ಆನಂದ್ ಸಿಂಗ್ ಮೇಲೆ ಹಲ್ಲೆ ಆರೋಪ: ಶಾಸಕ ಗಣೇಶ್‌ಗೆ ಬಂಧನ ಭೀತಿ

Update: 2019-01-21 14:11 GMT
ಆನಂದ್ ಸಿಂಗ್-ಜೆ.ಎನ್.ಗಣೇಶ್‌

ಬೆಂಗಳೂರು, ಜ.21:ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಆರೋಪ ಪ್ರಕರಣ ಸಂಬಂಧ ಕಂಪ್ಲಿ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ವಿರುದ್ಧ ಇಲ್ಲಿನ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅವರಿಗೆ ಬಂಧನದ ಭೀತಿ ಶುರುವಾಗಿದೆ. 

ಶಾಸಕ ಆನಂದ್ ಸಿಂಗ್ ಹೇಳಿಕೆ ಅನ್ವಯ ಬಿಡದಿ ಪೊಲೀಸ್ ಠಾಣೆಯಲ್ಲಿ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು), 506(ಜೀವ ಬೆದರಿಕೆ) ಅಡಿ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ದೂರಿನಲ್ಲಿ ಏನಿದೆ?: 'ರಾಮನಗರ ತಾಲೂಕು ಬಿಡದಿ ಹೋಬಳಿ ಬಳಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಸೂಚನೆಯಂತೆ ಲೋಕಸಭೆ ಚುನಾವಣೆ ಹಾಗೂ ಬರ ನಿರ್ವಹಣೆ ಬಗ್ಗೆ ಚರ್ಚೆ ನಡೆಸಲು ಸಭೆ ಏರ್ಪಡಿಸಲಾಗಿತ್ತು. ಹೀಗಾಗಿ, ನಾನು ಭಾಗಿಯಾಗಿದ್ದೆ. ಶನಿವಾರ(ಜ.19) ಸಭೆಯ ಬಳಿಕ ಇತರೇ ಶಾಸಕರೊಂದಿಗೆ ಊಟ ಮುಗಿಸಿಕೊಂಡು ಕಂಪ್ಲಿ ಶಾಸಕರಾದ ಗಣೇಶ್ ಅವರೊಂದಿಗೆ ಕೊಠಡಿ ಕಡೆ ಹೋಗುತ್ತಿದ್ದೆವು. ಈ ವೇಳೆ ಗಣೇಶ್ ಮಾತನಾಡುತ್ತಾ, ಈ ಬಾರಿ ಚುನಾವಣೆಗೆ ನೀನು ನನಗೆ ಹಣ ಸಹಾಯ ಸರಿಯಾಗಿ ಮಾಡಲಿಲ್ಲ ಎಂದ' ಎಂದು ಆನಂದ್ ಸಿಂಗ್ ದೂರಿದ್ದಾರೆ.

'ಅಷ್ಟೇ ಅಲ್ಲದೆ, ನಿನ್ನ ಸಹೋದರಿ ಪುತ್ರ ಸಂದೀಪ್ ಅನ್ನು ಕೊಲೆ ಮಾಡಿದ್ದೇನೆ ಎಂದು ಬೆದರಿಸಿದ. ಇದಕ್ಕೆ ಬುದ್ಧಿವಾದ ಹೇಳಲು ಮುಂದಾದಾಗ ಕೋಪಗೊಂಡ ಗಣೇಶ್, ನಿನ್ನನ್ನು ಸಾಯಿಸುತ್ತೇನೆ. ಆಗ ಎಲ್ಲವು ಸರಿಯಾಗುತ್ತೆ ಎಂದು ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಕೈಗೆ ಸಿಕ್ಕ ದೊಣ್ಣೆಯಿಂದ ನನಗೆ ತಲೆಗೆ ಹಾಗೂ ಮುಖಕ್ಕೆ ಹೊಡೆದಿದ್ದಾನೆ. ಅಲ್ಲದೇ, ನನ್ನ ತಲೆಯನ್ನು ಗೋಡೆಗೆ ಗುದ್ದಿ, ಪಿಸ್ತೂಲ್ ಕೊಡಿ, ಇವನನ್ನು ಇಲ್ಲೇ ಮುಗಿಸುತ್ತೇನೆ. ಇವನು ರಾಜಕೀಯವಾಗಿ ನನ್ನನ್ನು ಮುಗಿಸಲು ಹೊರಟಿದ್ದಾನೆ. ಇವನ ಪ್ರಾಣ ತೆಗೆದು ಇಲ್ಲೇ ಮುಗಿಸಿ ಬಿಡುತ್ತೇನೆ ಎಂದು ಬೆದರಿಸಿ ಗಂಭೀರ ಹಲ್ಲೆ ನಡೆಸಿದ್ದು, ಇದರಿಂದ ಕಣ್ಣುಗಳು, ಮುಖ ಹಾಗೂ ದೇಹದ ಇತರೇ ಭಾಗಗಳಿಗೆ ಗಾಯಗಳಾಗಿವೆ ಎಂದು ಆನಂದ್ ಸಿಂಗ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News