ರೋಸ್ಟರ್ ಮಾಸ್ಟರ್ ಕೊಲಿಜಿಯಂ ಮಾಸ್ಟರ್ ಆಗಿದ್ದಾರೆ

Update: 2019-01-22 18:42 GMT

2018ರ ಜನವರಿ 12ರ ಪ್ರತಿಕಾಗೋಷ್ಠಿಯ ಬಳಿಕ ಸುಪ್ರೀಂ ಕೋರ್ಟ್ ನಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ? ಹೌದು, ರೋಸ್ಟರ್‌ನ (ಯಾದಿ/ಪಟ್ಟಿಯ) ಮಾಸ್ಟರ್ (ಮುಖ್ಯಸ್ಥ) ಕೊಲಿಜಿಯಂನ ಮುಖ್ಯಸ್ಥ (ಮಾಸ್ಟರ್) ಕೂಡ ಆಗಿದ್ದಾರೆ ಎಂದು ನನ್ನ ಗಮನಕ್ಕೆ ಬಂದ ಆಘಾತಕಾರಿ ಸಂಗತಿಗಳಿಂದ ತಿಳಿದುಬರುತ್ತದೆ.

ಇದನ್ನು ನೋಡಿ: 2018ರ ಡಿಸೆಂಬರ್ 12ರಂದು ಕೊಲಿಜಿಯಂ ಸಭೆ ಸೇರಿ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿತು. 2019ರ ಜನವರಿ 10ರ ಕೊಲಿಜಿಯಂನ ನಿಲುವಳಿಯಿಂದ ಇದು ಸ್ಪಷ್ಟವಾಗುತ್ತದೆ. ರಾಜಸ್ಥಾನ ಹೈಕೋರ್ಟ್‌ನ ಮುಖ್ಯನ್ಯಾಯಾಧೀಶ ಪ್ರದೀಪ್ ನಂದ್ರಜೋಗ್ ಮತ್ತು ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್‌ರವರಿಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡುವುದು ಅಂದಿನ ತೀರ್ಮಾನಗಳಲ್ಲಿ ಒಂದು ಆಗಿತ್ತು. ಆದರೆ ಜನವರಿ 10ರ ನಿಲುವಳಿ ಈ ನಿರ್ಧಾರಗಳನ್ನು ಬುಡಮೇಲುಗೊಳಿಸಿತು.
ಈಗ ಇರುವ ಕ್ರಮದಂತೆ, ಆ ನಿರ್ಣಯವನ್ನು ಸರಕಾರಕ್ಕೆ ತಿಳಿಸಬೇಕಾಗಿತ್ತು ಹಾಗೂ ಸುಪ್ರೀಂ ಕೋರ್ಟ್‌ನ ವೆಬ್‌ಸೈಟಿಗೆ ಅಪ್‌ಲೋಡ್ ಮಾಡಬೇಕಾಗಿತ್ತು. ಆದರೆ ಇದೆರಡನ್ನೂ ಮಾಡಲಿಲ್ಲ ಯಾಕೆ?

