ಕೆಎಂಎಫ್ ನೌಕರರಿಗೆ ಬೆಣ್ಣೆ, ರೈತರಿಗೆ ಸುಣ್ಣ: ಡಾ.ಸಮೀರ್ ಪಾಷಾ ಆರೋಪ

Update: 2019-01-18 16:40 GMT

ಬೆಂಗಳೂರು, ಜ.18: ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿಯಲ್ಲಿನ 320 ನೌಕರರ ವೇತನವನ್ನು 8 ಸಾವಿರಕ್ಕೆ ಹೆಚ್ಚಿಸಿ, ಆ ಹೊರೆಯನ್ನು ರೈತರು ಕೊಳ್ಳುವ ಪಶು ಆಹಾರದ ಮೇಲೆ ಹೊರಿಸುವ ಮೂಲಕ ಕೆಎಂಎಫ್, ನೌಕರರಿಗೆ ಬೆಣ್ಣೆ, ರೈತರಿಗೆ ಸುಣ್ಣ ನೀಡಿದೆ ಎಂದು ಸಾಮಾಜಿಕ ಹೋರಾಟಗಾರ ಡಾ.ಸಮೀರ್ ಪಾಷಾ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 320 ನೌಕರರಿಗೆ ತಿಂಗಳಿಗೆ 8 ಸಾವಿರ ರೂ. ಹೆಚ್ಚಿಸಲು ಕಳೆದ ವರ್ಷ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿರುವುದು ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿದ್ದು, ಈ ತೀರ್ಮಾನವನ್ನು ತಡೆಹಿಡಿಯುವಂತೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಪತ್ರದ ಮೂಲಕ ನಿರ್ದೇಶನ ನೀಡಿದ್ದರೂ, ಕೆಎಂಎಫ್ ತನ್ನ ಘಟಕಗಳಿಗೆ ಸುತ್ತೋಲೆ ಕಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೌಕರರಿಗೆ ಹೆಚ್ಚಿಸುತ್ತಿರುವ ವೇತನದಿಂದ ತಿಂಗಳಿಗೆ 25.6 ಲಕ್ಷ ರೂ. ಹಾಗೂ ಒಂದು ವರ್ಷಕ್ಕೆ 3.07ಕೋಟಿ ರೂ. ವೆಚ್ಚವಾಗುತ್ತದೆ. ಈ ವೆಚ್ಚವನ್ನು ಹಾಲು ಉತ್ಪಾದಕರು (ರೈತರು) ಕೊಳ್ಳುವ ಪಶು ಆಹಾರದ ಮೇಲೆ ಹೊರಿಸಲಾಗಿದೆ. ತಕ್ಷಣ ಈ ಆದೇಶವನ್ನು ಜಾರಿ ಮಾಡದೆ ಹೆಚ್ಚಿಸಿರುವ 1500 ರೂ. ಪಶು ಆಹಾರದ ಬೆಲೆಯ ಆದೇಶವನ್ನು ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹಾಲು ಉತ್ಪಾದಕರು ಕೆಎಂಎಫ್ ಹಾಗೂ ವಿಧಾನ ಸೌಧದ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News