ಸಿಬಿಐ ಹಂಗಾಮಿ ನಿರ್ದೇಶಕ ನಾಗೇಶ್ವರ ರಾವ್ ರಿಂದ 20 ಅಧಿಕಾರಿಗಳ ವರ್ಗಾವಣೆ

Update: 2019-01-22 09:19 GMT

ಹೊಸದಿಲ್ಲಿ, ಜ.22: ನೂತನ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡಲು ಉನ್ನತಾಧಿಕಾರ ಆಯ್ಕೆ ಸಮಿತಿಯ ಸಭೆ ನಡೆಯಲು ಇನ್ನೇನು ಎರಡೇ ದಿನಗಳಿವೆಯೆನ್ನುವಾಗ ಹಂಗಾಮಿ ಸಿಬಿಐ ನಿರ್ದೇಶಕ ಎಂ. ನಾಗೇಶ್ವರ ರಾವ್ ಸುಮಾರು 20 ಅಧಿಕಾರಿಗಳ ವರ್ಗಾವಣೆ ನಡೆಸಿದ್ದಾರೆ. 2ಜಿ ಹಗರಣದ ತನಿಖೆ ನಡೆಸುತ್ತಿದ್ದ ಅಧಿಕಾರಿ ವಿವೇಕ್ ಪ್ರಿಯದರ್ಶಿ ಅವರನ್ನೂ ವರ್ಗಾಯಿಸಲಾಗಿದೆ.

ಇಲ್ಲಿಯ ತನಕ ದಿಲ್ಲಿಯ ಭ್ರಷ್ಟಾಚಾರ ನಿಗ್ರಹ ದಳದಲ್ಲಿದ್ದ ಪ್ರಿಯದರ್ಶಿಯನ್ನು ಚಂಡೀಗಢಕ್ಕೆ ವರ್ಗಾಯಿಸಲಾಗಿದೆ. ಆದರೆ  ನ್ಯಾಯಾಲಯದಿಂದ ಯಾವುದೇ ನಿರ್ದಿಷ್ಟ ಪ್ರಕರಣದ ತನಿಖೆ, ಉಸ್ತುವಾರಿ ನಡೆಸಲು ನಿರ್ದೇಶನ ಪಡೆದ ಅಧಿಕಾರಿಗಳು ಆ ಪ್ರಕರಣದ ತನಿಖೆ ಮುಂದುವರಿಸಬಹುದು ಎಂದು ವರ್ಗಾವಣೆ ಆದೇಶದಲ್ಲಿ ತಿಳಿಸಲಾಗಿದೆ.

ಹದಿಮೂರು ಜನರನ್ನು ಬಲಿ ಪಡೆದ ತಮಿಳುನಾಡಿನ ಸ್ಟರ್ಲೈಟ್ ವಿರೋಧಿ ಪ್ರತಿಭಟನೆಗಳ ತನಿಖೆ ನಡೆಸುತ್ತಿದ್ದ ಎ. ಸರವಣನ್ ಅವರನ್ನು ಮುಂಬೈಯಲ್ಲಿರುವ ಸಿಬಿಐನ ಬ್ಯಾಂಕಿಂಗ್, ಸೆಕ್ಯುರಿಟೀಸ್ ಮತ್ತು ವಂಚನೆ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿದೆ. ಈ ಘಟಕವು ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಆರೋಪಿಗಳಾಗಿರುವ ಬ್ಯಾಂಕ್ ವಂಚನೆ ಪ್ರಕರಣಗಳ ಸಹಿತ ಹಲವು ಇತರ ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ. ಆದರೆ ಸ್ಟರ್ಲೈಟ್ ಪ್ರಕರಣದ ತನಿಖೆಯನ್ನು ಅವರು ಮುಂದುವರಿಸಿಕೊಂಡು ಹೋಗಲಿದ್ದಾರೆ ಎಂದು ಆದೇಶ ತಿಳಿಸಿದೆ.

ಅಧಿಕಾರಿಗಳ ಮೇಲೆ ನಿಗಾ ಇಡುವ ಸಿಬಿಐ ವಿಶೇಷ ಘಟಕದ ಅಧಿಕಾರಿ ಪ್ರೇಮ್ ಗೌತಮ್ ಅವರನ್ನು ಆ ಹುದ್ದೆಯಿಂದ ತೆಗೆದು ಹಾಕಲಾಗಿದೆ. ಆದರೆ ಅವರು ಆರ್ಥಿಕ ಅಪರಾಧ ಪ್ರಕರಣಗಳ ತನಿಖೆ ಮುಂದುವರಿಸಲಿದ್ದು, ಉಪ ನಿರ್ದೇಶಕ(ಸಿಬ್ಬಂದಿ) ಹೆಚ್ಚುವರಿ ಹುದ್ದೆಯನ್ನು ನಿರ್ವಹಿಸಲಿದ್ದಾರೆ. ಚಂಡೀಗಢದ ವಿಶೇಷ ಕ್ರೈಂ ಬ್ರಾಂಚಿನ ಅಧಿಕಾರಿ ರಾಮ್ ಗೋಪಾಲ್ ಅವರನ್ನು ಗೌತಮ್ ಬದಲಿಗೆ ನೇಮಿಸಲಾಗಿದೆ.

ನಾಗೇಶ್ವರ ರಾವ್ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿಸಿದ ಕ್ರಮವನ್ನು ಪ್ರಶ್ನಿಸಿ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಿರುವ ಅಪೀಲಿನ ಮೇಲಿನ ವಿಚಾರಣೆ ಜನವರಿ 24ರಂದು ನಡೆಯಲಿದೆ.

ಮೊದಲ ಬಾರಿ ಸಿಬಿಐ ಹಂಗಾಮಿ ನಿರ್ದೇಶಕರಾಗಿ ನೇಮಕಗೊಂಡಾಗಲೂ ರಾವ್ ಹಲವು ಅಧಿಕಾರಿಗಳನ್ನು ವರ್ಗಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News