ಝೈರೆವ್‌ಗೆ ಆಘಾತ, ಸೆರೆನಾಗೆ ಮಣಿದ ಹಾಲೆಪ್

Update: 2019-01-21 18:39 GMT

ಮೆಲ್ಬೋರ್ನ್, ಜ.21: ಯುವ ಪ್ರತಿಭೆ, ಭವಿಷ್ಯದ ಚಾಂಪಿಯನ್ ಆಟಗಾರ ಎಂದೇ ಗುರುತಿಸಲ್ಪಡುತ್ತಿರುವ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಅವರ ಆಸ್ಟ್ರೇಲಿಯನ್ ಓಪನ್ ಅಭಿಯಾನ ಸೋಮವಾರ ಅಂತ್ಯಕಂಡಿದೆ. ಕೆನಡಾದ ಮಿಲೊಸ್ ರಾವೊನಿಕ್ ಅವರು ಝ್ವೆರೆವ್ ಅವರನ್ನು ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 6-1, 6-1, 7-6(5) ಸೆಟ್‌ಗಳಿಂದ ಮಣಿಸಿ ಪುರುಷರ ಸಿಂಗಲ್ಸ್ ನ ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಯಾಗಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಎಟಿಪಿ ವಿಶ್ವ ಟೂರ್‌ನಲ್ಲಿ ದೈತ್ಯ ಆಟಗಾರರರಾದ ನೊವಾಕ್ ಜೊಕೊವಿಕ್ ಹಾಗೂ ರೋಜರ್ ಫೆಡರರ್‌ಗೆ ಮಣ್ಣು ಮುಕ್ಕಿಸಿ ಸುದ್ದಿಯಾಗಿದ್ದ ಝ್ವೆರೆವ್, ಈ ಗ್ರಾನ್‌ಸ್ಲಾಮ್‌ನಲ್ಲಿ ಅದೇ ಪ್ರದರ್ಶನ ಮುಂದುವರಿಸುವಲ್ಲಿ ವಿಫಲರಾದರು.

ರವಿವಾರ ನಡೆದ ಪಂದ್ಯದಲ್ಲಿ ಫೆಡರರ್ ಅವರಿಗೆ ಸೋಲುಣಿಸಿ ಪ್ರತಿಭಾ ಪ್ರದರ್ಶನ ಮಾಡಿದ್ದ ಸ್ಟಿಫನೋಸ್‌ರಂತೆ ಝ್ವೆರೆವ್ ಕೂಡ ಮುನ್ನಡೆಯುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಬಹುಬೇಗ ಆ ನಿರೀಕ್ಷೆ ಹುಸಿಯಾಗಿದೆ.

ಪ್ರಥಮ ಸೆಟ್‌ನ ಆರಂಭದಲ್ಲೇ ಅಂಕ ಗಳಿಸುವ ಮೂಲಕ ಝ್ವೆರೆವ್ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದರು. ಆದರೆ ಸೆಟ್‌ನಲ್ಲಿ 6 ಅಂಕ ಗಳಿಸಿದ ರಾವೊನಿಕ್ ವಿಜಯಿ ಯಾದ ರು. ನಂತರದ ಸೆಟ್‌ನ್ನೂ 6-1ರಿಂದ ಕಳೆದುಕೊಂಡ ಝ್ವೆರೆವ್, ಮೂರನೇ ಹಾಗೂ ಕೊನೆಯ ಸೆಟ್‌ನಲ್ಲಿ 6 ಸರ್ವ್‌ಗಳನ್ನು ಗೆದ್ದುಕೊಂಡರೆ, ರಾವೊನಿಕ್ ಅವರಿಗಿಂತ ಒಂದು ಅಧಿಕ ಸರ್ವ್ ಗೆದ್ದುಕೊಂಡು ಪಂದ್ಯವನ್ನು ಜಯಿಸಿ ಬೀಗಿದರು.

