ಸೈನಾ ಸೆಮಿಗೆ: ಶ್ರೀಕಾಂತ್ ಮನೆಗೆ

Update: 2019-01-18 18:47 GMT

ಕೌಲಾಲಂಪುರ, ಜ.18: ಪ್ರಬಲ ಹೋರಾಟ ಕಂಡುಬಂದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಜಪಾನ್‌ನ ನೊರೊಮಿ ಒಕುಹರಾ ಅವರನ್ನು ನೇರ ಗೇಮ್‌ಗಳಿಂದ ಮಣಿಸಿದ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಶುಕ್ರವಾರ ಮಲೇಶ್ಯಾ ಮಾಸ್ಟರ್ಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದಾರೆ. ಇದೇ ವೇಳೆ ಭಾರತದ ಇನ್ನೋರ್ವ ತಾರೆ ಕಿಡಂಬಿ ಶ್ರೀಕಾಂತ್ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.

ಈ ಪಂದ್ಯಕ್ಕಿಂತ ಮೊದಲು ಒಕುಹರಾ ವಿರುದ್ಧ 8-4 ಹೆಡ್ ಟು ಹೆಡ್ ಗೆಲುವಿನ ದಾಖಲೆ ಹೊಂದಿದ್ದ 7ನೇ ಶ್ರೇಯಾಂಕದ ಸೈನಾ, ಈ ಪಂದ್ಯದಲ್ಲಿ ಎರಡು ಗೇಮ್ಸ್ ಗಳಲ್ಲಿ 9-15 ಹಾಗೂ 14-18ರಿಂದ ಹಿನ್ನಡೆಯಲ್ಲಿದ್ದರು. ಆದರೆ ತಪ್ಪುಗಳನ್ನು ಶೀಘ್ರ ತಿದ್ದಿಕೊಂಡು ಮುನ್ನುಗ್ಗಿದ ಅವರು, 2ನೇ ಶ್ರೇಯಾಂಕದ ನೊರೊಮಿ ಅವರನ್ನು 21-18, 23-21ರಿಂದ ಸೋಲಿಸಿ ಬೀಗಿದರು. 48 ನಿಮಿಷಗಳಲ್ಲಿ ಪಂದ್ಯ ಅಂತ್ಯವಾಯಿತು. 2017ರಲ್ಲಿ ಟೂರ್ನಿಯ ಚಾಂಪಿಯನ್ ಹಾಗೂ 2011ರಲ್ಲಿ ರನ್ನರ್‌ಅಪ್ ಆಗಿರುವ 28 ವರ್ಷ ವಯಸ್ಸಿನ ಹೈದರಾಬಾದ್ ಆಟಗಾರ್ತಿ ಸೈನಾ, ಶನಿವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಕರೊಲಿನಾ ಮರಿನ್ ಅವರನ್ನು ಎದುರಿಸಲಿದ್ದಾರೆ. ಈ ಹಿಂದೆ ನಡೆದ ಪಂದ್ಯಗಳಲ್ಲಿ ಮರಿನ್‌ರನ್ನು ಸೈನಾ 5 ಬಾರಿ ಮಣಿಸಿದ್ದರೆ, ಹಲವು ಬಾರಿ ಸೋತಿದ್ದಾರೆ.

<ಶ್ರೀಕಾಂತ್‌ಗೆ ಸೋಲು: ಮತ್ತೊಂದೆಡೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪದಕದ ಭರವಸೆಯಾಗಿದ್ದ ಕಿಡಂಬಿ ಶ್ರೀಕಾಂತ್ 4ನೇ ಶ್ರೇಯಾಂಕದ ಕೊರಿಯದ ಸನ್ ವಾನ್ ಹೊ ವಿರುದ್ಧ 23-21, 16-21, 17-21 ರಿಂದ ಮುಖಭಂಗ ಅನುಭವಿಸಿದರು. 1 ಗಂಟೆ, 12 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೊದಲ ಗೇಮ್‌ನಲ್ಲಿ ಜಯ ಸಾಧಿಸಿದ್ದ ಶ್ರೀಕಾಂತ್, ಅದೇ ಪ್ರದರ್ಶನ ಮುಂದುವರಿಸುವಲ್ಲಿ ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News