ನುಡಿದಂತೆ ನಡೆದ ‘ಕಾಯಕಯೋಗಿ’ ನಾನು ಕಂಡಂತೆ...

Update: 2019-01-21 18:37 GMT

ಶ್ರೀ ಶಿವಕುಮಾರ ಸ್ವಾಮೀಜಿ ಎಂಬ ಮಹಾಚೇತನ ಇಂದು ಸಿದ್ದಗಂಗೆಯಲ್ಲಿ ಲೀನರಾಗಿದ್ದಾರೆ. ಎಲ್ಲ ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿ ಮನುಕುಲದ ಸಮಗ್ರ ಕಲ್ಯಾಣ ಬಯಸಿ, ಶತಮಾನದ ಕಾಲ ಆ ನಿಟ್ಟಿನಲ್ಲಿ ಅಹೋರಾತ್ರಿ ಶ್ರಮಿಸಿದ ಈ ಯೋಗಿ ಕೋಟ್ಯಂತರ ಸಹೃದಯಿಗಳ ಮನದಲ್ಲಿ ಅಚ್ಚಳಿಯದ ಮುದ್ರೆಯೊತ್ತಿದ್ದಾರೆ. 1999 ರಿಂದ 2004ರವರೆಗೆ ನಾನು ಪ್ರಜಾವಾಣಿ ತುಮಕೂರು ಜಿಲ್ಲಾ ವರದಿಗಾರನಾಗಿದ್ದ ವೇಳೆ ಅವರನ್ನು ತೀರಾ ಹತ್ತಿರದಿಂದ ಕಂಡಿದ್ದೆ. ನುಡಿದಂತೆ ನಡೆಯುವ ಅವರ ಹಲವು ಅನುಕರಣೀಯ ಆದರ್ಶಗಳನ್ನು ಅವರು ಸಮಾಜಕ್ಕೆ ಬಿಟ್ಟುಹೋಗಿದ್ದಾರೆ.

ಮೊದಲನೆಯದಾಗಿ ಸಿದ್ಧಗಂಗೆ ಸ್ವಾಮೀಜಿ ಎಂದಾಕ್ಷಣ ನೆನಪಿಗೆ ಬರುವುದು ಸಮಯಪ್ರಜ್ಞೆ. ಮುಂಜಾನೆ 3ರ ಸುಮಾರಿಗೆ ಆರಂಭವಾಗುವ ಅವರ ಕಾಯಕಯೋಗ, ರಾತ್ರಿ 12ರವರೆಗೂ ನಿರಂತರವಾಗಿ ಚಾಚೂ ತಪ್ಪದೇ ವೇಳಾಪಟ್ಟಿಗೆ ಅನುಗುಣ ವಾಗಿಯೇ ನಡೆಯುತ್ತಿತ್ತು. ದಿನಕ್ಕೆ ನೂರಾರು ಕಿಲೋಮೀಟರ್ ಸುತ್ತಾಡಿ, ಹತ್ತಾರು ಪಾದಪೂಜೆ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರೂ, ಒಂದು ದಿನ ಕೂಡಾ ಒಂದು ಸಮಾರಂಭಕ್ಕೂ ಅವರು ತಡವಾಗಿ ಬಂದವರಲ್ಲ. ಎಷ್ಟೇ ಗಣ್ಯಾತಿಗಣ್ಯರೇ ಆ ಸಮಾರಂಭದಲ್ಲಿ ಭಾಗವಹಿಸುವರಿರಲಿ, ಸ್ವಾಮೀಜಿಯವರಂತೂ ತಮಗೆ ಹೇಳಿದ ಸಮಯಕ್ಕೆ ಸರಿಯಾಗಿ ಅಲ್ಲಿ ಹಾಜರಿದ್ದು, ಆಶೀರ್ವಚನ ನೀಡುತ್ತಿದ್ದುದು ವಿಶೇಷ. ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಯವರಂಥ ಗಣ್ಯರು ಬರುವುದು ವಿಳಂಬವಾದರೂ ಯಾರಿಗೂ ಕಾಯುವ ಜಾಯಮಾನ ಸ್ವಾಮೀಜಿಯವರದ್ದಲ್ಲ; ಸಮಯದ ವಿಷಯದಲ್ಲಿ ಅಷ್ಟು ಕಟ್ಟುನಿಟ್ಟು.

