ಮೋದಿ ಹೋಗಿ ರಾಹುಲ್ ಬಂದರೆ ಸಾಕೇ?

Update: 2019-01-22 09:04 GMT

ಚುನಾವಣಾ ದೃಷ್ಟಿಯಿಂದ ಮಾತ್ರ ಏಕತೆ ಪ್ರದರ್ಶಿಸುವ ಈ ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಮೋದಿಯನ್ನು ಸೋಲಿಸಿ ಹೊಸ ಸರಕಾರ ರಚಿಸಿದರೂ ಮೂಲಭೂತವಾಗಿ ಏನಾದರೂ ಬದಲಾವಣೆ ಬರಲು ಸಾಧ್ಯವೇ.? ಇವುಗಳ ಬೆಂಬಲ ಪಡೆದು ಗೆದ್ದು ಬರುವ ಸ್ವತಂತ್ರ ಆಭ್ಯರ್ಥಿಗಳು ನಿಜವಾಗಿಯೂ ಸ್ವತಂತ್ರ ನಿಲುವುಗಳನ್ನು ಇಟ್ಟುಕೊಂಡು ಜನಪರವಾಗಿ ಕೆಲಸ ಮಾಡಲು ಸಾಧ್ಯವೇ?.


ಭಾರತದಲ್ಲಿ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯನ್ನು ಮೋದಿಗೆ ಪರ್ಯಾಯವಾಗಿ ಈಗ ಮುನ್ನೆಲೆಗೆ ತರಲಾಗುತ್ತಿದೆ. ಗೂಗಲ್ ಸರ್ಚ್‌ನಲ್ಲಿ, ಇಂಗ್ಲಿಷ್ ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್‌ಗೆ ಈಗ ಹೆಚ್ಚುಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಜನಪ್ರಿಯತೆಯ ತೀವ್ರ ಕುಸಿತ ಕಾಣುತ್ತಿರುವ ಮೋದಿಯಿಂದ ಹೆಚ್ಚೇನೂ ಪ್ರಯೋಜನ ಇಲ್ಲವೆಂಬುದನ್ನು ಮನಗಂಡು ಕೆಲವು ಕಾರ್ಪೊರೇಟ್‌ಗಳು, ಮತ್ತಿತರ ದೊಡ್ಡ ಆಸ್ತಿವಂತ ಶಕ್ತಿಗಳು ರಾಹುಲ್ ಗಾಂಧಿಯನ್ನು ತಮ್ಮ ಪಗಡೆಯಾಟದ ಬದಲಿ ಕಾಯಿಯಾಗಿ ತಯಾರು ಮಾಡಿಕೊಳ್ಳುವಲ್ಲಿ ಸಾಕಷ್ಟು ಬಿರುಸಾಗಿವೆ. ಕಳೆದ ಪಂಚರಾಜ್ಯಗಳ ಚುನಾವಣೆಗಳಲ್ಲಿ ಒಂದಷ್ಟು ಯಶಸ್ಸು ಗಳಿಸಿ ಅಧಿಕಾರ ಗಳಿಸಿದ ಕಾಂಗ್ರೆಸ್ ಮೋದಿ ಅನುಸರಿಸುತ್ತಿರುವ ಅದೇ ಬ್ರಾಹ್ಮಣಶಾಹಿ ಹಾಗೂ ಭಾರೀ ಕಾರ್ಪೊರೇಟ್ ಪರ ನೀತಿಗಳನ್ನೇ ಅನುಸರಿಸುತ್ತಿರುವುದು ಎದ್ದು ಕಾಣುವ ವಿಚಾರ ತಾನೆ.

