ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ರದ್ದು: ರೆಸಾರ್ಟ್‌ನಿಂದ ತೆರಳಿದ ಶಾಸಕರು

Update: 2019-01-21 14:17 GMT

ಬೆಂಗಳೂರು, ಜ.21: ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ನಿಧನರಾದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿದ್ದ ಶಾಸಕರೊಂದಿಗೆ ನಡೆಸಲು ಮುಂದಾಗಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ಸಿದ್ದರಾಮಯ್ಯ ರದ್ದುಗೊಳಿಸಿ, ಎಲ್ಲ ಶಾಸಕರಿಗೂ ರೆಸಾರ್ಟ್‌ನಿಂದ ತೆರಳುವಂತೆ ಸೂಚನೆ ನೀಡಿದರು.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ಶಾಸಕ ಆನಂದ್‌ ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ನಡುವೆ ನಡೆದಿರುವ ಹೊಡೆದಾಟದ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದರು. ಅಲ್ಲದೇ, ಕಡ್ಡಾಯವಾಗಿ ಎಲ್ಲ ಶಾಸಕರು ಸಭೆಯಲ್ಲಿ ಹಾಜರಿರುವಂತೆ ಸಿದ್ದರಾಮಯ್ಯ ಸೂಚಿಸಿದ್ದರು.

ಆದರೆ, ಶಿವಕುಮಾರಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ಸಿದ್ಧಗಂಗಾ ಮಠಕ್ಕೆ ತೆರಳಿದ್ದರಿಂದ, ಶಾಸಕಾಂಗ ಪಕ್ಷದ ಸಭೆಯನ್ನು ಸಿದ್ದರಾಮಯ್ಯ ರದ್ದುಗೊಳಿಸಿದರು.

ಶಾಸಕರಿಗೆ ಎಚ್ಚರಿಕೆ ಪಾಠ: ನಮ್ಮ ಶಾಸಕರ ನಡುವಿನ ಭಿನ್ನಮತವನ್ನು ಬಳಸಿಕೊಂಡು ಬಿಜೆಪಿ ನಾಯಕರು ಮತ್ತೊಮ್ಮೆ ಆಪರೇಷನ್ ಕಮಲ ನಡೆಸುವ ಸಾಧ್ಯತೆಗಳಿವೆ. ಬಿಜೆಪಿಯವರು ಒಡ್ಡುವ ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ, ಪಕ್ಷಕ್ಕೆ ನಿಷ್ಠಾವಂತರಾಗಿ ಇರುವಂತೆ ರೆಸಾರ್ಟ್‌ನಲ್ಲಿ ಶಾಸಕರಿಗೆ ಸಿದ್ದರಾಮಯ್ಯ ಎಚ್ಚರಿಕೆಯ ಪಾಠ ಮಾಡಿದ್ದಾರೆ.

ನಿಮ್ಮ ದೂರು, ದುಮ್ಮಾನಗಳು ನನ್ನ ಗಮನಕ್ಕೆ ಬಂದಿದೆ. ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ. ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಜನಪ್ರತಿನಿಧಿಗಳಾಗಿರುವ ನಾವು ಜನರಿಗೆ ಮಾದರಿಯಾಗಿರಬೇಕು. ಆದರೆ, ರೆಸಾರ್ಟ್‌ನಲ್ಲಿ ನಿನ್ನೆ ಆನಂದ್‌ ಸಿಂಗ್ ಹಾಗೂ ಗಣೇಶ್ ನಡುವೆ ನಡೆದಿರುವ ಹೊಡೆದಾಟದ ಘಟನೆಯಿಂದ ಪಕ್ಷಕ್ಕೆ ಕೆಟ್ಟ ಹೆಸರು ಬಂದಿದೆ. ಇನ್ನು ಮುಂದೆ ಶಾಸಕರು ಎಚ್ಚರಿಕೆಯಿಂದ ಇರಬೇಕು. ಅಲ್ಲದೇ, ಇಂತಹ ಘಟನೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದ ರಮೇಶ್ ಜಾರಕಿಹೊಳಿ, ಡಾ.ಉಮೇಶ್ ಜಾಧವ್, ಮಹೇಶ್ ಕುಮಟಹಳ್ಳಿ, ನಾಗೇಂದ್ರಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಲೋಕಸಭಾ ಚುನಾವಣೆ ಸಂಬಂಧ ಚರ್ಚಿಸಲಾಗಿದೆ. ಪ್ರತಿಯೊಬ್ಬ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಾಗಿದೆ. 

-ದಿನೇಶ್‌ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News