ಸ್ವಾಮೀಜಿಯವರ ಸಾಮಾಜಿಕ ಕಳಕಳಿ ಮತ್ತೊಂದು ವಿಶಿಷ್ಟ ಗುಣ. ಶ್ರೀಗಳು ಪ್ರತಿ ಸಮಾರಂಭದಲ್ಲೂ ತಪ್ಪದೇ ಹೇಳುತ್ತಿದ್ದ ಒಂದು ವಾಕ್ಯವನ್ನಂತೂ ಇಲ್ಲಿ ಉಲ್ಲೇಖಿಸಲೇಬೇಕು: ಮನುಷ್ಯ ಇಂದು ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಲ್ಲ; ಮೀನಿನಂತೆ ನೀರಲ್ಲಿ ಈಜಾಡಬಲ್ಲ; ದುರಂತವೆಂದರೆ ಮನುಷ್ಯ ಇಂದು ಮನುಷ್ಯನಾಗಿ ಬದುಕುವುದು ಮರೆತಿದ್ದಾನೆ. ಮಾನವೀಯ ವೌಲ್ಯಗಳು ನಾಶವಾಗುತ್ತಿವೆ, ನೈತಿಕ ಅಧಃಪತನವಾಗುತ್ತಿದೆ. ಹಲವು ಬಾರಿ ಸ್ವಾಮೀಜಿಯವರ ಜತೆ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಿಸುವ ಅವಕಾಶಗಳು ಸಿಕ್ಕಿದ್ದಾಗ ಕೂಡಾ ಅವರ ಪ್ರತಿಯೊಂದು ವಿಚಾರಧಾರೆ ಕೂಡಾ ಸಮಾಜಮುಖಿಯಾಗಿದ್ದುದು ಕಂಡುಬರುತ್ತಿತ್ತು.

ಆಗಿನ್ನೂ ಸಿದ್ಧಗಂಗೆಯ ಉನ್ನತ ಶಿಕ್ಷಣ ಸಂಸ್ಥೆಗಳು ಅಷ್ಟೊಂದು ಬೆಳೆದಿರಲಿಲ್ಲ. ಈ ಬಗ್ಗೆ ಒಮ್ಮೆ ಸ್ವಾಮೀಜಿಯವರ ಜತೆ ಮಾತನಾಡುತ್ತಾ, ಹಲವು ಮಠಮಾನ್ಯಗಳು ಉನ್ನತ ಶಿಕ್ಷಣ ಸಂಸ್ಥೆಗಳನ್ನು, ವೈದ್ಯಕೀಯ ಕಾಲೇಜುಗಳನ್ನು ಕಟ್ಟಿವೆ. ನೀವು ಮಾತ್ರ ಪ್ರಾಥಮಿಕ, ಪ್ರೌಢಶಿಕ್ಷಣಕ್ಕೇ ಹೆಚ್ಚು ಒತ್ತು ನೀಡುತ್ತಿದ್ದೀರಲ್ಲ? ಎಂದು ಪ್ರಶ್ನಿಸಿದ್ದೆ. ಅದಕ್ಕೆ ಸ್ವಾಮೀಜಿಯವರಿಂದ ಥಟ್ಟನೆ ಬಂದ ಉತ್ತರ: ಅದನ್ನು ಮಾಡಲು ಸಾಕಷ್ಟು ಸಂಘ ಸಂಸ್ಥೆಗಳು, ಮಠಮಾನ್ಯಗಳಿವೆ. ಆದರೆ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡುವ ಸಂಸ್ಥೆಗಳು ಅಪರೂಪ. ರಾಜ್ಯದ ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕದ ಲಕ್ಷಾಂತರ ಮಕ್ಕಳು ಇಂದಿಗೂ ಪ್ರಾಥಮಿಕ ಶಿಕ್ಷಣದಿಂದ ಕೂಡಾ ವಂಚಿತವಾಗಿದ್ದಾರೆ. ಅವರಿಗೆ ಅನುಕೂಲ ಕಲ್ಪಿಸುವುದು ನಮ್ಮ ಆದ್ಯತೆ. ಇಂಥ ಕಳಕಳಿಯೇ ಅವರನ್ನು ಸಮಾಜದಲ್ಲಿ ಧ್ರುವ ನಕ್ಷತ್ರದಷ್ಟು ಎತ್ತರಕ್ಕೆ ಬೆಳೆಸಿದ್ದು.

