ನಿಜಶರಣ ಅಂಬಿಗರ ಚೌಡಯ್ಯ ಜಯಂತಿ: 25 ಕೋಟಿ ಅನುದಾನ ನೀಡಲು ಆಗ್ರಹ

Update: 2019-01-21 15:50 GMT

ಬೆಂಗಳೂರು, ಜ.21: ಮುಂದಿನ ಬಜೆಟ್‌ನಲ್ಲಿ ಅಂಬಿಗರ ಚೌಡಯ್ಯ ಸಮುದಾಯದ ಅಭಿವೃದ್ಧಿಗಾಗಿ 25 ಕೋಟಿ ರೂ.ಗಳಷ್ಟು ಅನುದಾನ ನೀಡಬೇಕು ಎಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭದಲ್ಲಿ ಸರಕಾರವನ್ನು ಆಗ್ರಹಿಸಲಾಯಿತು.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಚೌಡಯ್ಯ ಜಯಂತ್ಯುತ್ಸವದಲ್ಲಿ ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯಾಧ್ಯಕ್ಷ ಬಿ. ಮೌಲಾಲಿ ಮಾತನಾಡಿ, ಅಂಬಿಗರ ಚೌಡಯ್ಯ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಸಮಾಜವು ಮುಂಚೂಣಿಗೆ ಬರುವುದಕ್ಕಾಗಿ ಅಗತ್ಯ ಅನುದಾನ ನೀಡಬೇಕು ಎಂದು ಕೋರಿದರು.

ಶೈಕ್ಷಣಿಕವಾಗಿ ಮುಂದುವರೆಯಲು ಗಂಗಾಮತಸ್ಥ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಂಬಿಗರ ಚೌಡಯ್ಯ ಸ್ಮಾರಕ ಭವನ ನಿರ್ಮಾಣ ಮಾಡಬೇಕು. ಅದಕ್ಕಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಮಂಗಳೂರು ಸೇರಿ ರಾಜ್ಯದ ನಾಲ್ಕು ವಲಯಗಳಲ್ಲಿ ತಲಾ 10 ಎಕರೆ ಜಾಗ ನೀಡಬೇಕು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ತೆರೆಯಬೇಕು ಎಂದು ಒತ್ತಾಯಿಸಿದರು.

ಶಾಸಕ ಬಿ. ನಾರಾಯಣರಾವ್ ಮಾತನಾಡಿ, ರಾಜ್ಯದಲ್ಲಿ ತಳ ಸಮುದಾಯಗಳು ಬಲಿಷ್ಠವಾಗಬೇಕು. ಆಗ ಮಾತ್ರ ನಾವು ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸಮಾಜದಲ್ಲಿ ನಾವು ಮೇಲಕ್ಕೆ ಬರಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ತಮ್ಮ ಸಮುದಾಯ ಬಲಿಷ್ಠವಾಗಿದ್ದರಿಂದ ಸಿಎಂ, ಪಿಎಂ ಆಗಲು ಸಾಧ್ಯವಾಗಿದೆ. ಆದರೆ, ನಮ್ಮ ಸಮುದಾಯ ಬಲಿಷ್ಠವಿಲ್ಲದಿದ್ದರಿಂದ ನಾಪತ್ತೆಯಾದ ಮೀನುಗಾರರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹೀಗಾಗಿ, ನಾವು ಪ್ರಬಲವಾಗಿ ಬೆಳೆಯಬೇಕಿದೆ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಸಮಾಜವನ್ನು ಬಡತನ, ಹಿಂದುಳಿದಿರುವ ಸಮುದಾಯವೆಂಬ ಹಣೆಪಟ್ಟಿ ಕಟ್ಟಿ ಕನಿಕರದಿಂದ ಗೌರವಿಸುವುದು ಬೇಡ. ಅದರ ಬದಲಾಗಿ ಶೈಕ್ಷಣಿಕವಾಗಿ ಮುಂದುವರಿದರೆ ತಾನಾಗಿಯೇ ಗೌರವ ದಕ್ಕುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಎರಡು ನಿಮಿಷಗಳ ಮೌನಾಚರಣೆ ಆಚರಿಸಲಾಯಿತು. ಈ ವೇಳೆ ಸಮುದಾಯದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News