ಇದೇ ವರ್ಷ ನಡೆಯಲಿರುವ ಮಹಾಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿನ ಸರಕಾರ ರಚಿಸುವ ಮೂಲಕ ಮೋದಿ ಮಾಡಿರುವ ಅನಾಹುತಗಳನ್ನು ಸರಿಪಡಿಸಬಹುದೆಂಬ ಭಾವನೆಗಳನ್ನು ಜನರ ನಡುವೆ ಬಿತ್ತುವ ಕೆಲಸಗಳಲ್ಲಿ ಮೋದಿ ಹಾಗೂ ಬಿಜೆಪಿ ವಿರೋಧಿಗಳು ತೊಡಗಿದ್ದಾರೆ. ಇದರಲ್ಲಿ ಪ್ರಗತಿಪರವಾಗಿರುವ ಹಲವು ಶಕ್ತಿಗಳು ಸೇರಿಕೊಂಡಿದ್ದಾರೆ.

ರಾಹುಲ್ ಗಾಂಧಿಯ ಕಾಂಗ್ರೆಸ್, ಚಂದ್ರಬಾಬು ನಾಯ್ಡುವಿನ ತೆಲುಗು ದೇಶಂ, ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿ, ಎಚ್. ಡಿ. ದೇವೇಗೌಡರ ಜಾತ್ಯತೀತ ಜನತಾ ದಳ, ಸ್ಟಾಲಿನ್ ನೇತೃತ್ವದ ಡಿಎಂಕೆ, ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ, ಕಾಶ್ಮೀರದ ಫಾರೂಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್, ಗುಜರಾತಿನ ಪಾಟೀದಾರ್ ಮೀಸಲಾತಿ ಆಂದೋಲನದ ಹಾರ್ದಿಕ್ ಪಟೇಲ್, ಗುಜರಾತಿನ ಉನ್ನಾಂವ್ ಹೋರಾಟದಿಂದ ಮುನ್ನೆಲೆಗೆ ಬಂದು ಶಾಸಕರಾದ ಜಿಗ್ನೇಶ್ ಮೇವಾನಿ ಸೇರಿದಂತೆ ಇಪ್ಪತ್ತರಷ್ಟು ವಿರೋಧ ಪಕ್ಷಗಳು ಸೇರಿಕೊಂಡು ಮೋದಿಯ ಬಿಜೆಪಿಯನ್ನು ಸೋಲಿಸಿ ಸರಕಾರ ರಚನೆ ಮಾಡಬೇಕೆಂಬ ತಯಾರಿ ನಡೆಸಿವೆ.

ಇವುಗಳೊಂದಿಗೆ ವಾಜಪೇಯಿ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ, ಹೂಡಿಕೆ ಹಿಂದೆಗೆಯುವ ಖಾತೆಯ ಸಚಿವರಾಗಿದ್ದ ಅರುಣ್ ಶೌರಿ, ಬಿಜೆಪಿಯ ಸಂಸದ ಶತ್ರುಘ್ನ ಸಿನ್ಹಾ ಕೂಡ ಸೇರಿಕೊಂಡಿದ್ದಾರೆ. ಇತ್ತೀಚೆಗೆ ಕೋಲ್ಕಾತಾದಲ್ಲಿ ಇವುಗಳು ಭಾರೀ ಸಮಾವೇಶವೊಂದನ್ನು ಸಂಘಟಿಸಿ ನರೇಂದ್ರ ಮೋದಿಯ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ ತಮ್ಮ ಸರಕಾರ ರಚಿಸುವುದಾಗಿ ಹೇಳಿಕೊಂಡಿವೆ. ಇದರಲ್ಲಿ ಎಡಪಕ್ಷಗಳು ಯಾವುವೂ ಸೇರಿಕೊಳ್ಳಲಾಗಿಲ್ಲ. ಅದಕ್ಕೆ ಮಮತಾ ಬ್ಯಾನರ್ಜಿಯೇ ಕಾರಣವಾಗಿರಬಹುದು. ಪಶ್ಚಿಮ ಬಂಗಾಳದ ಸಿಪಿಐ (ಎಂ) ಪಕ್ಷದ ರಾಜ್ಯ ಘಟಕ ವಿರೋಧ ಪಕ್ಷಗಳ ಈ ನಡೆಯನ್ನು ವಿರೋಧಿಸಿದೆ.

