ಮನೆಗಳ್ಳತನ ಪ್ರಕರಣ: ಮೂವರು ಆರೋಪಿಗಳ ಸೆರೆ

Update: 2019-01-22 16:57 GMT

ಬೆಂಗಳೂರು, ಜ.22: ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ, ಕಳವು ಮಾಡುತ್ತಿದ್ದ ಆರೋಪದಡಿ ತಿಪಟೂರಿನ ಕುಮಾರ್ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಇಲ್ಲಿನ ಉತ್ತರ ವಿಭಾಗದ ಶ್ರೀರಾಂಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಶಾಂತಿಗ್ರಾಮದ ಡಿ. ಗಣೇಶ, ತಿಪಟೂರಿನ ಕುಮಾರ್ ಹಾಗೂ ಕೆಂಗೇರಿ ನಿವಾಸಿ ರಿಯಾಝ್ ಅನೀಫ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ನಗರದ ಜಕ್ಕರಾಯನಕೆರೆ ನಿವಾಸಿ ಎಸ್.ಆರ್ಮುಗಂ ಎಂಬುವರು ಹಿಂದಿನ ನವೆಂಬರ್‌ನಲ್ಲಿ ಮನೆಗೆ ಬೀಗ ಹಾಕಿಕೊಂಡು ತಮಿಳುನಾಡಿಗೆ ಹೋಗಿದ್ದರು. ಬಳಿಕ ವಾಪಸ್ಸು ಬಂದು ನೋಡಿದಾಗ, ದುಷ್ಕರ್ಮಿಗಳು ಮನೆಗೆ ನುಗ್ಗಿ ಬೀರುನಲ್ಲಿಟ್ಟಿದ್ದ ಚಿನ್ನಭಾರಣ ದೋಚಿ ಪರಾರಿ ಆಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ 1.80 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈ ಹಿಂದೆ ಶೇಷಾದ್ರಿಪುರಂ ಮತ್ತು ಶ್ರೀರಾಂಪುರ ಪೊಲೀಸ್ ಠಾಣೆಯ ಕಳ್ಳತನ ಪ್ರಕರಣಗಳಲ್ಲಿ ದಸ್ತಗಿರಿಯಾಗಿದ್ದು, ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಿ ಬಂದು ಈ ಕೃತ್ಯವೆಸಗಿರುವುದಾಗಿ ತಿಳಿಸಿರುತ್ತಾರೆ ಎಂದು ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಧನಂಜಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News