ವಿದ್ಯಾರ್ಥಿಗಳು ವಿವೇಕಾನಂದರ ಚಿಂತನೆಗಳನ್ನು ಅರಿಯಲಿ: ಡಾ.ಇರ್ಫಾನ್

Update: 2019-01-19 16:44 GMT

ಬೆಂಗಳೂರು, ಜ.19: ಶಾಲಾ-ಕಾಲೇಜುಗಳು ಸಾಮಾಜಿಕ ಸುಧಾರಕ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಂತಹ ಕಾರ್ಯದಲ್ಲಿ ತೊಡಗಲಿ ಎಂದು ಸೇಂಟ್ ಮೀರಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಇರ್ಫಾನ್ ತಿಳಿಸಿದರು.

 ಶನಿವಾರ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸೇಟ್‌ಮೀರಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳಿಗಷ್ಟೆ ಸೀಮಿತಗೊಳ್ಳದೆ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್, ಭಗತ್‌ಸಿಂಗ್ ಸೇರಿದಂತೆ ಸಮಾಜ ಸುಧಾರಕರ ತತ್ವಗಳನ್ನು ಅರಿಯಬೇಕು ಎಂದು ತಿಳಿಸಿದರು.

ಯುವ ಮುನ್ನಡೆಯ ಸಂಘಟನೆಯ ದೇವರಾಜ್ ಮಾತನಾಡಿ, ಯುವಜನತೆ ತಮ್ಮ ಬದುಕನ್ನು ಜವಾಬ್ದಾರಿಯುತವಾಗಿ ರೂಪಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಮಾಜವನ್ನು ಸೂಕ್ಷ್ಮವಾಗಿ ಅರಿತು, ಯಾವುದು ಒಳ್ಳೆಯದು, ಕೆಟ್ಟದ್ದು ಎಂಬ ಪರಿಜ್ಞಾನವನ್ನು ಬೆಳೆಸಿಕೊಂಡು ಸಮಾಜಕ್ಕೆ ಪೂರಕವಾಗಿ ಜೀವಿಸಬೇಕೆಂದು ತಿಳಿಸಿದರು.

ಯುವಜನತೆಗೆ ಸಮಾಜಪರವಾದ ಚಿಂತನೆಗಳ ಜತೆಗೆ ವೃತ್ತಿ ಮಾರ್ಗದರ್ಶನ ಅಗತ್ಯವಿದೆ. ಸರಕಾರ ಯುವಜ ಆಯೋಗವನ್ನು ರಚಿಸುವ ಮೂಲಕ ಯುವಜನತೆಯ ಹಕ್ಕುಗಳನ್ನು ಸಂರಕ್ಷಿಸಬೇಕಾಗಿದೆ. ಹೀಗಾಗಿ ರಾಜ್ಯಾದ್ಯಂತ ಯುವಜನತೆಯ ಹಕ್ಕುಗಳಿಗೆ ಹೋರಾಟ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಪ್ರಾಧ್ಯಾಪಕ ಸೈಯದ್ ಯೇಜಸ್ ಮಾತನಾಡಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ವಿವೇಕಾನಂದರಿಗೆ ಗೌರವ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News