ಗಾಯದಿಂದ ಹೊರಬಂದಿರುವ ರಾವೊನಿಕ್, 2016ರ ವಿಂಬಲ್ಡನ್‌ನಲ್ಲಿ ಫೈನಲ್ ತಲುಪಿ ಜೀವನಶ್ರೇಷ್ಠ ರ್ಯಾಂಕಿಂಗ್ ತಲುಪಿದ್ದರು. ಈಗ ತಾನು ಮೊದಲಿನ ಲಯವನ್ನು ಕಂಡುಕೊಂಡಿದ್ದೇನೆ ಎಂದು ಪಂದ್ಯದ ನಂತರ ಅವರು ಪ್ರತಿಕ್ರಿಯಿಸಿದರು.

ಸೋಲಿನಿಂದ ಹತಾಶರಾಗಿದ್ದ ಝ್ವೆರೆವ್, ರಾಕೆಟ್‌ನ್ನು ನೆಲಕ್ಕಪ್ಪಳಿಸಿ ಮುರಿದು ತಮ್ಮ ಹತಾಶಭಾವ ನೀಗಿಕೊಂಡರು.

ಹಾಲೆಪ್‌ಗೆ ಸೋಲು

ಅತ್ಯಂತ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ವಿಶ್ವ ನಂ.1 ಸಿಮೊನಾ ಹಾಲೆಪ್ ಸವಾಲನ್ನು ಮೀರಿ ನಿಂತ ಅಮೆರಿಕದ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಸೋಮವಾರ ಕ್ವಾರ್ಟರ್‌ಫೈನಲ್‌ಗೇರಿದ್ದಾರೆ.

ಪ್ರಥಮ ಗೇಮ್‌ನಲ್ಲಿ ಹಾಲೆಪ್, ಸೆರೆನಾರ ಸರ್ವ್ ಮುರಿದರು. ಆದರೆ ಅದಷ್ಟೇ ಅವರ ಮುನ್ನಡೆ. ಆ ನಂತರ ಆ ಸೆಟ್‌ನಲ್ಲಿ ಸೆರೆನಾ ಸಂಪೂರ್ಣ ಪ್ರಾಬಲ್ಯ ಮೆರೆದರು.23 ಗ್ರಾನ್‌ಸ್ಲಾಮ್ ವಿಜೇತ ಸೆರೆನಾ, 20 ನಿಮಿಷಗಳಲ್ಲಿ 6-1ರಿಂದ ಸೆಟ್ ಗೆದ್ದುಕೊಂಡರು.

ಫ್ರೆಂಚ್ ಓಪನ್ ಚಾಂಪಿಯನ್ ಹಾಲೆಪ್ ಎರಡನೇ ಸೆಟ್‌ನಲ್ಲಿ ಭರ್ಜರಿ ತಿರುಗೇಟು ನೀಡಿದರು. ಈ ಸೆಟ್‌ನ್ನು 6-4ರಿಂದ ಗೆದ್ದುಕೊಂಡ ಹಾಲೆಪ್ ಜಯದ ನಿರೀಕ್ಷೆಯಲ್ಲಿದ್ದರು. ಆದರೆ 7 ಬಾರಿಯ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ವಿಜೇತ ಸೆರೆನಾ ಮುಂದೆ ಹಾಲೆಪ್‌ರ ಆಟ ನಡೆಯಲಿಲ್ಲ. ಒಂದು ತಾಸು 47ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೂರನೇ ಸೆಟ್‌ನ್ನು ಗೆದ್ದು ಅಮೆರಿಕ ಆಟಗಾರ್ತಿ, ಒಂದು ಮಗುವಿನ ತಾಯಿ ಸೆರೆನಾ ಪಂದ್ಯದಲ್ಲಿ ಜಯ ಸಾಧಿಸಿದರು.

ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೆರೆನಾ, ಝೆಕ್ ಗಣರಾಜ್ಯದ 7ನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೊವಾರನ್ನು ಎದುರಿಸಲಿದ್ದಾರೆ. ಪ್ಲಿಸ್ಕೊವಾ ಇನ್ನೊಂದು ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡು ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಗಾರ್ಬೈನ್ ಮುಗುರುಝಾ ಅವರನ್ನು ಸೋಲಿಸಿ ಎಂಟರಘಟ್ಟಕ್ಕೆ ಕಾಲಿಟ್ಟಿದ್ದಾರೆ.

