ಕೊಲಾಜ್ ಮೂಲಕ ಮೋದಿ ಸಾಧನೆ ಹೊಗಳಲು ಹೋಗಿ ನಗೆಪಾಟಲಿಗೀಡಾದ ರಾಜ್ಯ ಬಿಜೆಪಿ

Update: 2019-01-21 08:36 GMT

#ಸಮಸ್ಯೆಯ ಫೋಟೊವನ್ನು ಸಾಧನೆ ಎಂದ ಕೇಸರಿ ಪಕ್ಷ

ಮೋದಿ ಸರ್ಕಾರ ಭಾರತದಲ್ಲಿ ಧನಾತ್ಮಕ ಬದಲಾವಣೆಯನ್ನು ತಂದಿದೆ ಎಂಬುದನ್ನು ಬಿಂಬಿಸುವ, 2009 ಮತ್ತು 2019ರ ಹೋಲಿಕೆಯ ಎರಡು ಚಿತ್ರ ಕೊಲಾಜ್‍ ಗಳನ್ನು ಕರ್ನಾಟಕ ಬಿಜೆಪಿ ಇತ್ತೀಚೆಗೆ ಟ್ವೀಟ್ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ #10YearsChallenge‍ನಲ್ಲಿ ಅಭಿವೃದ್ಧಿಪರ ಆಡಳಿತವನ್ನು ಬಿಂಬಿಸುವ ಸಲುವಾಗಿ ಬಿಜೆಪಿ ಈ ಚಿತ್ರಗಳನ್ನು #10YEARCALLENGE  ಎನ್ನುವ ಹ್ಯಾಷ್‍ ಟ್ಯಾಗ್‍ ನಡಿ ಪೋಸ್ಟ್ ಮಾಡಿತು. ಇದರಲ್ಲಿ ಚಾಲೆಂಜ್ ಪದದ ಸ್ಪೆಲ್ಲಿಂಗ್ ತಪ್ಪಾಗಿತ್ತು.

ಈ ಚಿತ್ರಗಳನ್ನು ಶೇರ್ ಮಾಡಿದವರಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೂಡಾ ಸೇರಿದ್ದಾರೆ.

ಕುತೂಹಲದ ಅಂಶವೆಂದರೆ ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‍ನಿಂದ ಟ್ವೀಟ್ ಮಾಡಲಾದ ಈ ಚಿತ್ರಗಳಲ್ಲಿ ಫೇಸ್‍ ಬುಕ್‍ ಪೇಜ್ "ನೇಷನ್ ವಿದ್ ನಮೋ" ಎದ್ದು ಕಾಣುತ್ತಿತ್ತು. ನೇಷನ್ ವಿದ್ ನಮೋ ಪೇಜ್ ನ ಪೋಸ್ಟ್ 3000 ಬಾರಿ ಶೇರ್ ಆಗಿದೆ. ‘ಭಾರತ್ ಪಾಸಿಟಿವ್’ ಎಂಬ ಮತ್ತೊಂದು ಫೇಸ್‍ ಬುಕ್ ಪೇಜ್ ಕೂಡಾ ಈ ಚಿತ್ರವನ್ನು ಶೇರ್ ಮಾಡಿತ್ತು.

ವಾಸ್ತವವೇನು?

ಗೂಗಲ್ ರಿವರ್ಸ್, Yandex ಇಮೇಜ್‍ ಸರ್ಚ್‍ ನಂತಹ ಸಾಧನವನ್ನು ಬಳಸಿಕೊಂಡು, ಈ ಚಿತ್ರಗಳನ್ನು ಇಂಟರ್ ನೆಟ್‍ ನಲ್ಲಿ ಮೊಟ್ಟಮೊದಲು ಯಾವಾಗ ಷೇರ್ ಮಾಡಲಾಗಿದೆ ಎನ್ನುವುದನ್ನು ಪತ್ತೆ ಮಾಡಲು ಸಾಧ್ಯವಾಯಿತು.