ತಾಯಿ ಮಮತೆ

ಅಂದು ಸಿದ್ದಗಂಗೆ ಮಠ 10 ಸಾವಿರ ಮಂದಿಗೆ ಉಚಿತ ಸನಿವಾಸ ಶಿಕ್ಷಣ ನೀಡುತ್ತಿತ್ತು. ಎಂಟು- ಹತ್ತು ಕಟ್ಟಡಗಳ ನೂರಾರು ಕೊಠಡಿಗಳಲ್ಲಿದ್ದ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಸ್ವಾಮೀಜಿ ಪ್ರತಿದಿನ ವಿಚಾರಿಸುತ್ತಿದ್ದುದಕ್ಕೆ ನಾನೂ ಸಾಕ್ಷಿಯಾಗಿದ್ದೇನೆ. ಬೆಳಗ್ಗೆ 5ರ ಸುಮಾರಿಗೆ ಇಷ್ಟಲಿಂಗ ಪೂಜೆ ಮುಗಿಸಿ, ವಿದ್ಯಾರ್ಥಿಗಳಿದ್ದ ಪ್ರತಿ ಕೊಠಡಿಗೆ ಒಂದು ಬಾರಿ ಭೆೇಟಿ ನೀಡಿ ಅವರ ಬೇಕು- ಬೇಡ ವಿಚಾರಿಸುತ್ತಿದ್ದರು. ದಿನವಿಡೀ ಎಡೆಬಿಡದ ಕಾರ್ಯಕ್ರಮಗಳಿದ್ದರೂ, ಸಂಜೆ 6ಕ್ಕೆ ನಡೆಯುತ್ತಿದ್ದ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ವಾಮೀಜಿ ಪಾಲ್ಗೊಳ್ಳದೇ ಇರುವ ನಿದರ್ಶನ ನನ್ನ ಗಮನಕ್ಕೆ ಬಂದಿರಲಿಲ್ಲ.

ಶ್ರೀಮಠದ ವಿದ್ಯಾರ್ಥಿ ನಿಲಯಗಳು ಸರ್ವಧರ್ಮ ಸಮನ್ವಯ ತಾಣಗಳು. ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ನಿಲಯದಲ್ಲಿ ಸೀಟು ಪಡೆಯುವ ಹಂಬಲದಿಂದ ಹಾಗೂ ಸೀಟು ದೊರಕಿಯೇ ದೊರಕುತ್ತದೆ ಎಂಬ ವಿಶ್ವಾಸದಿಂದ ತಮ್ಮ ಮಕ್ಕಳು ಹಾಗೂ ಟ್ರಂಕ್‌ಗಳ ಸಹಿತವಾಗಿ ಶ್ರೀಮಠದ ಆವರಣಕ್ಕೆ ಬಂದು ಎರಡು- ಮೂರು ದಿನ ಠಿಕಾಣಿ ಹೂಡಿದ ಪೋಷಕರನ್ನು ಸ್ವಾಮೀಜಿ ಎಂದೂ ನಿರಾಸೆ ಮಾಡಿದ್ದಿಲ್ಲ. ಹಾಸ್ಟೆಲ್‌ನಲ್ಲಿ ಕೊಠಡಿಗಳು ವಿದ್ಯಾರ್ಥಿಗಳಿಂದ ತುಂಬಿ ತುಳುಕಿದರೂ, ಅನಾಥರಿಗೆ, ಬಡಬಗ್ಗರಿಗೆ, ಶಿಕ್ಷಣಾರ್ಥಿಗಳಿಗೆ ಸೀಟಿಲ್ಲ; ಭರ್ತಿಯಾಗಿದೆ ಎಂಬ ಮಾತು ಸ್ವಾಮೀಜಿಗಳಿಂದ ಕೇಳಿಬಂದದ್ದಿಲ್ಲ.

