ಸರಕಾರದ ಯೋಜನೆಗಳನ್ನು ಶೋಷಿತ ಸಮುದಾಯಗಳಿಗೆ ತಲುಪಿಸುವೆ: ಪ್ರಸಾದ್ ಅಬ್ಬಯ್ಯ

Update: 2019-01-18 16:45 GMT

ಬೆಂಗಳೂರು, ಜ. 18: ಸರಕಾರದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಲಾಭವನ್ನು ಶೋಷಿತ ಸಮುದಾಯಗಳ ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಇಂದಿಲ್ಲಿ ಹೇಳಿದ್ದಾರೆ.

ಶುಕ್ರವಾರ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸರ್ವರಿಗೂ ಸಮಬಾಳು ಹಾಗೂ ಸರ್ವರಿಗೂ ಸಮಪಾಲು ಎಂಬ ಧೋರಣೆ ತಮ್ಮದಾಗಿದೆ. ಆದಕಾರಣ, ತುಳಿತಕ್ಕೆ ಒಳಗಾದ ಸಮುದಾಯಗಳ ಪ್ರಗತಿಗಾಗಿ ರಾಜ್ಯ ಸರಕಾರವು ಬಿಡುಗಡೆ ಮಾಡುವ ಅನುದಾನ ಸದ್ಬಳಕೆಯಾಗಬೇಕೆಂಬುದು ತಮ್ಮ ನಿಲುವು.

ಈ ಸಮುದಾಯಗಳ ಏಳಿಗೆಗಾಗಿ ನಿಗಮದ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಿ ಅರ್ಹ ಫಲಾನುಭಗಳ ಮನೆ ಬಾಗಿಲಿಗೆ ಸರಕಾರದ ವಿವಿಧ ಸವಲತ್ತು ಹಾಗೂ ಸೌಲಭ್ಯಗಳನ್ನು ದೊರಕಿಸಿಕೊಡುವತ್ತ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ನಿಗಮದ ಯೋಜನೆಗಳಲ್ಲಿ ಹೊಸತನ ತಂದು, ಕಾರ್ಯಕ್ರಮಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಆಹಾರ ಸಚಿವ ಬಿ.ಝಡ್. ಝಮೀರ್ ಅಹ್ಮದ್‌ಖಾನ್, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವರಾದ ಎಚ್.ಆಂಜನೇಯ, ವಿನಯ್ ಕುಲಕರ್ಣಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News