ಪ್ರತಿಪಕ್ಷಗಳನ್ನು ಮುನ್ನಡೆಸಲು ಕಾಂಗ್ರೆಸ್ ಅತ್ಯಂತ ಸೂಕ್ತ ಪಕ್ಷ: ತೇಜಸ್ವಿ ಯಾದವ್

Update: 2019-01-20 14:40 GMT

ಹೊಸದಿಲ್ಲಿ,ಜ.20: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಹೋರಾಟವನ್ನು ಮುನ್ನಡೆಸಲು ಕಾಂಗ್ರೆಸ್ ಅತ್ಯಂತ ಸೂಕ್ತವಾಗಿದೆ ಎಂದು ಆರ್‌ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ ಅವರು ರವಿವಾರ ಹೇಳಿದರು.

ಕಾಂಗ್ರೆಸ್ ನಾಯಕತ್ವದ ಪಾತ್ರವನ್ನು ‘ಉದಾರ ಹೃದಯ’ದಿಂದ ನಿರ್ವಹಿಸಬೇಕು ಮತ್ತು ಪ್ರಾದೇಶಿಕ ಪಕ್ಷಗಳಿಗೆ ಅವುಗಳ ಅಜೆಂಡಾಗಳ ಸಹಿತ ಅವಕಾಶ ಕಲ್ಪಿಸಬೇಕು ಎಂದು ಅವರು ಹೇಳಿದರು.

ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಯನ್ನು ಪ್ರಶಂಸಿಸಿದ ಅವರು,ಮೈತ್ರಿಯ ಬಳಿಕ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರೊಂದಿಗೆ ತನ್ನ ಸೌಜನ್ಯದ ಭೇಟಿಗಳನ್ನು ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡ ಒತ್ತಡ ತಂತ್ರಗಳೆಂದು ಪರಿಗಣಿಸಬಾರದು ಎಂದು ಒತ್ತಿ ಹೇಳಿದರು.

ಕಾಂಗ್ರೆಸ್ ದೇಶದ ಅತ್ಯಂತ ಹಳೆಯ ಮತ್ತು ಹಾಲಿ ದೇಶಾದ್ಯಂತ ಅಸ್ತಿತ್ವ ಹೊಂದಿರುವ ಎರಡನೇ ಅತ್ಯಂತ ದೊಡ್ಡ ಪಕ್ಷವಾಗಿರುವುದರಿಂದ ಅದು ಪ್ರತಿಪಕ್ಷಗಳ ಪೈಕಿ ಗರಿಷ್ಠ ಸ್ಥಾನಗಳನ್ನು ಗೆಲ್ಲಬಲ್ಲ ಅತ್ಯಂತ ಸುಭದ್ರ ಸ್ಥಿತಿಯಲ್ಲಿದೆ ಎಂದರು.

2014ರ ಲೋಕಸಭಾ ಚುನಾವಣೆಯಲ್ಲಿ ಸಂಭಾವ್ಯ ಪ್ರತಿಪಕ್ಷ ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್ 44,ತೃಣಮೂಲ ಕಾಂಗ್ರೆಸ್ 34,ಎಸ್‌ಪಿ 5 ಮತ್ತು ಆರ್‌ಜೆಡಿ 4 ಸ್ಥಾನಗಳನ್ನು ಗೆದ್ದಿದ್ದವು.

ಕಾಂಗ್ರೆಸ್ ಪಕ್ಷವು ಮೈತ್ರಿಕೂಟ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಲ್ಲಿ ಅಥವಾ ಮೈತ್ರಿಕೂಟದ ನಾಯಕತ್ವ ವಹಿಸುವಲ್ಲಿ ಯಾವುದೇ ತಪ್ಪಿಲ್ಲ,ಆದರೆ ಪ್ರತಿಯೊಂದೂ ರಾಜ್ಯವು ವಿಭಿನ್ನ ತಳಮಟ್ಟದ ವಾಸ್ತವತೆಗಳನ್ನು ಹೊಂದಿದೆ ಎನ್ನುವುದನ್ನು ಅದು ಒಪ್ಪಿಕೊಳ್ಳಬೇಕು. ತನಗೆ ಸುಭದ್ರ ನೆಲೆಯಿಲ್ಲದ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ದಾಳಿಯಲ್ಲಿ ಮುಂಚೂಣಿ ಪಾತ್ರವನ್ನು ನಿರ್ವಹಿಸಲು ಅದು ಪ್ರಾದೇಶಿಕ ಪಕ್ಷಗಳಿಗೆ ಅವಕಾಶ ನೀಡಬೇಕು. ಮತಗಳನ್ನು ಕ್ರೋಢೀಕರಿಸುವಲ್ಲಿ ಅವು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ ಎಂದು ಯಾದವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News