ಮುದ್ದಪ್ಪ ಸ್ಮಾರಕ ಸಾಂಸ್ಕೃತಿಕ ಕೇಂದ್ರ

Update: 2019-01-19 13:28 GMT

ನಾಡಿನ ಜಾನಪದ ಕಲೆಗಳ ಪುನರುಜ್ಜೀವನದ ಸಲುವಾಗಿ ಮುದ್ದುಶ್ರೀ ಉತ್ಸವದ ಹೆಸರಿನಲ್ಲಿ ಪ್ರತೀ ವರ್ಷ ಮುನ್ನೂರಕ್ಕೂ ಹೆಚ್ಚು ಕಲಾವಿದರನ್ನು ಕಲೆಹಾಕಿ ಉತ್ಸವಗಳನ್ನು ಏರ್ಪಡಿಸುತ್ತಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹೀಗೆ ರಾಜ್ಯ ಹೊರರಾಜ್ಯಗಳ ನೂರಾರು ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಾಮಾಜಿಕ, ಶೈಕ್ಷಣಿಕ, ಸಂಸ್ಕೃತಿ, ನಾಡು ನುಡಿ ಹೀಗೆ ಬಹು ಆಯಾಮ ಗಳಲ್ಲಿ ತಮ್ಮಷ್ಟಕ್ಕೆ ತಾವು ತಮ್ಮನ್ನು ಅರ್ಪಿಸಿಕೊಂಡಿರುವ ಹತ್ತು ಹಲವು ಸಂಘಟನೆಗಳು ನಮ್ಮ ನಾಡಿನಲ್ಲಿವೆ. ಆ ಮೂಲಕ ಜನಾಂದೋಲನ ರೂಪಿಸುತ್ತಿವೆ. ಮಾತ್ರವಲ್ಲ ಸ್ವಸ್ಥ ಸಮಾಜ ನಿರ್ಮಾಣ ಕ್ರಿಯೆಯಲ್ಲಿ ತೊಡಗಿವೆ. ಬುಡಕಟ್ಟು, ತಳಸಮುದಾಯಗಳು, ಮಕ್ಕಳು ಹಿರಿಯರು, ಮನೋ ವೈಕಲ್ಯಕ್ಕೆ ಗುರಿಯಾದವರು ಯುವಕರು, ಮಹಿಳೆಯರು, ಕಲಾವಿದರು, ರಂಗಕರ್ಮಿಗಳು ಹೀಗೆ ಸಮಾಜದ ಎಲ್ಲ ವರ್ಗದ ಜನಕಲ್ಯಾಣ ಕಾರ್ಯದಲ್ಲಿ ನಿರತವಾಗಿ, ಜನಮುಖಿ ಆಶೋತ್ತರಗಳನ್ನು ಹೊತ್ತು ಇಪ್ಪತ್ತು ವರ್ಷಗಳ ಹಿಂದೆ ನಾಡಿನ ನಾಟಕಕಾರ, ಜಾನಪದ ಸಂಶೋಧಕ, ಸಂಸ್ಕೃತಿ ಸಂಘಟಕ, ಪ್ರಕಾಶಕ ಡಾ. ಎಂ. ಬೈರೇಗೌಡ ತನ್ನ ತಂದೆಯ ನೆನಪಿಗಾಗಿ ಟ್ರಸ್ಟ್ ಒಂದನ್ನು ಸ್ಥಾಪಿಸಿದರು. ಪೌರಾಣಿಕ ನಾಟಕದ ನಿರ್ದೇಶಕರು, ಹಾರ್ಮೋನಿಯಂ ವಾದಕರೂ, ನಾಟಿ ವೈದ್ಯರೂ, ಗಮಕಿಗಳೂ ಆದ ದಿ. ಕೆ.ಎಸ್. ಮುದ್ದಪ್ಪ ಅವರ ಹೆಸರಿನಲ್ಲಿ ಆರಂಭ ವಾದ ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಇನ್ನೇನು ತನ್ನ ಇಪ್ಪತ್ತನೆ ವರ್ಷಾಚರಣೆ ಮಾಡಿಕೊಳ್ಳುತ್ತಿದೆ. ಅದರ ಅಂಗವಾಗಿ ಜಾನಪದ ವಿಷಯದಲ್ಲಿ ಡಿಪ್ಲೊಮೊ ಮತ್ತು ಸರ್ಟಿಫಿಕೇಟ್ ಕೋರ್ಸುಗಳನ್ನು ಆರಂಭಿಸಿದೆ.

ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೂ ನೆರವಾಗುತ್ತಿರುವ ಈ ಸಂಸ್ಥೆ ಈವರೆಗೆ ಅಂತಹ ನೂರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೆರವಾಗುತ್ತಿರುವುದು ಗಮನಾರ್ಹ ಅಂಶವಾಗಿದೆ. ಆ ಮೂಲಕ ಮಕ್ಕಳ ಶಿಕ್ಷಣದ ಕಡೆ ಒತ್ತು ನೀಡುವ ನಿಟ್ಟಿನಲ್ಲಿ ಸದಾ ತುಡಿಯುತ್ತಿದೆ. ಇರುವ ಕೆಲವೇ ಟ್ರಸ್ಟಿಗಳ ಸಹಕಾರದಿಂದ ಸೃಜನಶೀಲ ಕಾರ್ಯಗಳನ್ನು ಮಾಡುತ್ತಿರುವುದು ವಿಶೇಷವೇ ಸರಿ.

ಮಕ್ಕಳಿಗಾಗಿ ವಾರ್ಷಿಕ ವಸತಿ ಬೇಸಿಗೆ ಜಾನಪದ ರಂಗ ತರಬೇತಿ ಶಿಬಿರಗಳನ್ನು ಕಳೆದ ಹದಿನೆಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಇದು ಹತ್ತರಿಂದ ಹದಿನೈದರ ವಯೋಮಾನದ ಮಕ್ಕಳಿಗಾಗಿ ಹಮ್ಮಿಕೊಳ್ಳುವ ವಿಶೇಷ ವಿಭಿನ್ನವಾದ ಶಿಬಿರ. ಜಾನಪದ ಕತೆಯಾಧರಿಸಿ ನಾಟಕ, ವಿವಿಧ ಜಾನಪದ ನೃತ್ಯಗಳ ಕಲಿಕೆ, ವ್ಯಕ್ತಿತ್ವ ವಿಕಸನ, ಗಾಯನ, ಮುಖವಾಡಗಳ ತಯಾರಿಕೆ, ಮಾತುಗಾರಿಕೆ, ಸಭಾಕಂಪನ ನಿವಾರಣೆ ಮುಂತಾದವುಗಳನ್ನು ಪರಿಚಯಿಸಿ ಆ ಮೂಲಕ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ.

ರಾಮನಗರ ಜಿಲ್ಲೆಯ ಸರಿಸುಮಾರು ಅರವತ್ತಕ್ಕೂ ಹೆಚ್ಚಿನ ಸರಕಾರಿ ಶಾಲೆ ಗಳಿಗೆ ಈ ತನಕ ಅರವತ್ತು ಸಾವಿರ ಪುಸ್ತಕಗಳನ್ನು ವಿತರಿಸಿರುವುದು ಟ್ರಸ್ಟ್ ನ ಹೆಗ್ಗಳಿಕೆ. ಆನೇಕಲ್ ತಾಲೂಕಿನಾದ್ಯಂತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಉಪನ್ಯಾಸ ಮಾಲಿಕೆ ಆರಂಭಿಸಿ ಅನೇಕ ಶಾಲೆಗಳಲ್ಲಿ ಪ್ರಶಸ್ತಿಗಳ ಮಹತ್ವ, ವಿವರಗಳನ್ನು ತಿಳಿಸಿಕೊಡುವ ಕೆಲಸದಲ್ಲಿ ನಿರತವಾಗಿದೆ. ರಾಮನಗರ, ಮಾಗಡಿ, ಚನ್ನಪಟ್ಟಣ ಹಾಗೂ ಕನಕಪುರ ತಾಲೂಕಿನಲ್ಲಿ ಕೂಡ ಈ ಕಾರ್ಯಕ್ರಮವನ್ನು ವಿಸ್ತರಿಸಿದೆ.

