ತಂದೆಯ ಚಿಕಿತ್ಸೆಗೆ ಹಣ ಹೊಂದಿಸಲು ಹುಡುಗರಂತೆ ವೇಷ ಧರಿಸಿ ಕ್ಷೌರದಂಗಡಿ ನಡೆಸುವ ಸೋದರಿಯರು

Update: 2019-01-21 10:18 GMT

ಪಾಟ್ನಾ, ಜ.19: ಉತ್ತರ ಪ್ರದೇಶದ ಬನ್ವಾರಿ ತೊಲಾ ಎಂಬ ಗ್ರಾಮದ ಇಬ್ಬರು ಸೋದರಿಯರು ಕಳೆದ ನಾಲ್ಕು ವರ್ಷಗಳಿಂದ ಪುರುಷರಂತೆ ವೇಷ ಧರಿಸಿ ತಮ್ಮ ತಂದೆಯ ಕ್ಷೌರದಂಗಡಿಯನ್ನು ನಡೆಸುತ್ತಿದ್ದರೆಂಬ ಅಚ್ಚರಿಯ ವಿದ್ಯಮಾನ ಬೆಳಕಿಗೆ ಬಂದಿದೆ.

ತಮ್ಮ ತಂದೆ 2014ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಅಂಗಡಿ ನಡೆಸಲು ಅಸಮರ್ಥರಾದಾಗ ಈ ಹದಿಹರೆಯದ ಇಬ್ಬರು ಸೋದರಿಯರು ತಂದೆಯ ಕ್ಷೌರದಂಗಡಿ ನಡೆಸಿಕೊಂಡು ಬಂದಿದ್ದಾರೆ. ಜ್ಯೋತಿ ಕುಮಾರಿ (18) ಹಾಗೂ ನೇಹಾ(16) ಈ ಅಪೂರ್ವ ಸೋದರಿಯರಾಗಿದ್ದಾರೆ.

ಆರಂಭದಲ್ಲಿ ಕೆಲ ಪುರುಷರು ತಲೆಕೂದಲು ಕತ್ತರಿಸಲು ಹಾಗೂ ಗಡ್ಡ ಮೀಸೆ ಬೋಳಿಸಲು ಹಿಂಜರಿದರೆ, ಇನ್ನು ಕೆಲವರಿಂದ ಮೂದಲಿಕೆ ಹಾಗೂ ಅಪಹಾಸ್ಯಕ್ಕೂ ಸೋದರಿಯರು ಒಳಗಾಗಬೇಕಾಯಿತು. ಕೊನೆಗೆ ಇಬ್ಬರೂ ಹುಡುಗರಂತೆ ವೇಷ ಧರಿಸಿ ಕ್ಷೌರದಂಗಡಿ ನಡೆಸಿದರು. ತಮ್ಮ ಕೂದಲನ್ನು ಹುಡುಗರಂತೆ ಕತ್ತರಿಸಿದ್ದರಲ್ಲದೆ, ಕೈಗಳಿಗೆ ಹುಡುಗರು ಧರಿಸುವಂತಹ ಸ್ಟೀಲ್ ಬ್ರೇಸ್‍ಲೆಟ್ ಧರಿಸಿ ತಮ್ಮನ್ನು ದೀಪಕ್ ಮತ್ತು ರಾಜು ಎಂದು ಪರಿಚಯಿಸಿಕೊಂಡಿದ್ದರು.

ಗ್ರಾಮದ ಕೆಲವರಿಗೆ ಇದು ತಿಳಿದಿತ್ತಾದರೂ ಸಮುದಾಯದ ಹೊರಗಿನವರಿಗೆ ತಿಳಿದಿಲ್ಲದೇ ಇದ್ದುದರಿಂದ ಹಲವರು ಅವರ ಅಂಗಡಿಗೆ ಕ್ಷೌರಕ್ಕಾಗಿ ಆಗಮಿಸುತ್ತಿದ್ದರು. ಈ ರೀತಿ ಬಾಲಕಿಯರು ದಿನಕ್ಕೆ ಸುಮಾರು ರೂ 400 ಸಂಪಾದಿಸುತ್ತಿದ್ದರಲ್ಲದೆ ಈ ಹಣದಿಂದ ತಂದೆಯ ಔಷಧಿ ಖರ್ಚು ಹಾಗೂ ಮನೆ ಖರ್ಚನ್ನು ನಿಭಾಯಿಸುತ್ತಿದ್ದರು. ಇಬ್ಬರೂ ಬೆಳಗ್ಗೆ ಶಾಲೆಗೆ ತೆರಳಿ ಮಧ್ಯಾಹ್ನದ ಹೊತ್ತಿಗೆ ಅಂಗಡಿ ತೆರೆಯುತ್ತಿದ್ದರು. ಜ್ಯೋತಿ ತಮ್ಮ ಪದವಿ ಶಿಕ್ಷಣ ಪೂರೈಸಿದ್ದರೆ ನೇಹಾ ತನ್ನ ಶಿಕ್ಷಣ ಮುಂದುವರಿಸಿಕೊಂಡು ಹೋಗುತ್ತಿದ್ದಾಳೆ. ಕ್ರಮೇಣ ಇಬ್ಬರು ಸೋದರಿಯರೂ ತಮ್ಮ ಗ್ರಾಹಕರಿಗೆ ತಮ್ಮ ಪರಿಚಯ ಮಾಡಿ ಕೊಟ್ಟರಲ್ಲದೆ ಈಗ ಗ್ರಾಮದ ಜನತೆ ಈ ಯುವತಿಯರ ಕೈಯಲ್ಲಿ ಕ್ಷೌರ ಮಾಡಿಸಿಕೊಳ್ಳಲು ಹಿಂಜರಿಯುವುದಿಲ್ಲ.

ನೆರೆಯ ಗೋರಖಪುರದ ಪತ್ರಕರ್ತರೊಬ್ಬರು ಇವರ ಕಥೆಯನ್ನು ಪ್ರಕಟಿಸಿದಾಗ ಎಲ್ಲರೂ ಅವರನ್ನು ಪ್ರಶಂಸಿಸಿದರಲ್ಲದೆ ಸರಕಾರಿ ಅಧಿಕಾರಿಗಳು ಈ ಬಾಲಕಿಯರಿಗೆ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News