ಇಂದಿಗೂ ಜಾತಿ ಪದ್ಧತಿ ಜೀವಂತ: ಸಚಿವ ಶಿವಶಂಕರರೆಡ್ಡಿ

Update: 2019-01-19 17:45 GMT

ಬೆಂಗಳೂರು, ಜ.19: ದೇಶದಲ್ಲಿ ಇಂದಿಗೂ ಜಾತಿ ಪದ್ಧತಿ, ವೌಢ್ಯಾಚರಣೆ ಜೀವಂತವಾಗಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದ್ದಾರೆ. ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

15-16 ನೇ ಶತಮಾನದಲ್ಲಿ ಆಂಧ್ರಪ್ರದೇಶದಲ್ಲಿ ವೇಮನ, ಕರ್ನಾಟಕದಲ್ಲಿ ಸರ್ವಜ್ಙ, ತಮಿಳುನಾಡಿನಲ್ಲಿ ತಿರುವಳ್ಳುವರ್ ಸೇರಿದಂತೆ ಅನೇಕರು ವೌಢ್ಯಾಚರಣೆ, ಜಾತಿ ಪದ್ಧತಿಗಳ ವಿರುದ್ಧ ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದರು. ಅಲ್ಲದೆ, ಅವುಗಳ ವಿರುದ್ಧ ಸಮರವನ್ನೇ ಸಾರಿದರು. ಆದರೆ, ಇಂದಿಗೂ ಈ ಪದ್ಧತಿಗಳು ಜೀವಂತವಾಗಿರುವುದು ಬೇಸರದ ಸಂಗತಿ ಎಂದರು.

ವೇಮನ ಮಾನವೀಯತೆಯ ಮಾರ್ಗದರ್ಶನ ನೀಡಿದ್ದಾರೆ. ಮನುಷ್ಯ ಬದುಕುವುದನ್ನು ಕಲಿಸಿದ್ದಾರೆ. ಆದರೆ, ಇಂದಿನ ನಮ್ಮ ಸಮಾಜದಲ್ಲಿ ಅವರ ಆದರ್ಶಗಳನ್ನು ಯಾರೂ ಪರಿಗಣಿಸುತ್ತಿಲ್ಲ ಎಂದ ಅವರು, ಸಮಾನತೆ ಹಾಗೂ ಮಾನವೀಯ ವೌಲ್ಯಗಳನ್ನು ರೂಢಿಸಿಕೊಂಡಾಗಲೇ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ನುಡಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಯಾವುದೇ ಸಮುದಾಯ ಒಗ್ಗಟ್ಟಿನಿಂದ ಇದ್ದರೆ ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ಹಿಂದೆ ರೆಡ್ಡಿ ಸಮುದಾಯ ಒಗ್ಗಟ್ಟಿನಲ್ಲಿರಲಿಲ್ಲ. ಆದರೆ, ಈಗ ಅದಕ್ಕೆ ವಿರುದ್ಧವಾಗಿ ಎಲ್ಲರೂ ಒಂದಾಗುತ್ತಿದ್ದಾರೆ ಎಂದ ಅವರು, ರೆಡ್ಡಿ ಸಂಘದ ಭೂಮಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಇದ್ದ ತೊಡಕುಗಳು ಪರಿಹಾರವಾಗಿದೆ. ಇದೀಗ ಕಟ್ಟಡ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಾವಣಗೆರೆಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಮಾಜಿ ಮೇಯರ್‌ಗಳಾದ ನಟರಾಜ್, ಮಂಜುನಾಥರೆಡ್ಡಿ, ಸಾಹಿತಿ ಕೃಷ್ಣಶಾಸ್ತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News