ಮಕ್ಕಳು ಯುವಕರು ವಯೋವೃದ್ಧರಿಗಾಗಿ ವಿವಿಧ ಸ್ಪರ್ಧೆಗಳ ಏರ್ಪಾಟು, ಕಲಿಕಾ ಶಿಬಿರಗಳು, ಶಾಲಾ ಕಾಲೇಜು ಮಕ್ಕಳಿಗಾಗಿ ನಾಟಕ ಮತ್ತು ಅಭಿನಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಪಠ್ಯೇತರ ಚಟುವಟಿಕೆಯ ಮಹತ್ವವನ್ನು ತಿಳಿಸುತ್ತಿದೆ. ಜಾನಪದದ ಛಾಯೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗಾಗಿ ಜಾನಪದ ಗೀತಗಾಯನ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದೆ. ಸೋಬಾನೆ, ಕುಟ್ಟುವ, ಕೇರುವ, ಗರತಿ ಹಾಡಿನ ಬಿಡಿಗೀತೆಗಳು, ರೂಪಕಗಳು, ಮಾರಮ್ಮ ಮುಂತಾದ ದೇವತೆಗಳ ಸಂಬಂಧಿ ಗೀತಗಾಯನವನ್ನೂ ಕಲಿಸಿ ಪ್ರದರ್ಶನಕ್ಕೆ ಏರ್ಪಾಡು ಮಾಡುತ್ತಿದೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಹಯೋಗದಲ್ಲಿ ಓದಿನ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವೂ ಮುಖ್ಯ ಎಂಬುದನ್ನು ಮನಗಂಡು ಓದಿನರಮನೆಯಲ್ಲಿ ತಿಂಗಳ ಒನಪು ಎಂಬ ಹೆಸರಿನಲ್ಲಿ ಪ್ರತಿ ತಿಂಗಳ 11ರಂದು ನಾಟಕ, ಜಾನಪದ ಸಂಗೀತ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಜಾನಪದ ಕಲಾಪ್ರದರ್ಶನಗಳನ್ನು ಕಳೆದ 152 ತಿಂಗಳುಗಳಿಂದ ನಡೆಸಿಕೊಂಡು ಬರುತ್ತಿದೆ. ಆ ಮೂಲಕ ಜನರಲ್ಲಿ ಸಾಂಸ್ಕೃತಿಕ ಮನೋಭಾವ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸಿದೆ ಎನ್ನಬಹುದು. 2,500ಕ್ಕೂ ಹೆಚ್ಚು ಕಲಾವಿದರು ಈ ವೇದಿಕೆಯಲ್ಲಿ ಅವಕಾಶ ಪಡೆದಿರುವುದು ವಿಶೇಷವಾಗಿದೆ.

ಗ್ರಾಮೀಣ ಪರಿಸರದಲ್ಲಿ ತನ್ನದೇ ಕೇಂದ್ರ ಸ್ಥಾಪಿಸಬೇಕೆಂಬ ಕನಸು ಹೊತ್ತು, ಸರಕಾರ ಅಥವಾ ಸಾರ್ವಜನಿಕರು ಯಾರ ಸಹಾಯವೂ ಇಲ್ಲದೆ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಬೈರೇಗೌಡರು ದಾನವಾಗಿ ನೀಡಿದ ಮೂರು ಎಕರೆ ಜಮೀನಿನಲ್ಲಿ ಬಯಲು ರಂಗಮಂದಿರ ಅಧ್ಯಯನ ಕೊಠಡಿಗಳು, ಸುಮಾರು ನೂರು ಮಂದಿಗೆ ಅಗತ್ಯವಾದ ಮೂಲಭೂತ ಸವಲತ್ತುಗಳನ್ನು ಸೃಷ್ಟಿಸಿ ತನ್ನದೇ ನೆಲೆಯಲ್ಲಿ ಸಾಗುತ್ತಿದೆ. ಮುದ್ದುಶ್ರೀ ದಿಬ್ಬ ರಾಮನಗರ ಜಿಲ್ಲೆಯ ಪ್ರತಿಷ್ಠಿತ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.

