ಈಗಿನ ಸಿನೆಮಾ ಸಂಸ್ಕೃತಿ ವಿಕೃತವನ್ನು ಸೃಷ್ಟಿಸುತ್ತಿದೆ: ರಂಗಕರ್ಮಿ ಎನ್.ಕೆ.ವರದರಾಜು

Update: 2019-01-20 18:27 GMT

ಬೆಂಗಳೂರು, ಜ.20: ಸಿನೆಮಾ ಜನ ಸಾಮಾನ್ಯರನ್ನು ತಲುಪುವ ಶಕ್ತಿಶಾಲಿ ಮಾಧ್ಯಮವಾಗಿದ್ದು, ನೋಡುಗರ ಮನಸ್ಸನ್ನು ಅರಳಿಸಬೇಕೇ ಹೊರತು ಕೆಡಿಸಬಾರದು. ಆದರೆ, ಈಗಿನ ಸಿನೆಮಾ ಸಂಸ್ಕೃತಿ ವಿಕೃತವನ್ನು ಸೃಷ್ಟಿ ಮಾಡುತ್ತಿದೆ ಎಂದು ರಂಗಕರ್ಮಿ ಎನ್.ಕೆ.ವರದರಾಜು ಅಭಿಪ್ರಾಯಪಟ್ಟರು.

ರವಿವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತ ಶಶಿಧರ ಚಿತ್ರದುರ್ಗ ನಿರೂಪಣೆಯ ಚಿತ್ರ- ಕತೆ, ಶೂಟಿಂಗ್ ಸೋಜಿಗ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಿಂದಿನ ಕಾಲದ ಸಿನೆಮಾಗಳು ಸಾಮಾಜಿಕ ಮೌಲ್ಯವನ್ನು ಬಿಂಬಿಸುವಂತೆ ತೆರೆಯ ಮೇಲೆ ಮೂಡಿಬರುತ್ತಿದ್ದವು. ಇತ್ತೀಚಿಗೆ ಇಂತಹ ಸಿನೆಮಾಗಳ ಸಂಖ್ಯೆ ಕಡಿಮೆಯಾಗಿದ್ದು, ವಿಕೃತಗಳೇ ಸಿನೆಮಾ ಬಂಡವಾಳವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯ ಚಲನಚಿತ್ರಕ್ಕೆ ಮಹಾನ್ ಕಲಾವಿದನನ್ನೂ ಕೊಟ್ಟ ಚಿತ್ರ ಬೇಡರ ಕಣ್ಣಪ್ಪವಾಗಿದ್ದು, ಅಂದಿನಿಂದ ಹಿಂದಿನವರೆಗೂ ಕನ್ನಡ ಚಲನಚಿತ್ರ ರಂಗ ಅನೇಕ ಏಳು- ಬೀಳುಗಳನ್ನು ಕಂಡಿದೆ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ತಿಥಿ ಸಿನೆಮಾ ವಾಸ್ತವಾಂಶಗಳನ್ನೇ ಪ್ರದಾನವಾಗಿಸಿಕೊಂಡು ನಿರ್ಮಾಣವಾದರಿಂದ, ಇದು ಪಾಥೇರ್ ಪಂಚಾಲಿಯನ್ನು ನೆನಪಿಸಿತು ಎಂದು ಹೇಳಿದರು.

ಲೇಖಕ ಚಂದ್ರಶೇಖರ್ ಆಲೂರು ಮಾತನಾಡಿ, ಹಿರಿಯ ಸ್ಥಿರಚಿತ್ರ ಛಾಯಾ ಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಹಾಗೂ ಪ್ರಗತಿ ಅಶ್ವತ್ಥ ನಾರಾಯಣರವರು ತೆಗೆದಿರುವ ಒಂದೊಂದು ಚಿತ್ರವೂ ಒಂದೊಂದು ಕತೆಯನ್ನು ಹೇಳುತ್ತವೆ. ಹಿಂದೆ ಸಿನೆಮಾ ನಿರ್ಮಿಸಿದ ಮೇಲೆ ದೃಶ್ಯವನ್ನು ನೋಡಬೇಕೆಂದರೇ, ಹತ್ತು ದಿನಗಳವರೆಗೂ ಕಾಯಬೇಕಿತ್ತು. ಆಗ ಸ್ಥಿರಚಿತ್ರಗಳೇ ಎಲ್ಲ ಸಿನೆಮಾ ದೃಶ್ಯಗಳನ್ನು ತಿಳಿಸುತ್ತಿದ್ದವು ಎಂದು ತಿಳಿಸಿದರು.

