ಕಾರ್ಮಿಕರ ಕೊಳೆತ ಶವಗಳನ್ನು ತೆಗೆದುಕೊಡಿ: ರಕ್ಷಣಾ ತಂಡಗಳಿಗೆ ಕುಟುಂಬಗಳ ಆಗ್ರಹ

Update: 2019-01-20 15:45 GMT

ಶಿಲಾಂಗ್,ಜ.19: ಮೇಘಾಲಯದ ಪೂರ್ವ ಜೈಂಟಿಯಾ ಜಿಲ್ಲೆಯಲ್ಲಿ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಡಿ.13ರಿಂದ ಸಿಕ್ಕಿಹಾಕಿಕೊಂಡಿರುವ 15 ಕಾರ್ಮಿಕರ ಪೈಕಿ ನಾಲ್ವರ ಕುಟುಂಬಗಳು ತಾವು ಅಂತ್ಯಸಂಸ್ಕಾರವನ್ನು ನೆರವೇರಿಸುವಂತಾಗಲು ಮುಳುಗುತಜ್ಞರು ಪತ್ತೆಹಚ್ಚಿರುವ ಕೊಳೆತ ಶವವನ್ನು ತೆಗೆದುಕೊಡುವಂತೆ ರಕ್ಷಣಾ ಕಾರ್ಯಕರ್ತರನ್ನು ಆಗ್ರಹಿಸಿವೆ.

ಭಾರತೀಯ ನೌಕಾಪಡೆಯು ಗುರುವಾರ ಬೆಳಿಗ್ಗೆ ಸುಮಾರು 210 ಅಡಿ ಆಳದಲ್ಲಿ ಶವವೊಂದನ್ನು ಪತ್ತೆ ಹಚ್ಚಿತ್ತು. ಮೇಲಕ್ಕೆ ತರುವಾಗ ಅದು ಚೂರುಚೂರುಗಳಾಗುವ ಸಾಧ್ಯತೆಯಿರುವುದರಿಂದ ಅದನ್ನು ಪರೀಕ್ಷಿಸಲು ರಕ್ಷಣಾ ತಂಡಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಡಬ್ಲು.ಇಂಗ್ತಿ ತಿಳಿಸಿದರು.

“ಶವದ ಒಂದು ಬೆರಳು ಅಥವಾ ಮೂಳೆ ಸಿಕ್ಕಿದರೂ ನಮಗೆ ಸಾಕು. ಮೃತರನ್ನು ಗೌರವದಿಂದ ದಫನ್ ಮಾಡಲಾದರೂ ನಮಗೆ ಸಾಧ್ಯವಾಗುತ್ತದೆ” ಎಂದು ಗಣಿಯಲ್ಲಿ ಸಿಕ್ಕಿಕೊಂಡಿರುವ 20ರ ಹರೆಯದ ಮುನೀರುಲ್ ಇಸ್ಲಾಮ್‌ನ ಸೋದರ ಮಾಣಿಕ್ ಅಲಿ ಹೇಳಿದ. ಅಲಿ ಗಣಿಯಲ್ಲಿ ಸಿಕ್ಕಿಕೊಂಡಿರುವ ಅಸ್ಸಾಮಿನ ಚಿರಂಗ್ ಜಿಲ್ಲೆಯ ಮೂವರು ಕಾರ್ಮಿಕರ ಕುಟುಂಬಗಳನ್ನು ಪ್ರತಿನಿಧಿಸುತ್ತಿದ್ದಾನೆ. ವೀಡಿಯೊ ಫೂಟೇಜ್‌ನ್ನು ವೀಕ್ಷಿಸಲು ಅಧಿಕಾರಿಗಳು ಅಲಿ ಮತ್ತು ಹೊಜೈ ಜಿಲ್ಲೆಯಿಂದ ಅಮೀನುಲ್ ಉದ್ದೀನ್ ಅವರನ್ನು ಕರೆಸಿದ್ದಾರೆ. ಅಮೀನುಲ್ನ ಅಣ್ಣ ಕುಟಿ ಮಿಯಾ ಗಣಿಯಲ್ಲಿ ಸಿಲುಕಿದ್ದಾನೆ. ಆದರೆ ವೀಡಿಯೊದಲ್ಲಿ ಕಂಡ ಶವವು ಊದಿಕೊಂಡಿದ್ದು ಗುರುತಿಸಲು ಅವರಿಗೆ ಸಾದ್ಯವಾಗಿಲ್ಲ.

ಕುಟುಂಬಗಳು ಬಯಸಿರುವಂತೆ ಶವಗಳನ್ನು ಅಖಂಡ ಸ್ಥಿತಿಯಲ್ಲಿ ಹೊರಗೆ ತೆಗೆಯಲು ಸಾಧ್ಯವಿಲ್ಲ,ಅವರಿಗೆ ನೌಕಾಪಡೆಯ ದೂರನಿಯಂತ್ರಿತ ವಾಹನದಿಂದ ತೆಗೆಯಲಾಗಿದ್ದ ವಿಡಿಯೋವನ್ನು ತೋರಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಎಫ್.ಎಂ.ದೋಪ್ತ್ ತಿಳಿಸಿದರು.

ಆದರೆ ಛಿದ್ರಗೊಂಡ ಸ್ಥಿತಿಯಲ್ಲಿದ್ದರೂ ಶವಗಳು ತಮಗೆ ಬೇಕು ಎಂದು ಅಲಿ ಮತ್ತು ಅಮೀನುಲ್ ಆಗ್ರಹಿಸಿದ್ದಾರೆ. “ಕುರ್‌ಆನ್‌ಗೆ ಅನುಗುಣವಾಗಿನಾವು ಶವಗಳನ್ನು ದಫನ್ ಮಾಡಬೇಕು. ನನ್ನ ಸೋದರನ ಬೆರಳಿನಲ್ಲಿಯ ಉಂಗುರ ಕಂಡರೂ ನಾನು ಆತನನ್ನು ಗುರುತಿಸಬಲ್ಲೆ” ಎಂದು ಅಲಿ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News