‘ಜಸ್ಟ್ ಆಸ್ಕಿಂಗ್’ ಎಂದು ಮೋದಿ ಸರಕಾರದ ವಿರುದ್ಧ ಕಳೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗೀದಾರನಾಗಿದ್ದ ಹೆಸರಾಂತ ನಟ ಪ್ರಕಾಶ್ ರೈ ಕೂಡ ಚುನಾವಣಾ ಅಖಾಡಕ್ಕೆ ಇಳಿದು ಸಂಸತ್‌ನಲ್ಲಿ ಜನರ ಧ್ವನಿಯಾಗಲು ಸಿದ್ಧತೆ ಆರಂಭಿಸಿದ್ದಾರೆ. ಗುಜರಾತಿನ ಜಿಗ್ನೇಶ್ ಮೇವಾನಿ ಅಲ್ಲಿ ಸಿಡಿದೆದ್ದ ಸಾಮಾಜಿಕ ಆಂದೋಲನದಲ್ಲಿ ಭಾಗೀದಾರನಾಗಿ ನಂತರ ಚುನಾವಣಾ ಅಖಾಡಕ್ಕೆ ಇಳಿದು ಕಾಂಗ್ರೆಸ್ ಹಾಗೂ ಇತರ ಪ್ರಗತಿಪರ ಶಕ್ತಿಗಳ ಬೆಂಬಲದೊಂದಿಗೆ ಶಾಸಕನಾಗಿ ಆಯ್ಕೆಯಾದ ಉದಾಹರಣೆ ಪ್ರಕಾಶ್ ರೈಗೆ ಪ್ರೇರಣೆಯಾಗಿರಬಹುದು. ಅದೇ ರೀತಿಯ ಬೆಂಬಲ ಇಲ್ಲೂ ಸಿಗಬಹುದು ಎಂಬ ನಿರೀಕ್ಷೆಯೂ ಅವರಿಗಿರಬಹುದು. ಬೆಂಗಳೂರು ಸೆಂಟ್ರಲ್‌ನಿಂದಲೇ ಸ್ಪರ್ಧಿಸುವುದಾಗಿ ಪ್ರಕಾಶ್ ರೈ ಈಗಾಗಲೇ ಘೋಷಿಸಿದ್ದಾರೆ.

ಆದರೆ ಈಗ ಚುನಾವಣಾ ಸಂದರ್ಭದಲ್ಲಿ ಒಟ್ಟುಗೂಡಲು ಹೊರಟಿರುವ ಇವೆಲ್ಲವೂ ಒಂದಲ್ಲಾ ಒಂದು ಸರಕಾರದಲ್ಲಿ ಅಧಿಕಾರದಲ್ಲಿದ್ದವುಗಳೂ, ವ್ಯಕ್ತಿಗತ ಲಾಭಕ್ಕಾಗಿ ಪಕ್ಷಾಂತರ ಮಾಡಿರುವ; ಭ್ರಷ್ಟರೆಂದು, ಕ್ರೂರಿಗಳೆಂದೂ ಹೆಸರು ಪಡೆದಿರುವ ನಾಯಕರುಗಳಿಂದ ತುಂಬಿರುವ ಪಕ್ಷಗಳೇ ಆಗಿವೆ. ಅಲ್ಲದೇ ಮೋದಿ ಸರಕಾರ ಈಗ ಪಾಲಿಸುತ್ತಿರುವ ಭಾರಿ ಕಾರ್ಪೋರೇಟ್ ಪ್ರಣೀತ ಆರ್ಥಿಕ ನೀತಿಗಳನ್ನೇ ಪಾಲಿಸಿಕೊಂಡು ಬಂದಂತಹವುಗಳು ಹಾಗೂ ಬೆಂಬಲಿಸಿದಂತಹವುಗಳೇ ಆಗಿವೆ. ಅದರಲ್ಲಿ ಸಿಂಹಪಾಲು ಕಾಂಗ್ರೆಸ್‌ಗೆ ಸೇರಿದೆ. ಮೋದಿ ಸರಕಾರ ಈಗ ಮಾಡುತ್ತಿರುವುದು ಆ ನೀತಿಗಳ ಮುಂದುವರಿದ ಭಾಗ, ತಾವೂ ಅದರ ಭಾಗವಾಗಿದ್ದವರು ಎನ್ನುವುದನ್ನು ಈ ಪಕ್ಷಗಳು ಜಾಣತನದಿಂದ ಮರೆಮಾಚುತ್ತಿವೆ. ಈಗ ತಾವು ಕಾರ್ಪೊರೇಟ್‌ಗಳ ವಿರುದ್ಧವಿದ್ದೇವೆಂಬ ಪೋಸು ನೀಡಲು ಹೊರಟಿವೆ.

