ಬಿಬಿಎಂಪಿ: ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಪಿ.ಸೌಮ್ಯ ಶಿವಕುಮಾರ್ ಅಧಿಕಾರ ಸ್ವೀಕಾರ

Update: 2019-01-21 16:48 GMT

ಬೆಂಗಳೂರು, ಜ.21: ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಾಂತಿನಗರ ವಾರ್ಡ್ ಸದಸ್ಯೆ ಪಿ.ಸೌಮ್ಯ ಶಿವಕುಮಾರ್ ಅಧಿಕಾರ ವಹಿಸಿಕೊಂಡರು.

ಸೋಮವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯ ಪೌರ ಸಭಾಂಗಣದ ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಬಡವರು, ದೀನ- ದಲಿತರು ಮತ್ತು ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನೆರವಾಗಿದೆ ಎಂದು ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದವರಿಗೆ ಒಂಟಿ ಮನೆ ಯೋಜನೆ, ಕಾರ್ಮಿಕರಿಗೆ ಕಾರ್ಪೆಂಟರಿ ಕಿಟ್, ಮಹಿಳಾ ಸಬಲೀಕರಣಕ್ಕೆ ಹೊಲಿಗೆ ಯಂತ್ರ, ಬೈಸಿಕಲ್, ಇಸ್ತ್ರಿ ಪಟ್ಟಿಗೆ ವಿವಿಧ ಸಲಕರಣೆಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು.

ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಮಹತ್ವ ಯೋಜನೆಗಳು ಸಾಮಾಜಿಕ ನ್ಯಾಯ ಸಮಿತಿಯಲ್ಲಿದ್ದು, ಈ ವರ್ಷ ಬೆಂಗಳೂರು ಜನರಿಗೆ ವಿಶೇಷ ಯೋಜನೆ ರೂಪಿಸಿ, ಎಲ್ಲ ವರ್ಗ, ಧರ್ಮದವರು ಆರ್ಥಿಕವಾಗಿ ಸಬಲರಾಗಲು ಎಲ್ಲ ಸದಸ್ಯರ ಜೊತೆಯಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.

ನಾನು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಲು ಕಾರಣೀ ಭೂತರಾದ ಮಾಜಿ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿ, ಸಚಿವರು, ಬೆಂಗಳೂರು ನಗರದ ಶಾಸಕರುಗಳಿಗೆ ಮತ್ತು ಶಾಂತಿನಗರ ವಾರ್ಡ್ ಜನತೆಗೆ ಧನ್ಯವಾದವನ್ನು ಪಿ.ಸೌಮ್ಯ ಶಿವಕುಮಾರ್ ಸಮರ್ಪಿಸಿದರು.

ಪದಗ್ರಹಣ ಸಮಾರಂಭದಲ್ಲಿ ಸಚಿವ ಝಮೀರ್ ಅಹ್ಮದ್ ಶಾಸಕ ಎನ್.ಎ. ಹಾರೀಸ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಹರ್ಷದ್, ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News