೂರು, ಜ.18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ಪೂರಕವಾದ ಜನಸ್ನೇಹಿ ಬಜೆಟ್ ಮಂಡನೆ ಮಾಡಲಾಗುವುದು ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.8 ರಂದು ರಾಜ್ಯ ಸರಕಾರ ಬಜೆಟ್ ಮಂಡನೆ ಮಾಡಲಿದ್ದು, ನಗರದ ಅಭಿವೃದ್ಧಿಗೆ ನೀಡಲಾಗುವ ಅನುದಾನ ನೋಡಿಕೊಂಡು ಬಿಬಿಎಂಪಿಯಲ್ಲಿ ನಾವು ಜನಸ್ನೇಹಿ ಬಜೆಟ್ ಮಂಡನೆ ಮಾಡಲು ತಯಾರಿ ನಡೆಸಿದ್ದೇವೆ. ನಮ್ಮದೇ ಸರಕಾರ ಇರುವುದರಿಂದ ನಾವು ನಿರೀಕ್ಷೆ ಮಾಡಿದಷ್ಟು ಅನುದಾನ ಸಿಗುವ ನಿರೀಕ್ಷೆ ಇದೆ. ಈ ಅನುದಾನ ಬಳಕೆ ಮಾಡಿಕೊಂಡು ನಗರದ ಸರ್ವಾಂಗೀಣ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡುತ್ತೇವೆ ಎಂದು ಹೇಳಿದರು.

ಮೇಯರ್ ಗಂಗಾಂಬಿಕೆ, ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸಿ ನಾಳೆಯಿಂದ ಬಜೆಟ್ ಮಂಡನೆ ಪೂರ್ವಭಾವಿ ಸಭೆ ಆರಂಭಿಸುತ್ತೇನೆ. ಒಂದೆರಡು ದಿನಗಳಲ್ಲಿ ಬಜೆಟ್ ಮಂಡನೆಯ ಕರಡು ಪ್ರತಿ ನಮ್ಮ ಕೈ ಸೇರಲಿದೆ. ಆನಂತರ ಸಂಘ-ಸಂಸ್ಥೆಗಳು, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು, ತಜ್ಞರು ಮತ್ತಿತರರ ಸಭೆ ನಡೆಸಿ ಅಂತಿಮ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಹೇಳಿದರು.

ಈಗಾಗಲೇ ಬಜೆಟ್ ಗಾತ್ರ ನಿರ್ಧರಿಸಲಾಗುವುದಿಲ್ಲ. ಎಲ್ಲ ಸಾಧಕ-ಬಾಧಕ ಅವಲೋಕಿಸಿ ಅಂತಿಮ ರೂಪ ನೀಡಲಾಗುವುದು. ಕಳೆದ ಸಾಲಿನಲ್ಲಿ ಮಂಡನೆಯಾದ ಬಜೆಟ್‌ನಲ್ಲಿನ ಹಲವು ಕಾಮಗಾರಿಗಳು ಬಾಕಿಯಿದ್ದು, ಅವುಗಳ ಜೊತೆಗೆ ಪ್ರಸಕ್ತ ಸಾಲಿನ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News