“ಬಿಜೆಪಿ ಗೆದ್ದರೆ ನಿಮಗೆ ಭಡ್ತಿ”: ಕಿರಿಯ ಅಧಿಕಾರಿಗೆ ಜಿಲ್ಲಾ ಕಲೆಕ್ಟರ್ ಆಫರ್?

Update: 2019-01-19 13:40 GMT

#ಜೈತ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಸುತ್ತ ಅನುಮಾನದ ಹುತ್ತ

ಭೋಪಾಲ್, ಜ.19: ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವಂತೆ ಜಿಲ್ಲಾ ಕಲೆಕ್ಟರ್ ಒಬ್ಬರು ಉಪ ಜಿಲ್ಲಾ ಕಲೆಕ್ಟರ್ ಗೆ ಸೂಚನೆ ನೀಡುತ್ತಿರುವ ವಾಟ್ಸ್ ಆ್ಯಪ್ ಚಾಟ್ ಒಂದು ವೈರಲ್ ಆಗಿದೆ.

ಜಿಲ್ಲಾ ಕಲೆಕ್ಟರ್ ಅನುಭಾ ಶ್ರೀವಾಸ್ತವ ಮತ್ತು ಉಪ ಕಲೆಕ್ಟರ್ ಪೂಜಾ ತಿವಾರಿಯವರ ನಡುವಿನ ವಾಟ್ಸ್ ಆ್ಯಪ್ ಚಾಟ್ ನ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ  ವೈರಲ್ ಆಗುತ್ತಿದೆ.

ನವೆಂಬರ್ 28ರಂದು ಇಲ್ಲಿನ ಜೈತ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದ್ದು, ಕಾಂಗ್ರೆಸ್ ಸೋಲನುಭವಿಸಿತ್ತು. ಇದೀಗ ಇಲ್ಲಿ ಮರುಚುನಾವಣೆ ನಡೆಸಬೇಕು ಎಂದು ಆಗ್ರಹಿಸಲು ಕಾಂಗ್ರೆಸ್ ಮುಂದಾಗಿದೆ.

ಆದರೆ ಈ ಆರೋಪಗಳನ್ನು ಇಬ್ಬರು ಅಧಿಕಾರಿಗಳೂ ನಿರಾಕರಿಸಿದ್ದು, ವೈರಲ್ ಆಗಿರುವ ಸ್ಕ್ರೀನ್ ಶಾಟ್ ಗಳು ನಕಲಿ ಎಂದು ಪೂಜಾ ತಿವಾರಿ ಹೇಳಿದ್ದಾರೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗುವುದಕ್ಕೆ ಕೆಲ ಗಂಟೆಗಳ ಮೊದಲು ಬಿಜೆಪಿ ಹಿನ್ನಡೆಯಲ್ಲಿದ್ದಾಗ , “ಬಿಜೆಪಿಯನ್ನು ಗೆಲ್ಲಿಸಬೇಕು” ಎಂದು ಶ್ರೀವಾಸ್ತವ ಅವರು ಪೂಜಾ ತಿವಾರಿಯವರಿಗೆ ಕಳುಹಿಸಿದ ಸಂದೇಶಗಳು ಸ್ಕ್ರೀನ್ ಶಾಟ್ ಗಳಿವು ಎಂದು ಆರೋಪಿಸಲಾಗಿದೆ.

“ಬಿಜೆಪಿ ಗೆಲ್ಲಲು ಸಹಾಯ ಮಾಡಿದರೆ ನಿಮ್ಮನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ಭಡ್ತಿ ನೀಡಲಾಗುವುದು” ಎಂದು ಶ್ರೀವಾಸ್ತವ ಅವರು ತಿವಾರಿಯವರಿಗೆ ಆಮಿಷವೊಡ್ಡಿದ್ದರು ಎಂದು ಆರೋಪಿಸಲಾಗಿದೆ.

“”ಕಲೆಕ್ಟರನ್ನು ವಜಾಗೊಳಿಸಿ, ಜೈತ್ಪುರ್ ನಲ್ಲಿ ಮರುಚುನಾವಣೆ ನಡೆಸಲು ನಾವು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತಿದ್ದೇವೆ” ಎಂದು ಜಿಲ್ಲಾ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News