ಈ ಯಾವ ಪಕ್ಷಗಳೂ ಕೂಡ ಅನುಷ್ಠಾನಗೊಳ್ಳುತ್ತಿರುವ ಜಾಗತಿಕ ಕಾರ್ಪೊರೇಟ್ ನೀತಿಗಳ ವಿರುದ್ಧ ಹೋರಾಟ ಸಂಘಟಿಸಿದ ಇಲ್ಲವೇ ಬೆಂಬಲಿಸಿದ ಉದಾಹರಣೆ ಕೂಡ ಇಲ್ಲ. ಅಲ್ಲದೆ ಶರದ್ ಪವಾರ್, ಚಂದ್ರಬಾಬು ನಾಯ್ಡುಗಳಂತಹವರು ಭಾರೀ ಭ್ರಷ್ಟಾಚಾರಗಳಿಗೂ ಹೆಸರಾದವರು. ಚಂದ್ರಬಾಬು ನಾಯ್ಡು ಅವಿಭಜಿತ ಆಂಧ್ರಪ್ರದೇಶದಲ್ಲಿ ಕಾರ್ಪೊರೇಟ್‌ಗಳ ಮಾನಸ ಪುತ್ರನಂತೆ ಕಾರ್ಯನಿರ್ವಹಿಸಿದ್ದಲ್ಲದೇ ಹಲವು ಸಾವಿರ ಕೋಟಿಗಳ ಸತ್ಯಂ ಕಂಪ್ಯೂಟರ್ಸ್ ಹಗರಣದ ಜೊತೆಗೂ ಹೆಸರು ತಳುಕು ಹಾಕಿಕೊಂಡವರು. ಮಮತಾ ಬ್ಯಾನರ್ಜಿ ಶಾರದಾ ಹಣಕಾಸು ಹಗರಣದ ಜೊತೆ ಹೆಸರು ತಗಲಿಸಿಕೊಂಡವರು. ಮಮತಾ ಹಾಗೂ ಚಂದ್ರಬಾಬು ನಾಯ್ಡು ಜನಹೋರಾಟಗಳ ಮೇಲಿನ ಕ್ರೂರ ದಮನಕಾಂಡಕ್ಕೆ ಹೆಸರಾದವರು. ಕರಾಳ ಕಾನೂನುಗಳನ್ನು ಹೋರಾಟ ನಿರತ ಜನಸಾಮಾನ್ಯರ ಮೇಲೆ ಹೇರುವುದು ಸೇರಿದಂತೆ ಸುಳ್ಳು ಎನ್‌ಕೌಂಟರ್‌ಗಳನ್ನು ನಡೆಸಿ ಕಗ್ಗೊಲೆ ಮಾಡಿರುವ ಹಲವಾರು ಪ್ರಕರಣಗಳು ಇವರ ಅಧಿಕಾರಾವಧಿಯಲ್ಲಿ ನಡೆದಿವೆ. ದಲಿತ ಪರವೆಂದು ಬಿಂಬಿಸುತ್ತಾ ಅಧಿಕಾರ ಹಿಡಿದ ಬಹುಜನ ಸಮಾಜ ಪಾರ್ಟಿ ಕೂಡ ಸ್ವಜನಪಕ್ಷಪಾತ ಭ್ರಷ್ಟಾಚಾರಗಳಿಂದ ಹೊರತಾಗಿಲ್ಲವೆನ್ನುವುದು ಗೊತ್ತಿರುವ ಸತ್ಯ ತಾನೆ.

