ಮಗುವನ್ನು ಅಪಹರಿಸಿ 2 ಲಕ್ಷ ರೂ. ಗೆ ಮಾರಾಟ: ಐವರ ಸೆರೆ

Update: 2019-01-19 17:38 GMT

ಬೆಂಗಳೂರು, ಜ.19: ಹನ್ನೊಂದು ತಿಂಗಳ ಮಗುವನ್ನು ಅಪಹರಿಸಿ 2 ಲಕ್ಷ ರೂ. ಹಣಕ್ಕಾಗಿ ತಮಿಳುನಾಡು ಮೂಲದ ದಂಪತಿಗೆ ಮಾರಾಟ ಮಾಡಿದ್ದ ಆರೋಪದಡಿ ಐದು ಮಂದಿಯನ್ನು ಇಲ್ಲಿನ ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ದಂಪತಿ ಥಾಮಸ್ ಪಯಸ್(55), ಈತನ ಪತ್ನಿ ಅರುಣಾ(45), ಜ್ಞಾನಜ್ಯೋತಿ ನಗರದ ಅನುಕುಮಾರ್(43), ಕೆ.ಪಿ.ಅಗ್ರಹಾರದ ಮಂಜುನಾಥ(19) ಮತ್ತು ಮಾಗಡಿ ಮುಖ್ಯರಸ್ತೆಯ ಯೋಗೇಶ್(21) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ರಾಣಿ ಎಂಬುವರು ಬಾಡಿಗೆಗೆ ಹೊಸ ಮನೆಯನ್ನು ಪಡೆದಿದ್ದು, ಸಾಮಾನು ಸಾಗಿಸುವ ಸಲುವಾಗಿ ಜ.16 ರಂದು ರಾತ್ರಿ 8 ಗಂಟೆ ಸಮಯದಲ್ಲಿ ತಮ್ಮ 11 ತಿಂಗಳ ಮಗು ಅನ್ನು ಮನೆಯಲ್ಲಿ ಮಲಗಿಸಿ ಹೊಸ ಮನೆಗೆ ಹೋಗಿದ್ದರು. ಕೆಲ ಸಮಯದ ಬಳಿಕ ಮನೆಗೆ ಬಂದು ನೋಡಿದಾಗ ಮಗು ಕಾಣೆಯಾಗಿತ್ತು ಎನ್ನಲಾಗಿದೆ.

ಗಾಬರಿಯಾದ ರಾಣಿಯವರು ಸ್ಥಳೀಯರನ್ನು ವಿಚಾರಿಸಿದಾಗ ಯಾರೋ ಇಬ್ಬರು ಬೈಕ್‌ನಲ್ಲಿ ಬಂದು ನಿಮ್ಮ ಮಗು ಎತ್ತಿಕೊಂಡು ಹೋದರೆಂದಿದ್ದಾರೆ. ತಕ್ಷಣ ಜ್ಞಾನಭಾರತಿ ಠಾಣೆಗೆ ರಾಣಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಪ್ರವತ್ತವಾಗಿ ಆರೋಪಿಗಳ ಬಗ್ಗೆ ವಿವಿಧ ಮಾಹಿತಿ ಕಲೆ ಹಾಕಿ ಮೊದಲು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಲಕ್ಷಾಂತರ ಹಣಕ್ಕಾಗಿ ಮಗುವನ್ನು ಅಪಹರಿಸಿ ತಮಿಳುನಾಡು ಮೂಲದ ದಂಪತಿಗೆ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಗು ಪಡೆದಿದ್ದ ದಂಪತಿ ಕಾರಿನಲ್ಲಿ ತಮಿಳುನಾಡಿನ ತೂತುಕುಡಿಗೆ ಕೊಂಡೊಯ್ದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ತಮಿಳುನಾಡಿಗೆ ತೆರಳಿ ದಂಪತಿಯನ್ನು ಬಂಧಿಸಿ ಮಗುವನ್ನು ಪತ್ತೆ ಮಾಡಿ ಕರೆತರಲು ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News