ಓದಿನಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ: ಪೊಲೀಸ್ ಆಯುಕ್ತ ಸುನೀಲ್ ಕುಮಾರ್

Update: 2019-01-19 16:04 GMT

ಬೆಂಗಳೂರು, ಜ.19: ಯುವ ಜನತೆ ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಅವರಲ್ಲಿ ಸುಪ್ತ ಪ್ರಜ್ಞೆ ಜಾಗೃತವಾಗಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ‘ದೇಶದ ಚಿತ್ತ ಯುವ ಜನರತ್ತ’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ವಿದ್ಯೆ ಎಂಬ ಸಂಪತ್ತಿನ ಮುಂದೆ ಯಾವುದೂ ಶಾಶ್ವತವಲ್ಲ. ಆದ್ದರಿಂದ ಪ್ರತಿಯೊಬ್ಬರು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು. ಹೆಚ್ಚೆಚ್ಚು ಓದಿದಂತೆ ಜ್ಞಾನ ವೃದ್ಧಿಯಾಗುತ್ತದೆ. ಓದಿನಿಂದಾಗಿ ಸಮಾಜದ ಸ್ವಾಸ್ಥ ಆರೋಗ್ಯವಾಗಿರುತ್ತದೆ ಎಂದು ತಿಳಿಸಿದರು.

ಯುವಜನತೆ ದೇಶದ ಅಭಿವೃದ್ಧಿ ಹಾಗೂ ಜೀವನದ ಸಾಕ್ಷಾತ್ಕಾರಕ್ಕೆ ಕನಸು ಕಾಣಬೇಕು. ಕನಸು ನನಸಾಗುವುದಕ್ಕೆ ಕಠಿಣ ಶ್ರಮ, ಶ್ರದ್ಧೆ, ತಾಳ್ಮೆ ಅವಶ್ಯಕ. ಪ್ರಸ್ತುತ ತಂತ್ರಜ್ಞಾನ ಅತಿವೇಗದಿಂದ ಬೆಳೆಯುತ್ತಿದ್ದು, ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಿಂದೆ ಸಮಾಜದಲ್ಲಿ ಆಗು-ಹೋಗುಗಳ ಬಗ್ಗೆ ವೃತ್ತ ಪತ್ರಿಕೆ ಓದಿ ತಿಳಿದುಕೊಳ್ಳಬೇಕಾಗಿತ್ತು. ಆದರೆ, ಆಧುನಿಕ ಯುಗದಲ್ಲಿ ಟಿ.ವಿ., ಮೊಬೈಲ್‌ನಲ್ಲಿ ತಿಳಿಯುವಂತಾಗಿದೆ. ಮೊಬೈಲ್ ಇಲ್ಲದೇ ಜೀವನವಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ ಎಂದರು.

ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಮಾತನಾಡಿ, ಭ್ರಷ್ಟಾಚಾರ ಮುಕ್ತ ಭಾರತ ವಿಷಯವನ್ನಿಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸಲು ನಾನು ಮುಂದಾಗಿದ್ದೆ. ಬೆಂಬಲಕ್ಕಾಗಿ ಕೆಲ ನ್ಯಾಯಧೀಶರು, ನಿವೃತ್ತ ನ್ಯಾಯಾಧೀಶರು, ರಾಜಕಾರಣಗಳ ಹತ್ತಿರ ಹೋದಾಗ ಅವರ್ಯಾರು ಬೆಂಬಲ ನೀಡಲಿಲ್ಲ. ನೀನೊಬ್ಬನೆ ಏನು ಮಾಡಲು ಸಾಧ್ಯವೆಂದು ಪ್ರಶ್ನಿಸಿದರು. ಆದರೂ, ನಾನು ನನ್ನ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡದೇ ವೌಲ್ಯಗಳನ್ನು ತಿಳಿಸಿದರೆ ಅವರೇ ಶ್ರೀಮಂತರಾಗುತ್ತಾರೆ. ಈಗಾಗಲೇ ದಾರ್ಶನಿಕ ತತ್ವಗಳು ಬಹಳಷ್ಟಿದ್ದು, ಅವುಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಯಬೇಕು. ಆಂದೋಲನದ ಮೂಲಕ ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪತ್ರಕರ್ತ ವೆಂಕಟನಾರಾಯಣ ಉಪಸ್ಥಿತರಿದ್ದರು.

ಎಲ್ಲ ರಾಜಕಾರಣಿಗಳು ಕೆಟ್ಟವರಲ್ಲ. ಕೆಲವರು ಒಳ್ಳೆಯವರಿದ್ದು, ಅವರ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ. ಭ್ರಷ್ಟ ರಾಜಕಾರಣಿಗಳು ಅಮಾಯಕ ಜನರಿಗೆ ಕೆಲ ಆಮಿಷ ಒಡ್ಡಿ ಓಟ್ ಪಡೆಯುತ್ತಿದ್ದಾರೆ.

-ಅರಳಿ ನಾಗರಾಜ, ವಿಶ್ರಾಂತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News