2001ನೇ ಇಸವಿ ಜೂನ್ 26ರ ಆ ದಿನ ಇನ್ನೂ ನನಗೆ ನೆನಪಿದೆ. ಅಂದು ಪ್ರತೀ ವರ್ಷ ನಡೆಯುವ ವಿದ್ಯಾರ್ಥಿ ಸಂಘದ ಚಾಲನಾ ಸಮಾರಂಭ. ಅಂದಿನ ಜಿಲ್ಲಾ ನ್ಯಾಯಾಧೀಶರಾಗಿದ್ದಜಾವೇದ್ ರಹೀಂ ಹಾಗೂ ನನ್ನನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು. ಅದೇ ದಿನ ಪತ್ರಿಕೆಯೊಂದರಲ್ಲಿ ಶ್ರೀಮಠದ ವಿದ್ಯಾರ್ಥಿ ನಿಲಯದ ಮಕ್ಕಳು ಕಜ್ಜಿಯಿಂದ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ವರದಿ ಪ್ರಕಟವಾಗಿತ್ತು. ಕಾರ್ಯಕ್ರಮದ ಸಲುವಾಗಿ ಹಾಗೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಸತ್ಯಾಸತ್ಯತೆ ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ ತುಸು ಮುಂಚಿತವಾಗಿಯೇ ಮಠ ತಲುಪಿದ್ದೆ. ಸಾರ್ವಜನಿಕ ಸಂಪರ್ಕಾಧಿಕಾರಿ ರೇಣುಕಾರಾಧ್ಯ ಅವರನ್ನು ಸಂಪರ್ಕಿಸಿ, ತಕ್ಷಣ ನಾನು ವಿದ್ಯಾರ್ಥಿ ನಿಲಯ ನೋಡಲು ಅವಕಾಶ ಮಾಡಿಕೊಡಬೇಕೆಂದು ಕೋರಿದೆ. ಆಡಳಿತಾಧಿಕಾರಿಗಳಿಂದ ಅಗತ್ಯ ಅನುಮತಿ ಪಡೆದು ವಜ್ರಮಹೋತ್ಸವ ಭವನ ಬ್ಲಾಕ್‌ನ ವಿದ್ಯಾರ್ಥಿಗಳ ಕೊಠಡಿಗೆ ನಾನು ಹೋಗಿ ನೋಡಿದಾಗ ಸ್ವತಃ ಸ್ವಾಮೀಜಿಯವರು ಮುಸ್ಲಿಂ ವಿದ್ಯಾರ್ಥಿಯೊಬ್ಬನ ಕಜ್ಜಿಗೆ ಮುಲಾಮು ಹಚ್ಚುತ್ತಿದ್ದರು! ಅವರ ಮಾತೃಹೃದಯಕ್ಕೆ ಮಾರುಹೋಗದವರಿಲ್ಲ.

ಆಗ ಸುಮಾರು ಅರ್ಧ ಗಂಟೆ ಕಾಲ ಮಾತನಾಡಿದ್ದ ಸ್ವಾಮೀಜಿಯವರು, ತಾವು ಪೀಠ ಸ್ವೀಕರಿಸಿದ ಕಾಲದ ಕಷ್ಟದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದರು. ಶ್ರೀಮಠದಲ್ಲಿದ್ದ ಇಪ್ಪತ್ತೋ ಮೂವತ್ತೋ ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುವ ಸಲುವಾಗಿ ಸುಮಾರು 100 ಕಿಲೋಮೀಟರ್ ದೂರದ ಸಕಲೇಶಪುರವರೆಗೂ ಕಾಲ್ನಡಿಗೆಯಲ್ಲಿ ತೆರಳಿ, ಜೋಳಿಗೆ ಹಿಡಿದು ಭಿಕ್ಷಾಟನೆ ನಡೆಸಿ ದವಸಧಾನ್ಯಗಳನ್ನು ಹೊತ್ತು ತರುತ್ತಿದ್ದುದನ್ನು ಹೇಳಿದ್ದರು. ಇಂದು ಮಠ ಭಕ್ತರ ಸಹಕಾರದಿಂದ ಸಮೃದ್ಧವಾಗಿದೆ. ಆದರೆ ಇದರ ಹಿಂದೆ ಲಕ್ಷಾಂತರ ಭಕ್ತರ ಅಪಾರ ತ್ಯಾಗವಿದೆ ಎಂದು ಸ್ವಾಮೀಜಿ ಉಲ್ಲೇಖಿಸಿದ್ದರು.

