ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ಸಾವು

Update: 2019-01-21 15:58 GMT

ಬೆಂಗಳೂರು, ಜ. 21: ಶರ ವೇಗವಾಗಿ ಬಂದ ಲಗೇಜ್ ವಾಹನ ಢಿಕ್ಕಿ ಹೊಡೆದ ಪರಿಣಾಮ, ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಕೆಆರ್‌ಪುರಂನ ಭಟ್ಟರಹಳ್ಳಿ ಬಳಿ ನಡೆದಿದೆ ಎನ್ನಲಾಗಿದೆ.

ನಗರದ ಟಿಸಿ ಪಾಳ್ಯದ ಅತುಲ್ ಬರ್ಮನ್(37) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳ ಮೂಲದ ಅತುಲ್ ಬರ್ಮನ್, ಗಾರೆ ಕೆಲಸ ಮಾಡುತ್ತಿದ್ದು, ರವಿವಾರ ರಾತ್ರಿ 8:30ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಬೈಕ್‌ನಲ್ಲಿ ಭಟ್ಟರಹಳ್ಳಿ ಮೇಡಹಳ್ಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಲಗೇಜ್ ವಾಹನ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬರ್ಮನ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿರುವ ಕೆಆರ್‌ಪುರ ಸಂಚಾರ ಪೊಲೀಸರು ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿ ಸಾವು: ದೇವನಹಳ್ಳಿಯ ಡಾಬಾ ಗೇಟ್ ಬಳಿ ರವಿವಾರ ರಾತ್ರಿ ರಸ್ತೆ ದಾಟುತ್ತಿದ್ದ ಬಿಹಾರ ಮೂಲದ ಕೂಲಿ ಕಾರ್ಮಿಕರೊಬ್ಬರ ಮೇಲೆ ಲಾರಿ ಹರಿದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಡಾಬಾ ಗೇಟ್ ಬಳಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡಿಕೊಂಡು ಅಲ್ಲೇ ವಾಸಿಸುತ್ತಿದ್ದ ನಿರಂಜನ್ ನಾಯಕ (50) ಮೃತಪಟ್ಟಿದ್ದು, ರವಿವಾರ ರಾತ್ರಿ 8ರ ವೇಳೆ ಡಾಬಾ ಗೇಟ್ ಬಳಿ ರಸ್ತೆ ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆ. ದೇವನಹಳ್ಳಿ ಸಂಚಾರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News