‘ಬೇಟಿ ಬಚಾವೊ’ ಯೋಜನೆ ಹೆಸರಿನಲ್ಲಿ ವಂಚನೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

Update: 2019-01-21 15:55 GMT

ಬೆಂಗಳೂರು, ಜ. 21: ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿ 2 ಲಕ್ಷ ರೂ.ನಗದು ಉತ್ತೇಜನ ನೀಡುವುದೆಂದು ಕೆಲ ಸಂಘಟನೆಗಳು/ಸ್ವಯಂ ಸೇವಾ ಸಂಸ್ಥೆಗಳು/ವ್ಯಕ್ತಿಗಳು ಹೆಣ್ಣು ಮಕ್ಕಳ ವೈಯಕ್ತಿಕ ಮಾಹಿತಿ ಪಡೆದು ವಂಚಿಸುತ್ತಿರುವುದು ಕೇಂದ್ರ ಸರಕಾರದ ಗಮನಕ್ಕೆ ಬಂದಿದೆ.

ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿಯಲ್ಲಿ ಯಾರಿಗೂ ನಗದು ವಿತರಣೆ ಮಾಡುವ ಕಾರ್ಯಕ್ರಮ ಇರುವುದಿಲ್ಲ. ಅನಧಿಕೃತ ಸಂಸ್ಥೆಗಳು/ವ್ಯಕ್ತಿಗಳು ಈ ಯೋಜನೆಯಡಿಯ ಹಣವನ್ನು ನೀಡುವುದಾಗಿ ಭರವಸೆ ನೀಡಿ ಸಾರ್ವಜನಿಕರನ್ನು ಮೋಸ ಮಾಡುತ್ತಿವೆ. ಈ ರೀತಿಯ ವಂಚನೆಯನ್ನು ಮಾಡುವ ಅಥವಾ ಪ್ರಚಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಇಂತಹ ವಂಚನೆಗಳು ಬೆಳಕಿಗೆ ಬಂದಾಗಲೆಲ್ಲಾ ಎಫ್‌ಐಆರ್ ಈಗಾಗಲೇ ದಾಖಲಿಸಲಾಗಿದೆ.ಇಂತಹ ವಂಚಕರ ಬಲೆಗೆ ಬೀಳದಂತೆ ಸಾರ್ವಜನಿಕರಿಗೆ ಸಲಹೆ/ಸೂಚನೆ ನೀಡಲಾಗಿದೆ. ಈ ಯೋಜನೆಯಡಿ ವಂಚಕರು ನಮೂನೆಯಲ್ಲಿ ಕೋರುವ ಯಾವುದೇ ವೈಯಕ್ತಿಕ ವಿವರಗಳನ್ನು ಅಂದರೆ ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳು, ದೂರವಾಣಿ/ಮೊಬೈಲ್ ಸಂಖ್ಯೆ/ಇ-ಮೇಲ್ ಐ.ಡಿ/ಇತರೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಬಾರದು. ಇಂತಹ ವಂಚನೆಗಳನ್ನು ಮಾಡುವವರ ಬಗ್ಗೆ ವ್ಯಕ್ತಿಗಳ/ಸಂಸ್ಥೆಗಳ ಹೆಸರನ್ನು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಸೂಚಿಸಲಾಗಿದೆ.

ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ನಿಮ್ಮನ್ನು ಸಂಪರ್ಕಿಸುವ ಎಲ್ಲರಿಗೂ ಇಂತಹ ವಂಚಕರ ವಿರುದ್ಧ ಜಾಗರೂಕರಾಗಿರಲು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬೇಟಿ ಬಚಾವೊ ಬೇಟಿ ಪಡಾವೊ ಕಾರ್ಯಕ್ರಮದಡಿ ಹೆಣ್ಣು ಮಕ್ಕಳಿಗೆ 2ಲಕ್ಷ ರೂ. ನಗದು ನೀಡುವ ಕಾರ್ಯಕ್ರಮ ಇರುವುದಿಲ್ಲ. ಈ ರೀತಿ ಮುಗ್ಧ ಹೆಣ್ಣು ಮಕ್ಕಳನ್ನು ಸುಳ್ಳು ಭರವಸೆ ನೀಡಿ ಮೋಸ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News