ಖಾಸಗಿ ಬಿಲ್ಡಿರ್‌ನಿಂದ ಬಿಬಿಎಂಪಿ ಜಾಗ ಒತ್ತುವರಿ: ಪಾಲಿಕೆಗೆ ಹೈಕೋರ್ಟ್ ನೋಟಿಸ್

Update: 2019-01-21 16:46 GMT

ಬೆಂಗಳೂರು, ಜ.21: ನಗರದ ಬಸವನಗುಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಸೇರಿದ ಅಂದಾಜು 200 ಕೋಟಿ ರೂ. ಮೌಲ್ಯದ ಜಾಗವನ್ನು ಖಾಸಗಿ ಬಿಲ್ಡರ್ ಒತ್ತುವರಿ ಮಾಡಿ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿರುವ ಆರೋಪ ಕುರಿತು ಬಿಬಿಎಂಪಿಗೆ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಈ ಸಂಬಂಧ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಬಿಬಿಎಂಪಿಯ ಮುಖ್ಯ ಎಂಜಿನಿಯರ್, ಜಂಟಿ ನಿರ್ದೇಶಕರು ಸೇರಿ ಮತ್ತಿತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜ.28ಕ್ಕೆ ಮುಂದೂಡಿತು.

ಬಸವನಗುಡಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆ.ಆರ್.ರಸ್ತೆಗೆ ಹೊಂದಿಕೊಂಡಂತಿರುವ ಸುಮಾರು 2,544 ಚದರ ಅಡಿ ಜಾಗವು ಬಿಬಿಎಂಪಿಗೆ ಸೇರಿದೆ. ಈ ಜಾಗದ ಮಾರುಕಟ್ಟೆ ಮೌಲ್ಯ ಸುಮಾರು 200 ಕೋಟಿ ರೂ.ಗಿಂತ ಅಧಿಕವಾಗಿದೆ. ಈ ಜಾಗವನ್ನು ಖಾಸಗಿ ಡೆವಲಪರ್ ಒತ್ತುವರಿ ಮಾಡಿಕೊಂಡು 90 ಫ್ಲಾಟ್‌ಗಳಿರುವ ಬೃಹತ್ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಿರುವ ಅರ್ಜಿದಾರರು, ಈ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವಂತೆ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News