ಅದ್ಭುತ ಜ್ಞಾಪಕಶಕ್ತಿ ಇನ್ನೊಂದು ಉಲ್ಲೇಖಿಸಲೇಬೇಕಾದ ಅಂಶ. ಸಾಮಾನ್ಯವಾಗಿ ಅವರ ಒಡನಾಟಕ್ಕೆ ಬಂದ ಯಾರನ್ನೂ ಸ್ವಾಮೀಜಿ ಮರೆಯುತ್ತಿರಲಿಲ್ಲ. 2017ರ ಆಗಸ್ಟ್‌ನಲ್ಲಿ 15 ವರ್ಷಗಳ ದೀರ್ಘಕಾಲದ ಬಳಿಕ ಸ್ವಾಮೀಜಿಯವರನ್ನು ವೈಯಕ್ತಿಕವಾಗಿ ಭೆೇಟಿ ಮಾಡುವ ಅವಕಾಶ ದೊರಕಿತ್ತು. ರಾಜ್ಯವ್ಯಾಪಿ ಅಭಿಯಾನವೊಂದಕ್ಕೆ ಸ್ವಾಮೀಜಿಯವರ ಹಸ್ತಾಕ್ಷರ ಪಡೆಯುವ ಸಲುವಾಗಿ ಅವರನ್ನು ಬೇಟಿ ಮಾಡಿದ್ದೆವು. ಶ್ರೀಮಠದ ಅಧಿಕಾರಿಯೊಬ್ಬರು ನನ್ನ ಹೆಸರು ಹೇಳದೇ, ಹಿಂದೆ ಇಲ್ಲಿ ಪ್ರಜಾವಾಣಿ ಪ್ರತಿನಿಧಿಯಾಗಿದ್ದರು ಎಂದು ಸ್ವಾಮೀಜಿಯವರ ಕಿವಿಯಲ್ಲಿ ಹೇಳಿದರು. ಸ್ವಾಮೀಜಿ ನನ್ನ ಹೆಸರನ್ನು ಪ್ರಸ್ತಾಪಿಸಿ, ಶ್ರೀಮಠಕ್ಕೆ ಸಾಕಷ್ಟು ನೆರವು ಕೊಟ್ಟಿದ್ದಾರೆ ಎಂದು ಹೇಳಿದಾಗ ಮೂಕವಿಸ್ಮಿತನಾಗಿದ್ದೆ. ಆಗ ಸ್ವಾಮೀಜಿಯವವರಿಗೆ 110 ವರ್ಷ! ಹೀಗೆ ಎಷ್ಟೋ ವರ್ಷ ಹಳೆಯ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಸ್ವಾಮೀಜಿ ವಿವರಿಸುತ್ತಿದ್ದರು.

ಇನ್ನು ಸ್ವಾಮೀಜಿಯವರನ್ನು ಭೇಟಿ ಮಾಡಿ ಫೋಟೊ ತೆಗೆಸಿಕೊಂಡು ಪತ್ರಿಕೆಗಳಲ್ಲಿ ಪ್ರಚಾರ ಪಡೆದು ಸ್ವಾಮೀಜಿವರಿಗೆ ಆತ್ಮೀಯರು ಎಂದು ಬಿಂಬಿಸಿಕೊಳ್ಳುತ್ತಿದ್ದ ರಾಜಕಾರಣಿಗಳ ಬಗ್ಗೆ ಸ್ವಾಮೀಜಿಯವರನ್ನು ಒಮ್ಮೆ ಕೇಳಿದ್ದೆ. ಅದಕ್ಕೆ, ಮಠ ಯಾವುದೇ ಜಾತಿ- ಧರ್ಮದ ಸ್ವತ್ತಲ್ಲ; ಇಡೀ ಸಮಾಜಕ್ಕೆ ಸೇರಿದ್ದು. ರಾಜಕೀ ಯವಾಗಿ ಮಠ ಯಾವ ಪಕ್ಷವನ್ನೂ ಬೆಂಬಲಿಸಿಲ್ಲ. ಹಾಗೆಂದು ಆಶೀರ್ವಾದ ಬಯಸಿ ಬರುವ ಯಾವ ರಾಜಕಾರಣಿಗೂ ಮಠದ ಬಾಗಿಲು ಎಂದಿಗೂ ಮುಚ್ಚಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು.

ನೆನಪಿನ ಬುತ್ತಿ ಮೊಗೆದಷ್ಟೂ ಇಂಥ ಹತ್ತಾರು ನಿದರ್ಶನಗಳು ಬತ್ತದ ಚಿಲುಮೆಯಾಗಿ ಚಿಮ್ಮುತ್ತವೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಿದ್ದಗಂಗೆ ಶ್ರೀಗಳು ಹೇಗೆ ಬಾಳಬೇಕೆಂದು ಪ್ರವಚನ ಮಾಡಿದ್ದಕ್ಕಿಂತ ಹೆಚ್ಚಾಗಿ ಬದುಕಿ ತೋರಿಸಿದವರು. ನುಡಿದಂತೆ ನಡೆದ ಅಪರೂಪದ ವ್ಯಕ್ತಿತ್ವ. ಬಸವತತ್ವದ ಕಾಯಕಯೋಗಿ ಎಂಬ ಪದಕ್ಕೆ ಅನ್ವರ್ಥ.

Writer - ಉದಯಶಂಕರ ಭಟ್

contributor

Editor - ಉದಯಶಂಕರ ಭಟ್

contributor

Similar News