ಜಿಡಿಪಿಯಲ್ಲಿ ಗೃಹಿಣಿಯರ ಸೇವೆ ಪರಿಗಣಿಸಿ: ರಾಜ್ಯ ಆರ್ಥಿಕ ಪರಿಷತ್ ಒತ್ತಾಯ

Update: 2019-01-21 17:11 GMT

ಬೆಂಗಳೂರು, ಜ.21: ಒಟ್ಟು ದೇಶೀಯ ಉತ್ಪನ್ನ ಹಾಗೂ ರಾಷ್ಟ್ರೀಯ ಆದಾಯ ಅಂದಾಜು ಮಾಡುವಾಗ ವೇತನ ಪಡೆಯುವವರ ಜತೆಗೆ ಗೃಹಿಣಿಯರ ಸೇವೆಯನ್ನೂ ಪರಿಗಣಿಸಬೇಕು ಎಂದು ಕರ್ನಾಟಕ ರಾಜ್ಯ ಆರ್ಥಿಕ ಪರಿಷತ್ ಒತ್ತಾಯ ಮಾಡಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‌ನ ಅಧ್ಯಕ್ಷ ಡಾ.ಆರ್.ಜಯಶಂಕರ್, ರಾಷ್ಟ್ರೀಯ ಆದಾಯ ಹಾಗೂ ಒಟ್ಟು ಉತ್ಪಾದನೆ ಅಂದಾಜು ಮಾಡುವ ಸಂದರ್ಭದಲ್ಲಿ ಗೃಹಿಣಿಯನ್ನು ದುಡಿಯುವ ಜನರ ಪಟ್ಟಿಯಲ್ಲಿ ಸೇರಿಸದಿರುವುದು ಸರಿಯಲ್ಲ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 49ರಷ್ಟು ಮಹಿಳೆಯರಿದ್ದು, ಅವರಲ್ಲಿ ಶೇ.85ರಷ್ಟು ಗೃಹಿಣಿಯರಿದ್ದಾರೆ. ಅವರು ಕುಟುಂಬಕ್ಕಾಗಿ ದುಡಿಯುತ್ತಾರೆ. ಹೀಗಾಗಿ ವೇತನ ಪಡೆದ ವರ್ಗದ ಜತೆಗೆ ಮನೆಯಲ್ಲಿ ದುಡಿಯುವ ವರ್ಗದ ಸೂಚ್ಯಂಕವನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಆರ್ಥಿಕ ಪರಿಷತ್ ರಾಜಕಿಯೇತರ ಮತ್ತು ಲಾಭ ರಹಿತ ಸಂಘಟನೆಯಾಗಿದ್ದು, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ಅರ್ಥ ಶಾಸ್ತ್ರಜ್ಞರು, ಸಂಶೋಧಕರು ಸದಸ್ಯರಾಗಿದ್ದಾರೆ. ಪರಿಷತ್ತು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಸರಕಾರಿ ಕಾರ್ಯಕ್ರಮ ಹಾಗೂ ನೀತಿಯನ್ನು ಮೌಲ್ಯಮಾಪನ ಮಾಡಿ ಸರಕಾರಕ್ಕೆ ಸಲಹೆ ಸೂಚನೆ ನೀಡಲಿದೆ ಎಂದು ತಿಳಿಸಿದರು.

ಅರ್ಥಶಾಸವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ವಿಷಯದ ಗುಣಮಟ್ಟ ಹೆಚ್ಚಸುವ ಮೂಲಕ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವಂತೆ ಮಾಡುವುದು ಪರಿಷತ್ತಿನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಅರ್ಥಶಾಸಜ್ಞರ ಲೇಖನಗಳನ್ನು ಸಂಶೋಧನಾತ್ಮಕ ಜರ್ನಲ್‌ನಲ್ಲಿ ಪ್ರಕಟಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಗೌಡಗೆರೆ ನಾರಾಯಣ ರಾವ್, ಪ್ರಧಾನ ಕಾರ್ಯದರ್ಶಿ ಡಾ.ಪ್ರಸನ್ನ, ಪರಿಷತ್‌ನ ವಕ್ತಾರೆ ಸಂಗೀತ ಕಟ್ಟಿಮನಿ ಹಾಗೂ ಉಮಾದೇವಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News