ಕಾರಣ ಏನೇ ಇರಲಿ, ಇದಕ್ಕಿಂತ ಹೆಚ್ಚು ಪ್ರಸ್ತುತವಾದ ಪ್ರಶ್ನೆ:
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ತಾನಾಗಿಯೇ, ಕೊಲಿಜಿಯಂನ ನಿಲುವಳಿಯೊಂದರ ಸುದ್ದಿಯನ್ನು ಸರಕಾರಕ್ಕೆ ತಿಳಿಸುವ ಹಾಗೂ ಪ್ರಕಟಿಸುವ ಪ್ರಕ್ರಿಯೆಯನ್ನು ತಡೆಹಿಡಿಯಬಹುದೇ? ತಡೆಹಿಡಿಯ ಬಹುದಾದಲ್ಲಿ, ಅವರಿಗೆ ಅಂತಹ ಒಂದು ಬೇಕಾಬಿಟ್ಟಿ ಅಧಿಕಾರ ಎಲ್ಲಿಂದ ಬರುತ್ತದೆ?
‘‘ನ್ಯಾಯಾಲಯದ ಚಳಿಗಾಲದ ರಜೆ ಆರಂಭವಾದ್ದರಿಂದ ಅವಶ್ಯವಾಗಿದ್ದ ಸಮಾಲೋಚನೆಯನ್ನು ಪೂರ್ಣಗೊಳಿಸಲು ಆಗಲಿಲ್ಲ’’ ಎಂಬ ಕಾರಣ ನೀಡಲಾಗಿದೆ. ಇದು ಪ್ರಕ್ರಿಯೆಯ ಪತ್ರಕ್ಕೆ (ಎಂಒಪಿ) ಸಂಬಂಧಿಸಿದ 8ನೇ ನಿಯಮ ಉಲ್ಲೇಖಿಸುವ ವಿಷಯ. ಆ ನಿಯಮದ ಪ್ರಕಾರ ಕೊಲಿಜಿಯಂನ ಇತರ ನ್ಯಾಯಾಧೀಶರೊಡನೆ ಮುಖ್ಯ ನ್ಯಾಯಾಧೀಶರು ಸಮಾಲೋಚಿಸಿ ಅವರ ಅಭಿಪ್ರಾಯಗಳನ್ನು ಖಚಿತ ಪಡಿಸಿಕೊಳ್ಳಬೇಕು. ಆದರೆ ಮುಖ್ಯ ನ್ಯಾಯಾಧೀಶರು ಕೊಲಿಜಿಯಂನ ಹೊರಗಿನ ನ್ಯಾಯಾಧೀಶರ ಅಭಿಪ್ರಾಯ ಪಡೆಯಲೇಬೇಕಾಗಿಲ್ಲ (ಆ ನ್ಯಾಯಾಧೀಶರನ್ನು ‘ಕನ್ಸಲ್ಟೀ ನ್ಯಾಯಾಧೀಶ’ರೆಂದು ಕರೆಯಲಾಗುತ್ತದೆ.)

ಬಾಹ್ಯ ಸಮಾಲೋಚನೆ
ಹಾಗಾದರೆ ಅವಶ್ಯವೆಂದು ಕಂಡುಬಂದಲ್ಲಿ ಕೊಲಿಜಿಯಂನ ಸದಸ್ಯರಲ್ಲದ ಬಾಹ್ಯ ನ್ಯಾಯಾಧೀಶರ ಜತೆಗೆ ಯಾವಾಗ ಸಮಾಲೋಚನೆ ನಡೆಯಬೇಕು? ಸಹಜವಾಗಿಯೇ ಕೊಲಿಜಿಯಂ ಒಂದು ನಿರ್ಣಯ ತೆಗೆದುಕೊಳ್ಳುವ ಮೊದಲು. ಆದರೆ ತೀರ್ಮಾನ ತೆಗೆದುಕೊಂಡ ಬಳಿಕ, ಕನ್ಸಲ್ಟೀ ನ್ಯಾಯಾಧೀಶರ ಅಭಿಪ್ರಾಯವನ್ನಾಧರಿಸಿ ಕೊಲಿಜಿಯಂ ತನ್ನ ನಿಲುವಳಿಯನ್ನು ಬದಲಿಸಬಹುದೇ?