ಇನ್ನು ದೇಶದಲ್ಲಿ ಬಹುಕಾಲ ಆಡಳಿತ ನಡೆಸಿದ್ದಲ್ಲದೆ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ಪಕ್ಷ ಈ ದೇಶದ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಗಳಿಗೆ ನೇರವಾಗಿ ಮತ್ತು ಪ್ರಧಾನ ಕಾರಣವಾಗಿರುವ ಪಕ್ಷ. ಭಾರೀ ಆಸ್ತಿವಂತರು ಹಾಗೂ ಭಾರೀ ಕಾರ್ಪೊರೇಟ್‌ಗಳೇ ಇದರ ನೇತಾರರೂ ಆಗಿದ್ದವರು. ಸಹಜವಾಗಿಯೇ ಭಾರೀ ಆಸ್ತಿವಂತ ಹಾಗೂ ಕಾರ್ಪೊರೇಟ್‌ಗಳ ಪರ ಮತ್ತು ಜನಸಾಮಾನ್ಯರ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರಲ್ಲಿ ಈ ಪಕ್ಷದ ಪಾಲು ಪ್ರಧಾನವಾದುದು ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ. ಅದು ಜಾತಿವಾದ, ಕೋಮುವಾದ, ಬ್ರಾಹ್ಮಣವಾದ ಸೇರಿದಂತೆ ಎಲ್ಲವನ್ನೂ ಬಳಸುತ್ತಾ ಕ್ರೂರಾತಿಕ್ರೂರ ದಮನಕಾಂಡಗಳನ್ನು ಜನಸಾಮಾನ್ಯರ ಮೇಲೆ ನಡೆಸುತ್ತಾ ಬಂದ ಪಕ್ಷ. ಇದೇ ವರ್ಷದ ಜನವರಿ ತಿಂಗಳಲ್ಲಿ ಎರಡು ದಿನಗಳ ಭಾರತ್ ಬಂದ್ ಅನ್ನು ದೇಶದ ಕಾರ್ಮಿಕ ಸಮುದಾಯ ಆಚರಿಸಿದವು. ಹತ್ತಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದವು.

ಇದನ್ನು ಇತರ ಹಲವು ವ್ಯಾಪಾರಿ, ವ್ಯವಹಾರಿ ಸಂಘ ಸಂಸ್ಥೆಗಳು ಬೆಂಬಲಿಸಿದ್ದವು. ಗಣಿ, ಹಮಾಲಿ, ಅಂಚೆ, ಬ್ಯಾಂಕ್, ವಿಮೆ, ಸಾರಿಗೆ, ದೂರವಾಣಿ, ಸರಕಾರಿ ಮಾಲಕತ್ವದ ಕಂಪೆನಿಗಳ ಕಾರ್ಮಿಕರು ಅಲ್ಲದೇ ಬಹುರಾಷ್ಟ್ರೀಯ ಭಾರೀ ಕಾರ್ಪೊರೇಟ್ ಕಂಪೆನಿಗಳಾದ ಬಾಷ್, ಟೊಯೋಟಾ, ವೋಲ್ವೋ, ಸಿಯೆಟ್, ಕ್ರಾಂಪ್ಟನ್, ಸಾಮ್ಸೋನೈಟ್ ಮೊದಲಾದ ಕಾರ್ಮಿಕರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಕಾಫಿ ಹಾಗೂ ಚಹಾ ತೋಟಗಳ ಕಾರ್ಮಿಕರು, ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಚಿಲ್ಲರೆ ವರ್ತಕರು ಕೂಡ ಈ ಮುಷ್ಕರದಲ್ಲಿ ಪಾಲ್ಗೊಂಡರು. ಭಾರತ್ ಬಂದ್ ಬಹುತೇಕವಾಗಿ ಯಶಸ್ವಿಯಾಗಿಯೇ ನಡೆಯಿತು.