IFROಟ್ರಸ್ಟ್ ಅಧೀನ ಸಂಸ್ಥೆಯಾಗಿ ಇಂಡಿಯನ್ ಫೋಟ್ಲೊರ್ ರೀಸರ್ಚರ್ಸ್ ಆರ್ಗನೈಸೇಷನ್  ಸ್ಥಾಪಿಸಿ ಕೇರಳ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನ ನೂರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಪ್ರತಿವರ್ಷ ನಿರಂತರವಾಗಿ ರಾಷ್ಟ್ರೀಯ ಜಾನಪದ ವಿಚಾರ ಸಂಕಿರಣಗಳನ್ನು ನಡೆಸಿಕೊಂಡು ಬರುತ್ತಿದೆ. ಕೇರಳದಲ್ಲಿ ಮೂರು ರಾಷ್ಟ್ರೀಯ ಜಾನಪದ ವಿಚಾರ ಸಂಕಿರಣಗಳು, ಒಂದು ಅಂತರ್‌ರಾಷ್ಟ್ರೀಯ ಜಾನಪದ ವಿಚಾರ ಸಂಕಿರಣ ಹಮ್ಮಿಕೊಂಡು ಯಶಸ್ವಿಯಾಗಿದೆ. ಮಲೇಶಿಯಾ, ಪೋರ್ಚುಗಲ್, ಇಂಡೋನೇಷಿಯಾ, ನೇಪಾಳ, ಭೂತಾನದ ಜಾನಪದ ವಿದ್ವಾಂಸರು ತಮ್ಮ ವಿಚಾರಗಳನ್ನು ಈ ವೇದಿಕೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ.

ಐದು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವನ್ನು ಟ್ರಸ್ಟ್ ಹೊಂದಿದ್ದು ಅಧ್ಯಯನ ಆಕಾಂಕ್ಷಿಗಳು ಅದರ ಲಾಭ ಪಡೆಯುತ್ತಿದ್ದಾರೆ. ಕುಂಚ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅನೇಕ ಕಲಾಶಿಬಿರಗಳನ್ನು ಏರ್ಪಡಿಸಿ ಮುನ್ನೂರಕ್ಕೂ ಹೆಚ್ಚು ಕಲಾಕೃತಿಗಳ ಸಂಗ್ರಹ ಟ್ರಸ್ಟ್ ಹೆಗ್ಗಳಿಕೆಯೇ ಸರಿ. ಮಕ್ಕಳಿಗಾಗಿ ಜಾನಪದ ಕಥಾಚಿತ್ರ ಸ್ಪರ್ಧೆ ಏರ್ಪಡಿಸಿ ಅದರಿಂದ ತಯಾರಾದ ಸಾವಿರಾರು ಚಿತ್ರಗಳ ಸ್ಟಾಕ್ ಕೆ.ಎಸ್.ಎಂ. ಟ್ರಸ್ಟ್ ನ ಆಸ್ತಿಯೆಂದರೆ ತಪ್ಪಾಗಲಾರದು. ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು ರಾಷ್ಟ್ರೀಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ.

ಪ್ರಕಟಣಾ ಕ್ಷೇತ್ರದಲ್ಲಿ ಕೂಡ ಮುದ್ದುಶ್ರೀ ಗ್ರಂಥಮಾಲೆ ಮೂಲಕ ನೂರಕ್ಕೂ ಹೆಚ್ಚು ಹಳಗನ್ನಡ, ನಡುಗನ್ನಡ, ವಚನ ಸಾಹಿತ್ಯ, ಜಾನಪದ ಸಂಶೋಧನಾ ಕೃತಿ ಗಳನ್ನು ಹೊರತಂದು ಸಾರಸ್ವತ ಲೋಕಕ್ಕೆ ಅರ್ಪಿಸಿದೆ. ಎಲ್. ಬಸವರಾಜು ಅವರ ಪಂಪ ಭಾರತ, ಸರಳ ಅಜಿತ ಪುರಾಣ, ಸರಳ ಗದಾಯುದ್ಧ, ನೂರಾರು ಶರಣರ ಸಾವಿರಾರು ವಚನಗಳು, ಬಸವಪೂರ್ವ ವಚನಕಾರರು, ಕವನ ಕೂಡಲ ಸಂಗಮ ಮುಂತಾಗಿ ಇಪ್ಪತ್ಮೂರು ಕೃತಿಗಳನ್ನು ಪ್ರಕಟಿಸಿದೆ.