 ಸದ್ಯ ಅನುಸರಿಸಲಾಗುತ್ತಿರುವ ಕ್ರಮದಂತೆ ಕನ್ಸಲ್ಟೀ ನ್ಯಾಯಾಧೀಶರ ಅಭಿಪ್ರಾಯವನ್ನೂ ಒಳಗೊಂಡು 2019ರ ಜನವರಿ 10ರಂದು ಕೊಲಿಜಿಯಂ ತೆಗೆದುಕೊಂಡ ನಿರ್ಧಾರವನ್ನೂ ಸರಕಾರಕ್ಕೆ ತಿಳಿಸಬೇಕಾಗಿತ್ತು. ಯಾಕೆಂದರೆ ಈಗ ಅದನ್ನು ಸುಪ್ರೀಂಕೋರ್ಟ್‌ನ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ. ಹಾಗಾಗಿ ಸರಕಾರವು ಪುನರ್ ಪರಿಶೀಲನೆಗಾಗಿ ಆ ನಿರ್ಧಾರವನ್ನು ಕೊಲಿಜಿಯಂಗೆ ಹಿಂದೆ ಕಳುಹಿಸಬಹುದು ಅಥವಾ ಕನ್ಸಲ್ಟೀ ನ್ಯಾಯಾಧೀಶರ ಅಭಿಪ್ರಾಯಗಳನ್ನು ತಿರಸ್ಕರಿಸಲೂಬಹುದು. ಸರಕಾರ ಹೀಗೇನಾದರೂ ತಿರಸ್ಕರಿಸಿದ್ದಲ್ಲಿ ಅದು ದುರದೃಷ್ಟಕರವಾಗುತ್ತದೆ. ಆದರೆ ಆ ಅಭಿಪ್ರಾಯಗಳನ್ನು ಒಪ್ಪಿದ್ದಲ್ಲಿ ಮರು ಪರಿಶೀಲನೆಗಾಗಿ ಆ ನಿರ್ಧಾರವನ್ನು ಸರಕಾರ ಕೊಲಿಜಿಯಂಗೆ ಮರಳಿಸಬಹುದು. ಆಗ ಕೊಲಿಜಿಯಂ ತನ್ನ ನಿರ್ಧಾರಕ್ಕೆ ಬದ್ದವಾಗಲೂಬಹುದು ಅಥವಾ ಅದನ್ನು ಹಿಂದಕ್ಕೆ ಪಡೆಯಬಹುದು. ಕೊಲಿಜಿಯಂ ಒಂದು ನಿಲುವಳಿಯನ್ನು ಅಂಗೀಕರಿಸಿದ ಮೊದಲೇ ಕನ್ಸಲ್ಟೀ ನ್ಯಾಯಾಧೀಶರ ಅಭಿಪ್ರಾಯಗಳನ್ನು ಪಡೆದಲ್ಲಿ ಇಂತಹ ಗೋಜಲು ಪ್ರಕ್ರಿಯೆಯನ್ನು ದೂರವಿಡಬಹುದು.

ಯಾವಾಗ ಎಂಬ ಪ್ರಶ್ನೆ
‘‘ಕೊಲಿಜಿಯಂನ ಇತರ ನ್ಯಾಯಾಧೀಶರೊಡನೆ ಸಮಾಲೋಚಿಸದೆ’’ ಕನ್ಸಲ್ಟೀ ನ್ಯಾಯಾಧೀಶರ ಅಭಿಪ್ರಾಯಗಳು ಅವಶ್ಯವೆಂದು ಮುಖ್ಯ ನ್ಯಾಯಾಧೀಶರಿಗೆ ಹೊಳೆದದ್ದು ಯವಾಗ? ಒಂದೋ, ಸುಪ್ರೀಂ ಕೋರ್ಟ್ ಚಳಿಗಾಲದ ರಜೆಗಾಗಿ ಮುಚ್ಚುವ ಮೊದಲು, ಅಥವಾ ರಜಾ ಅವಧಿಯಲ್ಲಿ. ರಜಾ ಅವಧಿಯಲ್ಲಾಗಿದ್ದರೆ, ಅವರು ಕೂಡಲೇ ಕೊಲಿಜಿಯಂನ ನ್ಯಾಯಾಧೀಶರುಗಳಿಗೆ ಆ ಬಗ್ಗೆ ತಿಳಿಸಬೇಕಾಗಿತ್ತಲ್ಲವೇ?
ಅವರು 2019ರ ಜನವರಿ 2ರಂದು ಸುಪ್ರೀಂ ಕೋರ್ಟ್ ಪುನರಾರಂಭವಾದಾಗ ತನ್ನ ನಿರ್ಧಾರದ ಬಳಿಕದ ಸಮಾಲೋಚನೆಯನ್ನು ಆರಂಭಿಸಬಹುದಾಗಿತ್ತು. ಆ ವೇಳೆಗೆ ಕೊಲಿಜಿಯಂನ ಸದಸ್ಯರು ಬದಲಾಗಿದ್ದರಿಂದ ಪ್ರಾಯಶಃ ಅವರು ಹೀಗೆ ಮಾಡಲಿಲ್ಲ. ಆದರೆ ಇದು ಸ್ವೀಕಾರಾರ್ಹವಾದ ಕಾರಣವಲ್ಲ.