ಮಿಲಿಯಗಟ್ಟಲೆ ಕಾರ್ಮಿಕರು ಇನ್ನಿತರರು ಈ ಮುಷ್ಕರದಲ್ಲಿ ಪಾಲ್ಗೊಂಡು ಮೋದಿ ಸರಕಾರ ಅನುಸರಿಸುತ್ತಿರುವ ಜನವಿರೋಧಿ ನೀತಿಗಳು, ಹೇರುತ್ತಿರುವ ಬ್ರಾಹ್ಮಣಶಾಹಿ ನೀತಿಗಳ ವಿರುದ್ಧ ಮತ್ತು ವಿಪರೀತವಾಗಿರುವ ಬೆಲೆಯೇರಿಕೆ, ಹಣದುಬ್ಬರ ಹಾಗೂ ನಿರುದ್ಯೋಗ ಸಮಸ್ಯೆ, ಬದುಕು ನಡೆಸಲೇ ಸಾಧ್ಯವಾಗದಂತಹ ಪರಿಸ್ಥಿತಿಗಳ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದರು. ಇದು ಮೋದಿ ಸರಕಾರದ ವಿರುದ್ಧದ ಅತೀ ದೊಡ್ಡ ಪ್ರತಿಭಟನೆ ಯಾಗಿತ್ತು. ಮಿಲಿಯಾಂತರ ಜನರು ಈ ಬಂದ್‌ನಲ್ಲಿ ಸ್ವಯಿಚ್ಛೆಯಿಂದಲೇ ಪಾಲ್ಗೊಂಡರು. ಅದಕ್ಕೆ ಜನಸಾಮಾನ್ಯ ರಲ್ಲಿ ಅಷ್ಟು ಮಟ್ಟದ ರೋಷ ಮಡುಗಟ್ಟಿದ್ದೇ ಮುಖ್ಯ ಕಾರಣ.

ಆದರೆ ಎಡ ಪಕ್ಷಗಳ ಕೆಳಗಿರುವ ಕಾರ್ಮಿಕ ಸಂಘಟನೆಗಳ ನಾಯಕತ್ವಗಳು ಬಹುತೇಕ ಭ್ರಷ್ಟಗೊಂಡಿರುವುದರಿಂದ, ಅಲ್ಲದೆ ಕೆಲವು ಕಾರ್ಮಿಕ ಸಂಘಟನೆಗಳು ಕಾಂಗ್ರೆಸ್, ಡಿಎಂಕೆ, ಬಿಜೆಪಿಯಂತಹ ರಾಜಕೀಯ ಪಕ್ಷಗಳ ಅಡಿ ಇರುವುದರಿಂದಾಗಿ ಭಾರೀ ಕಾರ್ಪೊರೇಟ್‌ಗಳಿಗೆ ನಷ್ಟಗಳಾಗದಂತೆ ಬಂದ್‌ಗಳನ್ನು ಸಂಘಟಿಸಲಾಗಿತ್ತು. ಭಾರತೀಯ ರೈಲ್ವೆ, ವಿಮಾನಯಾನ ಮೊದಲಾದ ಕೀಲಕ ಕ್ಷೇತ್ರಗಳಲ್ಲಿ ಬಂದ್ ಆಚರಿಸದಂತೆ ನೋಡಿಕೊಳ್ಳಲಾಯಿತು. ಕೆಲವು ಕಡೆಗಳಲ್ಲಿ ಸಾರಿಗೆ ಕ್ಷೇತ್ರವನ್ನೂ ಕೈಬಿಡಲಾಗಿತ್ತು. ಚುನಾವಣೆ ಸಂದರ್ಭ ನೋಡಿಕೊಂಡು ಅದಕ್ಕೆ ತಕ್ಕಂತೆ ಭಾರತ್ ಬಂದ್ ಅನ್ನು ಸಂಘಟಿಸುವ ಮೂಲಕ ಆಯಾ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಲೆಕ್ಕಾಚಾರಗಳನ್ನು ಹಾಕಿದರು. ಆದರೆ ಹಕ್ಕೊತ್ತಾಯಗಳಲ್ಲಿ ಕೇವಲ ಸಂಬಳ ಏರಿಕೆಯಂತಹ ಆರ್ಥಿಕ ವಿಚಾರಗಳಿಗೆ ಮಾತ್ರ ಹೆಚ್ಚು ಒತ್ತು ಇರುವಂತೆ ನೋಡಿ ಕೊಂಡು ಜನರ ಹೆಚ್ಚುತ್ತಿರುವ ರಾಜಕೀಯ ಚೈತನ್ಯವನ್ನು ಹಿಡಿದಿಡಲು ಪ್ರಯತ್ನಿಸಲಾಯಿತು.

