ಮೊದಲ ಏಕದಿನ: ನ್ಯೂಝಿಲೆಂಡ್ 157 ರನ್‌ಗೆ ಆಲೌಟ್

Update: 2019-01-23 05:14 GMT

ನೇಪಿಯರ್, ಜ.23: ನಾಯಕ ಕೇನ್ ವಿಲಿಯಮ್ಸನ್(64, 81 ಎಸೆತ)ಏಕಾಂಗಿ ಹೋರಾಟದ ಹೊರತಾಗಿಯೂ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ(3-19),ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್(4-39) ಹಾಗೂ ಯಜುವೇಂದ್ರ ಚಹಾಲ್(2-43)ದಾಳಿಗೆ ತತ್ತರಿಸಿದ ನ್ಯೂಝಿಲೆಂಡ್ ಕೇವಲ 157 ರನ್‌ಗೆ ಆಲೌಟಾಗಿದೆ.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನ್ಯೂಝಿಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ, ನಾಯಕನ ಈ ನಿರ್ಧಾರಕ್ಕೆ ಸ್ವತಃ ನಾಯಕನ ಹೊರತುಪಡಿಸಿ ಬೇರ್ಯಾವ ಆಟಗಾರನಿಂದ ಸಮರ್ಥನೆ ವ್ಯಕ್ತವಾಗಲಿಲ್ಲ.

 ಆರಂಭಿಕ ಆಟಗಾರರಾದ ಗಪ್ಟಿಲ್(5) ಹಾಗೂ ಮುನ್ರೊ(8)ಅವರನ್ನು ಅಲ್ಪ ಮೊತ್ತಕ್ಕೆ ಪೆವಿಲಿಯನ್‌ಗೆ ಕಳುಹಿಸಿದ ಮುಹಮ್ಮದ್ ಶಮಿ ಕಿವೀಸ್‌ಗೆ ಆರಂಭದಲ್ಲೇ ಕಿವಿ ಹಿಂಡಿದರು.

ರಾಸ್ ಟೇಲರ್(24),ಸ್ಯಾಂಟ್ನರ್(14), ನಿಕೊಲ್ಸ್(12)ಎರಡಂಕೆಯ ಸ್ಕೋರ್ ಗಳಿಸಿದರು. ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಭಾರತದ ಬೌಲರ್‌ಗಳು ಆತಿಥೇಯ ತಂಡವನ್ನು 38 ಓವರ್‌ಗಳಲ್ಲಿ 157 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ಶಮಿ ಆರಂಭದಲ್ಲೆ ಆಘಾತ ನೀಡಿದರೆ, ಕುಲ್‌ದೀಪ್ ಯಾದವ್ ಕೆಳ ಕ್ರಮಾಂಕದಲ್ಲಿ ಮೂರು ವಿಕೆಟ್‌ಗಳನ್ನು ಉರುಳಿಸಿ ಕಿವೀಸ್ ಇನಿಂಗ್ಸ್‌ಗೆ ಬೇಗನೆ ತೆರೆ ಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News