ಬಿಜೆಪಿಯ ಎಲ್ಲ ಪ್ರಯತ್ನಗಳು ವಿಫಲ: ಝಮೀರ್‌ ಅಹ್ಮದ್‌ ಖಾನ್

Update: 2019-01-19 17:05 GMT

ಬೆಂಗಳೂರು, ಜ.19: ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷ ಬಿಜೆಪಿ ಮಾಡುವ ಎಲ್ಲ ಪ್ರಯತ್ನಗಳು ವಿಫಲವಾಗಿವೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.

ಶನಿವಾರ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರು ನೀಡುತ್ತಿರುವ ಕಿರುಕುಳ ಕುರಿತು ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಶಾಸಕರು ತಿಳಿಸಿದ್ದಾರೆ ಎಂದರು.

ಕೋಟ್ಯಂತರ ರೂ.ಗಳ ಆಮಿಷವನ್ನು ಶಾಸಕರಿಗೆ ಒಡ್ಡಲಾಗುತ್ತಿದೆ. ಈ ಎಲ್ಲ ವಿಚಾರಗಳ ಕುರಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ವಿವರವಾಗಿ ಚರ್ಚೆ ಮಾಡಲಾಗಿದೆ. ಕಾಂಗ್ರೆಸ್ ಶಾಸಕರು ಯಾರಿಗೂ ಭಯಪಟ್ಟು ರೆಸಾರ್ಟ್‌ಗೆ ಹೋಗಿಲ್ಲ ಎಂದು ಅವರು ಹೇಳಿದರು.

ರೆಸಾರ್ಟ್‌ನಲ್ಲಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡುತ್ತಿದ್ದಾರೆ. ರಾಜ್ಯದ ಬರಪರಿಸ್ಥಿತಿ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ ಎಂದು ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.

ಬಿಜೆಪಿ ನಾಯಕರ ಯಾವ ಪ್ರಯತ್ನಗಳೂ ಯಶಸ್ವಿಯಾಗಿಲ್ಲ. ಆದುದರಿಂದ, ಇಲ್ಲಸಲ್ಲದ ಕಾರಣಗಳನ್ನು ನೀಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದ 16 ಶಾಸಕರು, ನಂತರ 25 ಶಾಸಕರು ನಮ್ಮ ಜೊತೆ ಬರುತ್ತಾರೆ ಎಂದು ಹೇಳುತ್ತಿದ್ದರು. ಆದರೆ, ಅವರಿಂದ 10 ಶಾಸಕರ ಬೆಂಬಲವನ್ನು ತೋರಿಸಲು ಸಾಧ್ಯವಾಗಿಲ್ಲ ಎಂದು ಝಮೀರ್‌ಅಹ್ಮದ್‌ಖಾನ್ ವ್ಯಂಗ್ಯವಾಡಿದರು.

ರಾಜ್ಯ ಸರಕಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಮಾಡಿರುವ ಟೀಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಏನು ಮಾತನಾಡುತ್ತಾರೆ ಅನ್ನೋ ಬಗ್ಗೆ ಅವರಿಗೇ ಜ್ಞಾನ ಇರುವುದಿಲ್ಲ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News