ಹೆಚ್ಚುವರಿ ವಿಷಯಗಳು
ಮುಖ್ಯ ನ್ಯಾಯಾಧೀಶರಿಗೆ ಕೆಲವು ಹೆಚ್ಚುವರಿ ವಿಷಯಗಳು, ಸಂಗತಿಗಳು ಲಭ್ಯವಾದದ್ದರಿಂದ 2018ರ ಡಿ. 12ರಂದು ತೆಗೆದುಕೊಂಡ ನಿರ್ಧಾರವನ್ನು ಪುನರ್‌ಪರಿಶೀಲಿಸಬೇಕಾಯಿತೆಂದು 2019ರ ಜನವರಿ 10ರಂದು ತೆಗೆದುಕೊಂಡ ತೀರ್ಮಾನದ ವರದಿಯಲ್ಲಿ ಹೇಳಲಾಗಿದೆ. ಹಾಗಾದರೆ ಈ ಹೆಚ್ಚುವರಿ ವಿಷಯಗಳು ಯಾವಾಗ, ಯಾವ ದಿನ ಲಭ್ಯವಾದವು?
ಈ ಹೆಚ್ಚುವರಿ ವಿಷಯಗಳ ಬಗ್ಗೆ 2019ರ ಜನವರಿ 5-6 ರಂದು ಖಾಸಗಿಯಾಗಿ, ಇನ್‌ಫಾರ್ಮಲ್ ಆಗಿ, ವಿವರವಾಗಿ ಚರ್ಚೆ ನಡೆದಿರಬೇಕು. ಈಗ ಏಳುವ ಪ್ರಶ್ನೆಯೆಂದರೆ, ಕೊಲಿಜಿಯಂನ ಒಂದು ನಿರ್ಧಾರವನ್ನು, ತೀರ್ಮಾನವನ್ನು ಮೀರಿ ಇನ್ನೊಂದು ತೀರ್ಮಾನ ತೆಗೆದುಕೊಳ್ಳುವುದೇ ಆದಲ್ಲಿ, ಇದನ್ನು ಅಧಿಕೃತವಾಗಿ, ಫಾರ್ಮಲ್ ಆಗಿ ಮಾಡುವುದು ಬೇಡವೇ?
2018ರ ಡಿಸೆಂಬರ್ 12ರಿಂದ 2019ರ ಜನವರಿ 10ರವರೆಗೆ ನಡೆದ ಘಟನಾವಳಿಗಳಿಂದ ಒಂದು ಅಂಶ ಸ್ಪಷ್ಟವಾಗುತ್ತದೆ: ಭಾರತದ ಮುಖ್ಯ ನ್ಯಾಯಾಧೀಶರು ಕೊಲಿಜಿಯಂನಲ್ಲಿರುವ ಇತರ ನ್ಯಾಯಾಧೀಶರ ಪರೋಕ್ಷ ಒಪ್ಪಿಗೆ ಪಡೆದೇ ಕೊಲಿಜಿಯಂನ ಮುಖ್ಯಸ್ಥನ, ಮಾಸ್ಟರ್‌ನ ಪಾತ್ರ ವಹಿಸಿದ್ದಾರೆ. 2018ರ ಡಿಸೆಂಬರ್ 12ರ ತೀರ್ಮಾನವನ್ನು ಅನುಷ್ಠಾನಗೊಳಿಸದೆ ಇರುವುದು ಪ್ರಕ್ರಿಯೆಯ ದೃಷ್ಟಿಯಿಂದ ದೋಷಪೂರಿತವಾಗಿದೆ ಮತ್ತು ರಹಸ್ಯಾತ್ಮಕವಾಗಿದೆ.
ಒಟ್ಟಿನಲ್ಲಿ, ದೇಶದ ನ್ಯಾಯಾಂಗದ ಸ್ವಾತಂತ್ರವು ಅಪಾಯದಲ್ಲಿದೆ ಮತ್ತು ಕಾಲ ಮಿಂಚಿಹೋಗುವ ಮೊದಲು ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಪುನರ್‌ಪರಿಶೀಲನೆ ನಡೆಸಬೇಕಾಗಿದೆ. ಮುಖ್ಯ ನ್ಯಾಯಾಧೀಶರು ಈಗ ತನಗೆ ತಾನೇ ಕೇಳಿಕೊಳ್ಳಬೇಕಾದ ಪ್ರಶ್ನೆ: 2018ರ ಜನವರಿ 12ರಂದು ಅವರು ‘ಪಾರದರ್ಶಕತೆ ಮತ್ತು ಉತ್ತರದಾಯಿತ್ವ’ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದು ಇದೇ ಕಾರಣಕ್ಕಾಗಿಯೇ?


ಕೃಪೆ: thewire

Writer - ಪ್ರಶಾಂತ್ ಭೂಷಣ್

contributor

Editor - ಪ್ರಶಾಂತ್ ಭೂಷಣ್

contributor

Similar News