ಕೇಂದ್ರ ಸರಕಾರದಿಂದ ಅಗತ್ಯ ನೆರವು ದೊರೆಯುತ್ತಿಲ್ಲ: ಬಿ.ಎಚ್.ಅನಿಲ್ ಕುಮಾರ್

Update: 2019-01-21 16:23 GMT

ಬೆಂಗಳೂರು, ಜ.21: ಕೇರಳದಲ್ಲಿ ಸಂಭವಿಸಿದ ಪ್ರವಾಹದಿಂದ ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ಈ ಕುರಿತು ಪಿಡಿಎನ್‌ಎ ಕರಡು ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದ್ದರೂ, ಅಗತ್ಯ ನೆರವು ದೊರೆಯುತ್ತಿಲ್ಲ ಎಂದು ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್ ನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರ, ಗೃಹ ಮಂತ್ರಾಲಯ ಸಹಯೋಗದೊಂದಿಗೆ ಆಯೋಜಿಸಿದ್ದ, ‘ವಿಪತ್ತು ನಂತರದ ಮೌಲ್ಯಮಾಪನ ಅಗತ್ಯತೆ’ ಕುರಿತು ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ಪ್ರವಾಹದಿಂದ ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ಅದರ ಪರಿಹಾರಕ್ಕಾಗಿ 26 ಸಾವಿರ ಕೋಟಿ ರೂಪಾಯಿ ಅಗತ್ಯತೆ ಇದ್ದು, ಕೇಂದ್ರ ಸರಕಾರದಿಂದ ಅಗತ್ಯ ನೆರವು ದೊರೆತಿಲ್ಲ. ಹೀಗಾಗಿ, ವಸತಿ ನಿರ್ಮಾಣಕ್ಕೆ, ಕೃಷಿ, ಮೀನುಗಾರಿಕೆ ಮತ್ತು ಜಾನುವಾರಗಳ ಮೇವು, ಜನಜೀವನ, ನೀರಾವರಿ, ಸ್ವಚ್ಛತೆಗೆ ಸಾವಿರಾರು ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು.

ಕೇರಳವನ್ನು ಮೊದಲು ಹಸಿರು ರಾಜ್ಯವನ್ನಾಗಿ ಮಾಡಬೇಕೆಂದು ಸೂಚಿಸಲಾಗಿದೆ. ಕೇರಳ ರಾಜ್ಯವನ್ನು ಈ ಹಿಂದಿನಂತೆ ಮಾಡಲು ಹಲವು ಆಲೋಚನೆಗಳು, ಅಭಿಪ್ರಾಯಗಳನ್ನು ನೀಡಲಾಗಿದೆ. ಮನೆಗಳು ಮತ್ತು ಫ್ಲಾಟ್‌ಗಳಿಗೆ ಪ್ರತ್ಯೇಕ ತೆರಿಗೆ ದರವನ್ನು ವಿಧಿಸಬೇಕೆಂದು ಸೂಚಿಸಿದೆ ಎಂದು ಅವರು ಮಾಹಿತಿ ನೀಡಿದರು.

ಸರಕಾರಗಳು ಪಿಡಿಎನ್‌ಎ ಕರಡು ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ರೀತಿ ಪರಿಹಾರ ಒದಗಿಸಬೇಕು. ಆದರೆ, ಇದು ನಡೆಯುತ್ತಿಲ್ಲ. ಅಷ್ಟೇ ಅಲ್ಲದೆ, ಜನ ಪ್ರತಿನಿಧಿಗಳ, ಅವೈಜ್ಞಾನಿಕ ವಿಧಾನಗಳಿಂದ ವಾತಾವರಣದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಪತ್ತು ನಿರ್ವಹಣೆಯ ಎಲ್ಲಾ ಹಂತಗಳ ಮೇಲೆ ಕೇಂದ್ರೀಕರಿಸುವ ಒಂದು ಪೂರ್ವಭಾವಿ ವಿಧಾನವನ್ನು ಉತ್ತೇಜಿಸಲು ಮತ್ತು ದೇಶದಲ್ಲಿ ವಿಪತ್ತು ನಿರ್ವಹಣೆಯ ವಿಧಾನದಲ್ಲಿ ಮಾದರಿ ಬದಲಾವಣೆಯನ್ನು ತರಲು, ಅಗತ್ಯವಾದ ಕ್ರಮಗಳತ್ತ ಹೆಚ್ಚು ಗಮನ ನೀಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆಯನ್ನು 2005 ರಲ್ಲಿ ಜಾರಿಗೆ ತರಲಾಗಿದೆ ಎಂದರು.

ಕಾರ್ಯಾಗಾರದಲ್ಲಿ ಎನ್‌ಐಡಿಎಂನ ಪ್ರೊ.ಕುಮಾರ್, ವಿಪತ್ತು ನಿರ್ವಹಣಾ ತಜ್ಞ ಡಾ.ಜಿ.ವಿಶ್ವನಾಥ್, ಶೇಖರ್ ಸೇರಿದಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳು, ಸ್ವಯಂ ಸೇವಕ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.

ಕೇಂದ್ರ ಸರಕಾರ ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ವಿಶ್ವಸಂಸ್ಥೆ ಸಹಯೋಗದೊಂದಿಗೆ ತಯಾರಿಸುವ ವಿಪತ್ತು ಪೂರ್ವ ಅಗತ್ಯ ಮೌಲ್ಯಮಾಪನ (ಪಿಡಿಎನ್‌ಎ) ಕರಡು ವರದಿಯ ಅಂಶಗಳನ್ನು ಗಂಭೀರವಾಗಿ ಪರಿಗಣಿಸಲಿ.

-ಬಿ.ಎಚ್.ಅನಿಲ್ ಕುಮಾರ್, ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News