ರಾಜ್ಯದೆಲ್ಲೆಡೆ ಉದ್ಯೋಗ ಮೇಳ ಆಯೋಜನೆಯಾಗಲಿ: ಕೃಷ್ಣಭೈರೇಗೌಡ

Update: 2019-01-19 17:10 GMT

ಬೆಂಗಳೂರು, ಜ.19: ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಉದ್ಯೋಗ ಮೇಳಗಳು ಸಹಕಾರಿಯಾಗಿದ್ದು, ರಾಜ್ಯದ ನಾನಾ ಭಾಗಗಳಲ್ಲಿ ಮತ್ತಷ್ಟು ಉದ್ಯೋಗ ಮೇಳಗಳನ್ನು ಆಯೋಜಿಸುವ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಶನಿವಾರ ಬ್ಯಾಟರಾಯನಪುರದ ಕೊಡಿಗೇಹಳ್ಳಿಯಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಒದಗಿಸಬೇಕಿದೆ. ಆ ನಿಟ್ಟಿನಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡಲಾಗುತ್ತಿದೆ ಎಂದರು.

ಕಳೆದ 4 ವರ್ಷದಿಂದ ಉದ್ಯೋಗ ಮೇಳಗಳನ್ನು ಆಯೋಜಿಸಿ ಬರಲಾಗುತ್ತಿದೆ. ಪ್ರತಿ ವರ್ಷವೂ ಕನಿಷ್ಠ 2 ರಿಂದ 3 ಸಾವಿರ ಮಂದಿಗೆ ಈ ಮೇಳದಿಂದ ಉದ್ಯೋಗ ದೊರಕಿದೆ. ಈ ಉದ್ಯೋಗ ಮೇಳದಲ್ಲಿ 100ಕ್ಕೂ ಹೆಚ್ಚು ಕಂಪೆನಿಗಳು ಪಾಲ್ಗೊಂಡು ಅರ್ಹ ಯುವಕರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುತ್ತಿವೆ ಎಂದು ಅವರು ಹೇಳಿದರು.

ಅರ್ಹತೆ ಇದ್ದರೂ ಕೆಲವರಿಗೆ ಉದ್ಯೋಗ ಹುಡುಕುವುದು ಕಷ್ಟ. ಹಾಗೆಯೇ ಕಂಪೆನಿಗಳಿಗೂ ಸಹ ದೊಡ್ಡ ಪ್ರಮಾಣದಲ್ಲಿ ಅರ್ಹ ಉದ್ಯೋಗಿಗಳು ಬೇಕು. ಈ ಉದ್ಯೋಗ ಮೇಳಗಳು ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಉದ್ಯೋಗಿಗಳ ಅಗತ್ಯ ಇರುವ ಕಂಪೆನಿಗಳ ವೇದಿಕೆಯಾಗಿ ಕೆಲಸ ಮಾಡುತ್ತವೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅರ್ಹರಿಗೆ ಹಾಗೂ ಸಾಮರ್ಥ್ಯ ಇರುವವರಿಗೆ ಅಷ್ಟೇ ಕೆಲಸ ಸಿಗುತ್ತಿವೆ. ಇದನ್ನು ಅರಿತು ಯುವ ಜನತೆ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.

ಉದ್ಯೋಗ ಮೇಳದಲ್ಲಿ ಇನ್ಫೋಸಿಸ್, ಇಸ್ರೋ, ಐಟಿಸಿ, ಆದಿತ್ಯ ಬಿರ್ಲಾ ಗ್ರೂಪ್ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಗಳು ಪಾಲ್ಗೊಂಡಿದ್ದು, ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ನಾನಾ ಆಮಿಷಗಳನ್ನು ಒಡ್ಡುತ್ತಿದೆ. ಹಾಗಾಗಿ ಬಿಜೆಪಿಯ ಒತ್ತಡಗಳಿಂದ ದೂರವಿರಲು ಅನಿವಾರ್ಯವಾಗಿ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ.

ಕೃಷ್ಣಭೈರೇಗೌಡ, ಸಚಿವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News