ಕಿನ್ನುಡಿಯ ಬೆಳಕಲ್ಲಿ, ಸೋರೇಬುರುಡೆ, ಬುಡಬೆಳ್ಳಿ ನಡುಪಚ್ಚೆ ಗೊನೆಮುತ್ತು, ಎಲೆನಕ್ಕು ಅಡಿಕೆ ಮಾತಾಡಿ ಸುಣ್ಣ ಕುಣಿದಾಗ, ಗಡಗದಲೆ ಗಂಗಾಧರಶಾಸ್ತ್ರಿ ಇತ್ಯಾದಿ ಹಲವು ನಾಟಕಗಳ ನಿರ್ಮಾಣ ಟ್ರಸ್ಟ್‌ನ ರಂಗಪ್ರೀತಿಯ ದ್ಯೋತಕವೇ ಸರಿ. ಯುವ ಕಲಾವಿದರ ಕುಂಚಕಲೆ ಪ್ರೋತ್ಸಾಹದ ಸಲುವಾಗಿ ಕಲಾಪ್ರದರ್ಶನಗಳನ್ನು ಏರ್ಪಡಿಸಿದ ದಾಖಲೆಗಳಿವೆ.

ನಾಡಿನ ಜಾನಪದ ಕಲೆಗಳ ಪುನರುಜ್ಜೀವನದ ಸಲುವಾಗಿ ಮುದ್ದುಶ್ರೀ ಉತ್ಸವದ ಹೆಸರಿನಲ್ಲಿ ಪ್ರತೀ ವರ್ಷ ಮುನ್ನೂರಕ್ಕೂ ಹೆಚ್ಚು ಕಲಾವಿದರನ್ನು ಕಲೆಹಾಕಿ ಉತ್ಸವಗಳನ್ನು ಏರ್ಪಡಿಸುತ್ತಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹೀಗೆ ರಾಜ್ಯ ಹೊರರಾಜ್ಯಗಳ ನೂರಾರು ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪ್ರಸ್ತುತ ಕರ್ನಾಟಕ ಬಯಲಾಟ ಅಕಾಡಮಿಯ ಸಹಯೋಗದಲ್ಲಿ ಗುರುಶಿಷ್ಯ ಪರಂಪರೆ ಯೋಜನೆಯಡಿ ದೊಡ್ಡಾಟ ತರಬೇತಿ ಮತ್ತು ಪ್ರದರ್ಶನಕ್ಕೆ ಸಿದ್ಧವಾಗಿದೆ. ಈಗಾಗಲೇ ದಕ್ಷಿಣ ಕನ್ನಡದ ಬಯಲು ಸೀಮೆಯ ಹದಿನೈದು ಯುವಕ-ಯುವತಿಯ ರನ್ನು ಕಲೆಹಾಕಿ, ತರಬೇತಿಯ ಪ್ರಕ್ರಿಯೆಗಳು ಆರಂಭಗೊಳ್ಳುತ್ತಿರುವುದು ಟ್ರಸ್ಟ್‌ನ ಕಿರೀಟಕ್ಕೆ ಮತ್ತೊಂದು ಗರಿಯಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದು ಜಾನಪದದಲ್ಲಿ ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ತರಗತಿಗಳನ್ನು ಆರಂಭಿಸುತ್ತಿದೆ. ಇಫ್ರೋ ಜಾನಪದ ಮಹಾವಿದ್ಯಾನಿಲಯ ಕರ್ನಾಟಕದ ಜಾನಪದ ಅಧ್ಯಯನ ಕ್ಷೇತ್ರದ ಮುನ್ನಡೆಯುವಲ್ಲಿ ಇದು ಪ್ರಮುಖ ಹೆಜ್ಜೆ. ಹತ್ತು ಹಲವು ಕನಸುಗಳನ್ನು ಹೊತ್ತಿರುವ ಕೆಎಸ್‌ಎಂ ಟ್ರಸ್ಟ್ ತನ್ನದೇ ವಸ್ತು ಸಂಗ್ರಹಾಲಯ, ಗ್ರಂಥಾಲಯ, ಹೋಂ ಥಿಯೇಟರ್‌ಗಳ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ದಕ್ಷಿಣ ಕರ್ನಾಟಕದಲ್ಲಿ ಮೈದುಂಬಿಕೊಂಡು ಬೆಳೆಯುತ್ತಾ ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಪರಿಣಾಮಕಾರಿಯಾದ ರಚನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಸ್ಥೆಯು ಕನ್ನಡಿಗರ ಹೆಮ್ಮೆಯ ತಾಣವಾಗುವತ್ತ ಸಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News