ಸೆಟ್ 1

ಎಡಬದಿಯಲ್ಲಿ ಕಾಣಿಸುವ ಚಿತ್ರ "ವಲ್ನರೇಬಲ್ ವಿದೌಟ್ ಟಾಯ್ಲೆಟ್" ಎಂಬ ಸಾಕ್ಷ್ಯಚಿತ್ರ ದಾಖಲೀಕರಣದ ವೇಳೆ ಕ್ಲಿಕ್ಕಿಸಿದ್ದು. ಈ ಸಾಕ್ಷ್ಯಚಿತ್ರವನ್ನು 2014ರ ಮೇ 23ರಂದು, ದುರ್ಬಲ ಸಮುದಾಯದವರ ಸಬಲೀಕರಣ ಕ್ಷೇತ್ರದಲ್ಲಿ ಕೆಲಸ ಮಾಡುವ "ವಿಡಿಯೊ ವಾಲಿಂಟಿಯರ್ಸ್" ಅಪ್‍ಲೋಡ್ ಮಾಡಿದೆ. ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಗ್ರಾಮವೊಂದರಲ್ಲಿ ಮೂಲ ನೈರ್ಮಲ್ಯ ಸೌಕರ್ಯವೂ ಇಲ್ಲದ ಚಿತ್ರಣವನ್ನು ಬಿಂಬಿಸುವ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಫೋಟೊ ಇದಾಗಿದೆ. ಬಲಬದಿಯಲ್ಲಿ ಕಾಣುವ ಚಿತ್ರ 2011ರ ಅಕ್ಟೋಬರ್ 11ರಂದು ಮಿಂಟ್‍ನಲ್ಲಿ ಪ್ರಕಟವಾದ ಒಂದು ಲೇಖನದ ಜತೆ ಪ್ರಕಟವಾಗಿತ್ತು. ವಿಚಿತ್ರವೆಂದರೆ, ಬಿಜೆಪಿ ತನ್ನ ಉಚಿತ ಶೌಚಾಲಯ ಯೋಜನೆಯ ಸಾಧನೆ ಎಂದು ಪ್ರದರ್ಶಿಸಲು ಬಳಸಿದ ಈ ಚಿತ್ರದ ಮೂಲ ಶೀರ್ಷಿಕೆ ಹೀಗಿದೆ: "ಇರುಂಗಟ್ಟುಕೊಟ್ಟೈ ಎಂಬ ಗ್ರಾಮದಲ್ಲಿ ಹ್ಯುಂಡೈ ನಿರ್ಮಿಸಿದ ಶೌಚಾಲಯ ಬಳಸುತ್ತಿರುವ ಮಹಿಳೆ".

ಈ ಲೇಖದಲ್ಲಿ ನೀಡಿದ ವಿವರದಂತೆ ಗ್ರಾಮದಲ್ಲಿ ನೈರ್ಮಲ್ಯ ಸೌಲಭ್ಯ ಇಲ್ಲದ ಎಲ್ಲ 205 ಮನೆಗಳಿಗೆ ಹ್ಯುಂಡೈ ಮೋಟರ್ ಇಂಡಿಯಾ, ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ.

ಸೆಟ್ 2

ಎಡಬದಿಯಲ್ಲಿರುವ ಚಿತ್ರ, ಹಲವು ಲೇಖನಗಳಲ್ಲಿ ಈಗಾಗಲೇ ಪ್ರಕಟವಾದ ಪ್ರಾತಿನಿಧಿಕ ಚಿತ್ರ. "ಗ್ರೀನ್ ಡ್ರಿಂಕ್ಸ್ ಸಿಂಗಾಪುರ" ಎಂಬ ವೆಬ್‍ಸೈಟ್ ಈ ಚಿತ್ರವನ್ನು ಮೊಟ್ಟಮೊದಲ ಬಾರಿಗೆ 2012ರ ಆಗಸ್ಟ್ 7ರಂದು ಪ್ರಕಟಿಸಿರುವುದನ್ನು ಆಲ್ಟ್‍ ನ್ಯೂಸ್ ಪತ್ತೆ ಮಾಡಿದೆ. 2010ರಲ್ಲಿ ಲಾಭರಹಿತ ಸಂಸ್ಥೆಯಾದ ‘ಗ್ಲೋಬಲ್ ಅಲೈನ್ಸ್ ಫಾರ್ ಕ್ಲೀನ್ ಕುಕ್‍ ಸ್ಟೌ’ ಎಂಬ ಸಂಘಟನೆ ನೀಡಿದ ಚಿತ್ರ ಇದು ಎಂದು ವೆಬ್ ಸೈಟ್ ಹೇಳಿತ್ತು.

ಬಲಬದಿಯಲ್ಲಿ ಕಾಣುವ ಚಿತ್ರ 2018ರಲ್ಲಿ ಡೌನ್ ಟೂ ಅರ್ಥ್ ಪ್ರಕಟಿಸಿದ ಲೇಖನವೊಂದರ ಜತೆ ಕಾಣಿಸಿಕೊಂಡ ಚಿತ್ರವಾಗಿದೆ. ಉಜ್ವಲ ಯೋಜನೆಯಲ್ಲಿ ಸಿಲಿಂಡರ್ ಪಡೆದ 2 ಕೋಟಿ ಕ್ರಮಸಂಖ್ಯೆಯ ಫಲಾನುಭವಿ ಎನಿಸಿಕೊಂಡ ಸ್ವಲಿಯಾ ಬೀಬಿಗೆ ಇದೀಗ ಸಿಲಿಂಡರ್ ಖರೀದಿಸುವ ಚೈತನ್ಯ ಇಲ್ಲ ಎಂದು ಲೇಖನದಲ್ಲಿ ವಿವರಿಸಲಾಗಿತ್ತು. ಅಂದರೆ ಯೋಜನೆಯ ಲೋಪಗಳನ್ನು ಬಣ್ಣಿಸುವ ಲೇಖನದ ಜತೆ ಪ್ರಕಟವಾದ ಈ ಚಿತ್ರವನ್ನು ಯೋಜನೆಯ ಪ್ರಯೋಜನ ಬಿಂಬಿಸುವ ಚಿತ್ರವಾಗಿ ಬಳಸಿರುವುದು ನಿಜಕ್ಕೂ ವಿಡಂಬನೆ ಎಂದೇ ಹೇಳಬೇಕು.