ಒಸಾಕಾ ಕ್ವಾ.ಫೈನಲ್‌ಗೆ

ಜಪಾನ್‌ನ 4ನೇ ಶ್ರೇಯಾಂಕದ ಆಟಗಾರ್ತಿ ನವೊಮಿ ಒಸಾಕಾ ಅವರು, 13ನೇ ಶ್ರೇಯಾಂಕದ ಲಾಟ್ವಿಯದ ಅನಸ್ತಾಸಿಜಾ ಅವರ ಸವಾಲನ್ನು ಮೆಟ್ಟಿನಿಂತು ಆಸ್ಟ್ರೇಲಿಯನ್ ಓಪನ್‌ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೋಮವಾರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಯುಎಸ್ ಓಪನ್ ಚಾಂಪಿಯನ್ ಒಸಾಕಾ 4-6, 6-3, 6-4 ಸೆಟ್‌ಗಳಿಂದ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ನಲ್ಲಿ ಉಕ್ರೇನ್‌ನ 6ನೇ ಶ್ರೇಯಾಂಕದ ಎಲಿನಾ ಸ್ವಿಟೊಲಿನಾ ಅವರನ್ನು ಎದುರಿಸಲು ವೇದಿಕೆ ಸಿದ್ಧಪಡಿಸಿಕೊಂಡರು.

ಮೂರನೇ ಸುತ್ತಿನ ಪಂದ್ಯದಲ್ಲಿ ಪ್ರಥಮ ಸೆಟ್‌ನಲ್ಲಿ ಸೋತು ನಂತರ ಪುಟಿದೆದ್ದು ನಿಂತಿದ್ದ ಒಸಾಕಾ, ಈ ಪಂದ್ಯದಲ್ಲೂ ಮೊದಲ ಸೆಟ್‌ನಲ್ಲಿ ಮಣಿದು ಫೀನಿಕ್ಸ್‌ನಂತೆ ಎದ್ದುಬಂದಿದ್ದು ವಿಶೇಷ.

28 ವರ್ಷದ ಅನಸ್ತಾಸಿಜಾ, ಆರಂಭಿಕ ಸೆಟ್‌ನಲ್ಲಿ ತಮಗಿಂತ ಕಿರಿಯ ಎದುರಾಳಿಯ ಮೇಲೆ ಒತ್ತಡವನ್ನು ಹೇರಲು ಯಶಸ್ವಿಯಾಗಿದ್ದರು. ಆದರೆ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿ ನಂತರದ ಎರಡು ಸೆಟ್‌ಗಳಲ್ಲಿ ಒಸಾಕಾ ಪ್ರಾಬಲ್ಯ ಸಾಧಿಸಿದರು. 21 ವರ್ಷದ ಒಸಾಕಾ ವಿರುದ್ಧದ ಪಂದ್ಯಗಳಲ್ಲಿ ದಿಟ್ಟ ಸೆವಾಸ್ತೊವಾ 2-2ರ ಸಮಬಲದ ಕಾದಾಟದ ದಾಖಲೆ ಹೊಂದಿದ್ದರು. ಇದೇ ತಿಂಗಳಲ್ಲಿ ನಡೆದ ಸಿಡ್ನಿ ಅಂತರ್‌ರಾಷ್ಟ್ರೀಯ ಟೂರ್ನಿಯಲ್ಲಿ 3 ಸೆಟ್‌ಗಳ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಒಸಾಕಾ ಅನಸ್ತಾಸಿಜಾ ಅವರನ್ನು ಮಣಿಸಿದ್ದರು.

