ಸಾಧನಾ ಸಿಂಗ್ ತಲೆ ಕಡಿದವರಿಗೆ 50 ಲಕ್ಷ ರೂ. ಬಹುಮಾನ ಘೋಷಿಸಿದ ಮಾಜಿ ಬಿಎಸ್‍ಪಿ ಶಾಸಕ !

Update: 2019-01-22 08:04 GMT

ಲಕ್ನೋ, ಜ. 22 : ಬಿಎಸ್‍ಪಿ ನಾಯಕಿ ಮಾಯಾವತಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ಶಾಸಕಿ ಸಾಧನಾ ಸಿಂಗ್ 48 ಗಂಟೆಗಳೊಳಗಾಗಿ ಮಾಯಾವತಿ ಹಾಗೂ ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಬೇಕು, ಇಲ್ಲದೇ ಹೋದಲ್ಲಿ ಆಕೆಯ ತಲೆಯನ್ನು ಕಡಿದ ವ್ಯಕ್ತಿಗೆ 50 ಲಕ್ಷ ರೂ. ನೀಡುತ್ತೇನೆ ಎಂದು ಮಾಜಿ ಬಿಎಸ್‍ಪಿ ಶಾಸಕ ವಿಜಯ್ ಯಾದವ್ ಘೋಷಿಸಿದ್ದಾರೆ.

''ಬಿಜೆಪಿ ಶಾಸಕಿ ಸಾಧನಾ ಸಿಂಗ್ ಗೌರವಾನ್ವಿತ ಬೆಹೆನ್‍ಜೀ ವಿರುದ್ಧ ನಿಂದನಾರ್ಹ ಹೇಳಿಕೆ ನೀಡಿದ್ದಾರೆ. ಆಕೆ ಬೆಹೆನ್‍ಜೀ ಮತ್ತು ದೇಶದ ಮಹಿಳೆಯರಿಂದ  48 ಗಂಟೆಗಳೊಳಗಾಗಿ ಕ್ಷಮೆಯಾಚಿಸಬೇಕು. ಹಾಗೆ ಮಾಡದೇ ಇದ್ದರೆ ನಾವು ನಮ್ಮ ಬೆಂಬಲಿಗರಿಂದ ಹಾಗೂ ಕಾರ್ಯಕರ್ತರಿಂದ  ಹಣ ಸಂಗ್ರಹಿಸಿ ಶಾಸಕಿಯ ತಲೆ ಕಡಿದು ನಮಗೆ ತಂದಿತ್ತ ಯಾರಿಗೇ ಆದರೂ 50 ಲಕ್ಷ ರೂ. ನೀಡುತ್ತೇನೆ'' ಎಂದು ಮೊರಾದಾಬಾದ್ ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಯಾದವ್ ಹೇಳಿದರು.

ಮಾಜಿ ಶಾಸಕರಾಗಿರುವ ಯಾದವ್ ಇತ್ತೀಚೆಗೆ ಬಿಜೆಪಿ ಸದಸ್ಯರ ಮೇಲೆ ಹಲ್ಲೆ ನಡೆಸುವ ಬೆದರಿಕೆಯೊಡ್ಡಿದ್ದಕ್ಕಾಗಿ ಹಾಗೂ ಎಸ್‍ಪಿ-ಬಿಎಸ್‍ಪಿ ಮೈತ್ರಿ ಆವರಿಗೆ (ಬಿಜೆಪಿಗೆ) ಅವರ `ಸತ್ತ ಅಜ್ಜಿಯಂದಿರ' ನೆನಪು ತಂದಿದ್ದಾಗಿ ಹೇಳಿ ಸುದ್ದಿಯಲ್ಲಿದ್ದರು.

ಈತನ್ಮಧ್ಯೆ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರನಾಥ್ ಸಿಂಗ್ ಪ್ರತಿಕ್ರಿಯಿಸಿ ಸಾಧನಾ ಸಿಂಗ್ ಹೇಳಿದ್ದರಲ್ಲಿ ತಪ್ಪೇನಿಲ್ಲ ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದೇ ಆದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News