ಸೆಟ್ 3

ಎಡಭಾಗದಲ್ಲಿ ಕಾಣಿಸುವುದು ವಿದ್ಯುತ್ ಕೊರತೆಯನ್ನು ಬಿಂಬಿಸುವ ಚಿತ್ರವಾಗಿದ್ದು, ಹಲವು ಲೇಖನ ಹಾಗೂ ಬ್ಲಾಗ್ ‍ಗಳಲ್ಲಿ ಈ ಹಿಂದೆ ಬಳಕೆಯಾದ ಪ್ರಾತಿನಿಧಿಕ ಚಿತ್ರ ಇದು. 2011ರ ಜನವರಿ 10ರಂದು ಪ್ರಕಟವಾದ, ಬ್ಲಾಗ್‍ನಲ್ಲಿ ಬಳಸಿದ ಈ ಚಿತ್ರಕ್ಕೆ, "ಬಿಹಾರದ ತಾಹಿಪುರ ಗ್ರಾಮದ ಬಾಲಕನೊಬ್ಬ ಸೀಮೆಎಣ್ಣೆ ಲಾಟೀನಿನ ಬೆಳಕಿನಲ್ಲಿ ಓದುತ್ತಿರುವುದು" ಎಂಬ ಶೀರ್ಷಿಕೆ ನೀಡಲಾಗಿತ್ತು. ಗ್ರೀನ್‍ಪೀಸ್ ಎಂಬ ಸರ್ಕಾರೇತರ ಸಂಘಟನೆ ಒದಗಿಸಿದ ಚಿತ್ರ ಎಂದು ಚಿತ್ರದ ಮೂಲವನ್ನು ವಿವರಿಸಲಾಗಿತ್ತು.

ಆದರೆ ಬಲಭಾಗದಲ್ಲಿರುವ ಚಿತ್ರ 2010ರದ್ದಾಗಿದೆ. ಈ ಸಂಗ್ರಹ ಚಿತ್ರಕ್ಕೆ ಮಿಂಟ್, "ಭಾರತದ ಕರ್ನಲ್ ಎಂಬಲ್ಲಿನ ಬಝೀದಾ ಝತ್ತನ್ ಎಂಬ ಗ್ರಾಮದಲ್ಲಿ ವಿದ್ಯುತ್" ಎಂಬ ಶೀರ್ಷಿಕೆ ನೀಡಿತ್ತು. Getty image ಫೋಟೊಗ್ರಾಫರ್ ಈ ಚಿತ್ರವನ್ನು 2010ರಲ್ಲಿ ಕ್ಲಿಕ್ಕಿಸಿದ್ದರು. ಆದರೆ ಬಿಜೆಪಿ ಫೋಟೊ ಕೊಲಾಜ್ ಮೂಲಕ ಈ ಫೋಟೊ 2019ರದ್ದು ಎಂದಿದೆ.

ಅಂತಿಮವಾಗಿ ಹೇಳಬೇಕೆಂದರೆ, ಯುಪಿಎ ಆಡಳಿತಾವಧಿಯ ಚಿತ್ರಗಳನ್ನು ಬಳಸಿಕೊಂಡು ಮೋದಿ ಆಡಳಿತದ ಅಭಿವೃದ್ಧಿ ಎಂದು ಬಿಂಬಿಸಲು ಬಿಜೆಪಿ ಹೊರಟಿದೆ. ಕಾಂಗ್ರೆಸ್ ಆಡಳಿತಾವಧಿಯ ಕನಿಷ್ಠ ಎರಡು ಚಿತ್ರಗಳನ್ನು ಬಿಜೆಪಿ ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳಲು ಬಳಸಿಕೊಂಡಿದೆ. ಇದಕ್ಕೂ ಮುನ್ನ ಬಿಹಾರ ಬಿಜೆಪಿ 2009ರ ಚಿತ್ರವೊಂದನ್ನು ಪ್ರಸಾರ ಮಾಡಿ, ಕಳೆದ ಐದು ವರ್ಷಗಳಲ್ಲಿ ಸಂಭವಿಸುತ್ತಿರುವ ಕ್ಷಿಪ್ರ ಪ್ರಗತಿ ಎಂದು ಬಣ್ಣಿಸಿತ್ತು.

ಕೃಪೆ: altnews.in, ಜಿಗ್ನೇಶ್ ಪಟೇಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News