ಸಿರಿಧಾನ್ಯ ಮೇಳ ಭಾಗಶಃ ಯಶಸ್ವಿ: ಸಚಿವ ಶಿವಶಂಕರರೆಡ್ಡಿ

Update: 2019-01-19 17:47 GMT

ಬೆಂಗಳೂರು, ಜ.19: ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಸಾವಯವ ಮತ್ತು ಸಿರಿಧಾನ್ಯ ಮೇಳ ಭಾಗಶಃ ಯಶಸ್ವಿಯಾಗಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಆಯೋಜಿಸಿದ್ದ ಗ್ರಾಹಕ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಸಿರಿಧಾನ್ಯ ಮೇಳವು ರೈತರಿಗೆ ಉತ್ತೇಜನ, ಕೃಷಿ ಗ್ರಾಹಕರಿಗೆ ಜಾಗೃತಿ, ಖರೀದಿದಾರರಿಗೆ ವೇದಿಕೆಯಾಗಿದೆ. ಇಲಾಖೆಯಿಂದ ಸಾವಯವ ಕೃಷಿ ಸಂಬಂಧಿಸಿದ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಅಪರ ಕೃಷಿ ನಿರ್ದೇಶಕ ರಾಮಚಂದ್ರಯ್ಯ ಮಾತನಾಡಿ, ಸಾವಯವ ಕೃಷಿ ಬಗ್ಗೆ ರೈತರಿಗೆ ಪ್ರೋತ್ಸಾಹಿಸಲಾಗುತ್ತಿದ್ದು, ಗ್ರಾಹಕರಿಗೆ ಜಾಗೃತಿ ಮೂಡಿಸಲು ಮೇಳ ಆಯೋಜಿಸಲಾಗಿದ್ದು, ಎರಡು ದಿನದಲ್ಲಿ ಲಕ್ಷಾಂತರ ಗ್ರಾಹಕರು ಮೇಳದಲ್ಲಿ ಭಾಗವಹಿಸಿದ್ದಾರೆ ಎಂದರು.

ಕೈಪಿಡಿ ಬಿಡುಗಡೆ: ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ಸಾವಯವ ತಾಂತ್ರಿಕ ಕೈಪಿಡಿಯನ್ನು ಸಚಿವ ಶಿವಶಂಕರರೆಡ್ಡಿ ಬಿಡುಗಡೆಗೊಳಿಸಿದರು. ಈ ಕೈಪಿಡಿಯಲ್ಲಿ ಬೀಜದ ಪ್ರಮಾಣ, ಸಾವಯವದ ಪ್ರಮಾಣ, ಮಾನದಂಡ ಸೇರಿ ತಾಂತ್ರಿಕ ಅಂಶಗಳು ತಿಳಿಸಲಾಗಿದೆ. ಇದನ್ನು ಕೃಷಿ ಪದವೀಧರ ಅಧಿಕಾರಿಗಳ ಸಂಘದಿಂದ ಕೈಪಿಡಿ ಹೊರಬಂದಿದೆ.

ಚಿತ್ರಕಲಾ ಸ್ಪರ್ಧೆ ವಿಜೇತರು: ಮಕ್ಕಳಿಗಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ 5ರಿಂದ 8 ವರ್ಷದ ಮಕ್ಕಳ ತಂಡದಲ್ಲಿ ಅರ್ಷಿತಾ ಪ್ರಥಮ, ಕೃಪಾ ಕೃಷ್ಣಕುಮಾರ್ ದ್ವಿತೀಯ, ಸಾನ್ವಿ ತೃತೀಯ, ಮಸ್ಕಾನ್, ಅಮಿಶ್, ಲಿವಿತ್, ರೋಹನ್ ಕುಮಾರ್, ಶಿವು ಸಮಾಧಾನಕರ ಬಹುಮಾನ ಪಡೆದರು.

9ರಿಂದ 16 ವರ್ಷದ ಮಕ್ಕಳ ತಂಡದಲ್ಲಿ ಧವತ್ ಪ್ರಥಮ, ಲಹರಿ ದ್ವಿತೀಯ, ಚರಿಶ್ಮಿ ತೃತೀಯ, ಕೃತಿಕಾ, ಭೂಮಿಕಾ, ಮನಸ್ವಿನಿ, ಕೌಶಿಕಾ, ಪ್ರತ್ವಿಷಾ ಸಮಾಧಾನಕರ ಬಹುಮಾನ ಪಡೆದರು. ಪ್ರಥಮ ಬಹುಮಾನಕ್ಕೆ 3 ಸಾವಿರ ರೂ., ದ್ವಿತೀಯ 2 ಸಾವಿರ ರೂ., ತೃತೀಯ 1 ಸಾವಿರ ರೂ., ಸಮಾಧಾನಕರ ಬಹುಮಾನಕ್ಕೆ 500 ರೂ., ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News