ಬೆಂಗಳೂರು: ಉಲಮಾಗಳ ಕುಟುಂಬದವರಿಗಾಗಿ ಉಚಿತ ಆರೋಗ್ಯ ಮೇಳ

Update: 2019-01-21 16:20 GMT

ಬೆಂಗಳೂರು, ಜ.21: ಬೆಂಗಳೂರು ನಗರದಲ್ಲಿರುವ ಮಸೀದಿಗಳ ಉಲಮಾಗಳು ಹಾಗೂ ಮುಅಝ್ಝಿನ್‌ಗಳ ಕುಟುಂಬ ಸದಸ್ಯರಿಗಾಗಿ ಶಾಸಕ ಆರ್.ರೋಷನ್ ಬೇಗ್ ನೇತೃತ್ವದಲ್ಲಿ ಶಿವಾಜಿನಗರದ ಶಮ್ಸ್ ಕನ್ವೆಂಷನ್ ಹಾಲ್‌ನಲ್ಲಿ ಸೋಮವಾರ ಉಚಿತ ಆರೋಗ್ಯ ತಪಾಸಣಾ ಮೇಳವನ್ನು ಆಯೋಜಿಸಲಾಗಿತ್ತು.

ಉಲಮಾಗಳನ್ನು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರಿಸಲಾಗಿದೆ. ಆದರೆ, ಅವರ ಆರೋಗ್ಯದ ಬಗ್ಗೆ ಯಾರೊಬ್ಬರೂ ಗಮನ ಹರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಉಲಮಾಗಳು ಹಾಗೂ ಮುಅಝ್ಝಿನ್‌ಗಳ ಕುಟುಂಬ ಸದಸ್ಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಮೇಳವನ್ನು ಆಯೋಜಿಸಲಾಗಿದೆ ಎಂದು ರೋಷನ್‌ ಬೇಗ್ ಹೇಳಿದರು.

ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ತಜ್ಞರ ಮೂಲಕ ಉಪನ್ಯಾಸ ನೀಡಲಾಗುತ್ತಿದೆ. ಇತ್ತೀಚೆಗೆ ಹೊಸ ಹೊಸ ಮಾದರಿಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗಗಳೇ ಬರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎಂದು ಅವರು ತಿಳಿಸಿದರು.

ಈ ಮೇಳದಲ್ಲಿ ಪಾಲ್ಗೊಂಡಿರುವ ಎಲ್ಲ ಉಲೇಮಾಗಳಿಗೆ ಪ್ರತ್ಯೇಕವಾದ ‘ಯೂಸರ್ ಐಡಿ ಹಾಗೂ ಪಾಸ್‌ವರ್ಡ್’ ನೀಡಲಾಗಿದೆ. ಇನ್ನೆರಡು ದಿನಗಳ ನಂತರ ಅವರು ಈ www.charbi.com ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವರದಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ರೋಷನ್‌ಬೇಗ್ ಹೇಳಿದರು.

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮುಂದಿನ ಆರೋಗ್ಯ ಮೇಳವನ್ನು ಯಶವಂತಪುರ ಹಾಗೂ ಜೆ.ಪಿ.ನಗರ, ಬನಶಂಕರಿ ಭಾಗದಲ್ಲಿ ಆಯೋಜಿಸಲಾಗುವುದು. ಸುಮಾರು ಎರಡು ತಿಂಗಳುಗಳ ಕಾಲ ನಮ್ಮ ತಂಡವು ಎಲ್ಲ ಮಸೀದಿಗಳಿಗೆ ಭೇಟಿ ನೀಡಿ, ಉಲಮಾಗಳು ಹಾಗೂ ಮುಅಝ್ಝಿನ್‌ಗಳ ಮಾಹಿತಿಯನ್ನು ಸಂಗ್ರಹಿಸಿ, ಈ ಮೇಳಕ್ಕೆ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗ, ಬೆಳಗಾವಿ, ದಾವಣಗೆರೆ ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಇದೇ ಮಾದರಿಯ ಆರೋಗ್ಯ ಮೇಳ ಆಯೋಜನೆ ಮಾಡಲಾಗುವುದು. ಇಂದಿನ ಮೇಳದಲ್ಲಿ ಸುಮಾರು ಒಂದು ಸಾವಿರ ಮಂದಿ ಭಾಗವಹಿಸಿದ್ದಾರೆ ಎಂದು ರೋಷನ್‌ ಬೇಗ್ ಹೇಳಿದರು.

ಈ ಸಂದರ್ಭದಲ್ಲಿ ಮೌಲಾನ ಲುತ್ಫುಲ್ಲಾ, ಮೌಲಾನ ಶಬ್ಬೀರ್‌ ಅಹ್ಮದ್ ನದ್ವಿ, ಡಾ.ರಿಯಾಝ್, ಬೌರಿಂಗ್ ಆಸ್ಪತ್ರೆ ಪಿಆರ್‌ಓ ಖ್ವಾಜಾ ಮೊಹಿಯುದ್ದೀನ್, ಮುಖಂಡರಾದ ಆರ್.ರೂಮಾನ್‌ ಬೇಗ್, ವಿಖಾರ್, ಬಿಬಿಎಂಪಿ ಸದಸ್ಯ ಶಕೀಲ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News