ಹಿಂದಿನ ಸರಕಾರಗಳಿಂದ ಬಳುವಳಿಯಾಗಿ ಬಂದ ಮೋದಿ ಸರಕಾರ ಅನುಸರಿಸುತ್ತಿರುವ ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆಯಾಗಲೀ, ಕೋಮುವಾದಿ, ಜಾತಿವಾದಿ, ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ನೀತಿಗಳ ಹೇರುವಿಕೆ ಮತ್ತು ದಾಳಿಗಳ ಬಗ್ಗೆ ಒತ್ತಾಗಲೀ, ಬಲವಾದ ಪ್ರತಿಭಟನೆಯಾಗಲೀ ಆಗದಂತೆ ನೋಡಿಕೊಳ್ಳಲಾಯಿತು. ಜನಸಾಮಾನ್ಯರ ಆಕ್ರೋಶ ಆಳುವ ಶಕ್ತಿಗಳು ಮತ್ತವರ ಬೆಂಬಲಕ್ಕಿರುವ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧ ತಿರುಗದಂತೆ ನೋಡಿಕೊಳ್ಳಲಾಯಿತು. ಕೇವಲ ಮೋದಿಯ ಬಿಜೆಪಿಯಿಂದಾಗಿ ಮಾತ್ರ ಭಾರೀ ಬಿಕ್ಕಟ್ಟು ಈಗ ಎದುರಾಗಿದೆ ಎಂಬಂತೆ ಬಿಂಬಿಸಲಾಯಿತು. ಅದರ ಮುಸುಗಿನಲ್ಲಿ ಆಶ್ರಯ ಪಡೆದು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಜನರ ಆಕ್ರೋಶವನ್ನು ತಣಿಸಿ ತಮ್ಮ ತಮ್ಮ ರಾಜಕೀಯ ಹಿತಾಸಕ್ತಿ ಹಾಗೇನೇ ಆಳುವ ಶಕ್ತಿಗಳ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಶ್ರಮಿಸಿದವು. ಮಮತಾ ಬ್ಯಾನರ್ಜಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಎರಡು ದಿನದ ಭಾರತ್ ಬಂದ್ ಮುಷ್ಕರದಲ್ಲಿ ಭಾಗವಹಿಸಿದ್ದ ಕಾರ್ಮಿಕರ ಮೇಲೆ ದಮನಕಾಂಡ ನಡೆಸಿ ಬೆದರಿಸಲಾಗಿತ್ತು. ತಮಿಳುನಾಡಿನಲ್ಲಿಯೂ ಇದು ನಡೆಯಿತು.