ಸ್ಥಿರಚಲನಚಿತ್ರಕ್ಕೆ ಅದರದೇ ಆದ ಚಾರಿತ್ರಿಕ ಮೌಲ್ಯವಿದೆ. ಅದನ್ನು ಗಮನಿಸಿದ ಶಶಿಧರ್ ಚಿತ್ರದುರ್ಗ ಫೇಸ್‌ಬುಕ್‌ನ್ನು ವರದಾನವಾಗಿ ಮಾಡಿಕೊಂಡು ಭವಾನಿ ಲಕ್ಷ್ಮೀನಾರಾಯಣ ಹಾಗೂ ಪ್ರಗತಿ ಅಶ್ವತ್ಥ ನಾರಾಯಣರವರ ಸ್ಥಿರಚಿತ್ರಗಳಿಗೆ ಟಿಪ್ಪಣಿಯನ್ನು ಬರೆಯುತ್ತಾ, ಸಂಪೂರ್ಣ ಮಾಹಿತಿ ನೀಡುತ್ತಿದ್ದು, ಅಮೂಲ್ಯವಾದ ಸಂಗ್ರಹ ಮಾಡುವ ಮೂಲಕ ಸ್ಥಿರಚಿತ್ರಗಳನ್ನು ಇಂದಿನ ಪೀಳಿಗೆಯವರಿಗೆ ತಲುಪಿಸಲು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಬಿ.ಸರೋಜಾ ದೇವಿಯಿಂದ ಮಾಸ್ಟರ್ ಆನಂದ್‌ವರೆಗೂ ಸುಮಾರು 150ರಿಂದ 200 ಸ್ಥಿರಚಿತ್ರಗಳನ್ನು ಶೂಟಿಂಗ್ ಸೋಜಿಗದಲ್ಲಿ ಬಳಸಿಕೊಳ್ಳಲಾಗಿದೆ. ಒಂದು ಚಲನಚಿತ್ರ ಎಂದರೆ ಕೇವಲ ನಟಿ- ನಟಿಯರು ಮಾತ್ರ ಇರುವುದಿಲ್ಲ. ತೆರೆಯ ಮುಂದೆಯೂ, ತೆರೆಯ ಹಿಂದೆಯೂ ಅನೇಕ ಮಂದಿ ಕೆಲಸ ಮಾಡಿರುತ್ತಾರೆ. ಆ ಎಲ್ಲ ಅಂಶಗಳನ್ನು ತುಂಬಾ ಸರಳವಾಗಿ ಚಿತ್ರ- ಕತೆ (ಸಿನಿ ಹಾದಿಯಲ್ಲೊಂದು ಪಯಣ), ಶೂಟಿಂಗ್ ಸೋಜಿಗ ಪುಸ್ತಕದಲ್ಲಿ ಶಶಿಧರ್ ದಾಖಲಿಸಿದ್ದಾರೆ ಎಂದರು.

ಸಮಾರಂಭದಲ್ಲಿ ಹಿರಿಯ ಕಲಾವಿದೆ ಎನ್.ಎಂ.ಲಕ್ಷ್ಮೀದೇವಿ, ಬಿ.ಜಯಾ, ರಂಗಕರ್ಮಿ ಎನ್.ಕೆ.ವರದರಾಜ್, ಭವಾನಿ ಲಕ್ಷ್ಮೀನಾರಾಯಣ ಹಾಗೂ ಪ್ರಗತಿ ಅಶ್ವತ್ಥ ನಾರಾಯಣರವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News