ಸ್ವಿಟೊಲಿನಾ ಎಂಟರ ಘಟ್ಟಕ್ಕೆ

ಪ್ರಬಲ ಹೋರಾಟ ಕಂಡುಬಂದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅಮೆರಿಕದ ಮ್ಯಾಡಿಸನ್ ಕೀ ಅವರನ್ನು ಮಣಿಸಿದ 6ನೇ ಶ್ರೇಯಾಂಕದ ಎಲಿನಾ ಸ್ವಿಟೊಲಿನಾ ಸೋಮವಾರ ಆಸ್ಟ್ರೇಲಿಯನ್ ಓಪನ್‌ನ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 24 ವರ್ಷದ ಉಕ್ರೇನ್‌ನ ಸ್ವಿಟೊಲಿನಾ, 6-2, 1-6, 6-1 ಸೆಟ್‌ಗಳಿಂದ ಮ್ಯಾಡಿಸನ್ ಅವರನ್ನು ಸೋಲಿಸಿ ಪಾರಮ್ಯ ಮೆರೆದರು. ಮೊದಲ ಸೆಟ್‌ನ್ನು ಸುಲಭವಾಗಿ ತಮ್ಮ ಕಡೆ ವಾಲಿಸಿಕೊಂಡ ಸ್ವಿಟೊಲಿನಾ, ಎರಡನೇ ಸೆಟ್‌ನಲ್ಲಿ ಮ್ಯಾಡಿಸನ್‌ರಿಂದ ಭರ್ಜರಿ ಪ್ರತಿಕ್ರಿಯೆ ಎದುರಿಸಿದರು. ಎರಡನೇ ಸೆಟ್‌ನ್ನು ಮ್ಯಾಡಿಸನ್ 6-1ರಿಂದ ಸುಲಭವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡಾಗ, ಅವರ ಗೆಲುವಿನ ಆಸೆ ಗರಿಗೆದರಿತ್ತು. ನಂತರದ ಸೆಟ್‌ನಲ್ಲಿ ತಿರುಗೇಟು ನೀಡಿದ ಸ್ವಿಟೊಲಿನಾ 6-1ರಿಂದ ಸೆಟ್ ಗೆದ್ದುಕೊಂಡರು. ಸ್ವಿಟೊಲಿನಾ ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲೂ ಕ್ವಾರ್ಟರ್‌ಫೈನಲ್‌ಗೆ ತಲುಪಿದ ಸಾಧನೆ ಮೆರೆದಿದ್ದರು. ಅವರು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 4ನೇ ಶ್ರೇಯಾಂಕದ ಜಪಾನ್‌ನ ನವೊಮಿ ಒಸಾಕಾರನ್ನು ಎದುರಿಸಲಿದ್ದಾರೆ.

ಪೌಲ್ಲೆಗೆ ಜಯ

28ನೇ ಶ್ರೇಯಾಂಕದ ಫ್ರಾನ್ಸ್‌ನ ಲೂಕಾಸ್ ಪೌಲ್ಲೆ ಕ್ರೊಯೇಶಿಯದ ಬಾರ್ನಾ ಕೊರಿಕ್ ಅವರನ್ನು 6-7(4-7), 6-4, 7-5, 7-6 ಸೆಟ್‌ಗಳಿಂದ ಸೋಲಿಸಿ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 22 ವರ್ಷ ವಯಸ್ಸಿನ ಕೊರಿಕ್, ಮೊದಲ ಸೆಟ್‌ನ್ನು ಟೈಬ್ರೇಕರ್‌ನಲ್ಲಿ ಗೆದ್ದುಕೊಂಡರು. ಆದರೆ ಬಳಿಕ ಸತತ ಮೂರು ಸೆಟ್‌ಗಳಲ್ಲಿ ಸೋಲುವ ಮೂಲಕ ಅವರು ತಮ್ಮ ಅಭಿಯಾನ ಅಂತ್ಯಗೊಳಿಸಿದರು.

ಪೌಲ್ಲೆ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 16ನೇ ಶ್ರೇಯಾಂಕದ ಮಿಲೊಸ್ ರಾವೊನಿಕ್‌ರನ್ನು ಎದುರುಗೊಳ್ಳುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News