ದೇಶದ ಹಲವಾರು ಕಡೆಗಳಲ್ಲಿ ಕಾರ್ಮಿಕರು ಬೀದಿ ಕಾಳಗ ನಡೆಸಬೇಕಾದ ಅನಿವಾರ್ಯ ವಾತಾವರಣ ಸೃಷ್ಟಿಯಾಗಿದ್ದವು. ನೂರಾರು ಕಾರ್ಮಿಕರ ಮೇಲೆ ಪ್ರಕರಣಗಳು ದಾಖಲಾಗಿ ಬಂಧನ ಮಾಡಲಾಯಿತು. ಹಲವು ರಾಜ್ಯಗಳಲ್ಲಿ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ(ಎಸ್ಮಾ)ಯ ಮೂಲಕ ಕಾರ್ಮಿಕರ ಮುಷ್ಕರವನ್ನು ಮುರಿಯಲು ಸರಕಾರಗಳು ಶ್ರಮಿಸಿದವು. ಇದು ಮಹಾರಾಷ್ಟ್ರದಂತಹ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ, ತಮಿಳುನಾಡಿನಂತಹ ಕೇಂದ್ರ ಸರಕಾರದ ಬಾಲಂಗೋಚಿ ಸರಕಾರಗಳಿರುವ ರಾಜ್ಯಗಳಲ್ಲಿ ಹೆಚ್ಚು ನಡೆದವು. ಆದರೆ ಇದನ್ನೆಲ್ಲಾ ಮೀರಿ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಮುಷ್ಕರದಲ್ಲಿ ಪಾಲ್ಗೊಂಡಿದ್ದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಜನಸಾಮಾನ್ಯರ ಮೇಲಿನ ಇಂತಹ ದಾಳಿಗಳನ್ನು ಕೆಲವು ಎಡಪಕ್ಷಗಳು ಬಿಟ್ಟರೆ ಉಳಿದ ರಾಜಕೀಯ ಪಕ್ಷಗಳು ಪ್ರತಿಭಟಿಸಲಿಲ್ಲ.

ಹೀಗಿರುವಾಗ ಚುನಾವಣಾ ದೃಷ್ಟಿಯಿಂದ ಮಾತ್ರ ಏಕತೆ ಪ್ರದರ್ಶಿಸುವ ಈ ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಮೋದಿಯನ್ನು ಸೋಲಿಸಿ ಹೊಸ ಸರಕಾರ ರಚಿಸಿದರೂ ಮೂಲಭೂತವಾಗಿ ಏನಾದರೂ ಬದಲಾವಣೆ ಬರಲು ಸಾಧ್ಯವೇ.? ಇವುಗಳ ಬೆಂಬಲ ಪಡೆದು ಗೆದ್ದು ಬರುವ ಸ್ವತಂತ್ರ ಆಭ್ಯರ್ಥಿಗಳು ನಿಜವಾಗಿಯೂ ಸ್ವತಂತ್ರ ನಿಲುವುಗಳನ್ನು ಇಟ್ಟುಕೊಂಡು ಜನಪರವಾಗಿ ಕೆಲಸ ಮಾಡಲು ಸಾಧ್ಯವೇ?. ಇವೆಲ್ಲಾ ಸಾಧ್ಯವೆಂದು ಇದುವರೆಗಿನ ನಮ್ಮ ದೇಶದ ಉದಾಹರಣೆಗಳು ನಿರೂಪಿಸದಿರುವುದೇ ನಮ್ಮೆದುರು ಇರುವ ವಾಸ್ತವ ಸತ್ಯ ತಾನೆ. ಪರಿಸ್ಥಿತಿ ಹೀಗಿರುವಾಗ ಜನಸಾಮಾನ್ಯರು ತಮ್ಮ ನಾಡು ಹಾಗೂ ತಮ್ಮ ಭವಿಷ್ಯಕ್ಕಾಗಿ ಸ್ವತಃ ಜವಾಬ್ದಾರಿ ತೆಗೆದುಕೊಂಡು ಆಲೋಚಿಸಿ ಕಾರ್ಯ ಪ್ರವೃತ್ತರಾಗಬೇಕಾದ ಅಗತ್ಯ ಸಂದರ್ಭ ಇದಲ್ಲವೇ.!


ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News