ಕೇಂದ್ರ ಸಚಿವ ರಾಜನಾಥ್‌ಸಿಂಗ್‌ಗೆ ಪ್ರಶ್ನೆಗಳ ಸರಮಾಲೆ ಮುಂದಿಟ್ಟ ಕೆಪಿಸಿಸಿ

Update: 2019-01-19 17:14 GMT

ಬೆಂಗಳೂರು, ಜ.19: ನಿಮ್ಹಾನ್ಸ್ ಸಂಸ್ಥೆಯ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ಗೆ ಟ್ವಿಟರ್‌ನಲ್ಲಿ ಕೆಪಿಸಿಸಿ ಪ್ರಶ್ನೆಗಳ ಸರಮಾಲೆಯನ್ನು ಮುಂದಿಟ್ಟಿದೆ.

ಪ್ರಶ್ನೆಗಳ ಸರಮಾಲೆ:ಹರಿಯಾಣದಲ್ಲಿ ಬಂಧಿಯಾಗಿರುವ 100 ಶಾಸಕರ ಬಿಡುಗಡೆ ಯಾವಾಗ? ಸಂವಿಧಾನಬದ್ಧ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುವುದು ನೈತಿಕವೇ? ಶಾಸಕರಿಗೆ ಒಡ್ಡಿದ ಆಮಿಷ ತಲಾ 60 ಕೋಟಿ ರೂ., ಈ ಹಣದ ಮೂಲವೇನು?

ಬಿಜೆಪಿಯ ಶಾಸಕರು ಗುರುಗ್ರಾಮದ ರೆಸಾರ್ಟ್ ಸೇರಿದ್ದು ನರೇಂದ್ರಮೋದಿಯವರ ರಫೇಲ್ ಹಗರಣದಿಂದ ಎಚ್‌ಎಎಲ್‌ಗೆ ಆದ 30 ಸಾವಿರ ಕೋಟಿ ರೂ.ನಷ್ಟ ವಸೂಲಿಗಾ? ಫಸಲ್ ಬಿಮಾ ಯೋಜನೆಯಲ್ಲಿ ರೈತರಿಂದ ಕೊಳ್ಳೆ ಹೊಡೆದ ಸಾವಿರಾರು ಕೋಟಿ ರೂ. ವಸೂಲಿಗಾ? ಎಂಬ ಪ್ರಶ್ನೆಗಳನ್ನು ಕೆಪಿಸಿಸಿ ರಾಜನಾಥ್‌ಸಿಂಗ್ ಮುಂದಿಟ್ಟಿದೆ.

ಆಪರೇಷನ್ ಕಮಲವೆಂಬ ಸಂವಿಧಾನ ಬಾಹಿರ ಅನೈತಿಕವನ್ನು ಹುಟ್ಟುಹಾಕಿದ ನಿಮ್ಮ ಯೋಗ್ಯತೆ ಜನರಿಗೆ ತಿಳಿದಿದೆ. ಸರಕಾರ ಉರುಳಿಸುವ ಯತ್ನ ವಿಫಲವೆಂದು ಶಾಸಕಾಂಗ ಸಭೆಯ ನಂತರ ಬಿಜೆಪಿ ನಾಯಕರಿಗೆ ಮನವರಿಕೆ ಆದಂತಿದೆ. ಸರಕಾರ ಅಸ್ಥಿರಗೊಳಿಸುವುದಿಲ್ಲ ವಿಪಕ್ಷದಲ್ಲಿ ಕೂರುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ನರೇಂದ್ರಮೋದಿ ಮತ್ತು ಬೇಜವಾಬ್ದಾರಿ ರಾಜ್ಯ ಬಿಜೆಪಿ ಘಟಕದ ಪ್ರಜಾಪ್ರಭುತ್ವ ವಿರೋಧಿ ಕೆಲಸವನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂದು ಕೆಪಿಸಿಸಿ ಟ್ವಿಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News