ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣ: ಅಧಿವೇಶನದೊಳಗೆ ವರದಿ ನೀಡಲು ಕೋಟಾ ಶ್ರೀನಿವಾಸ ಪೂಜಾರಿ ಒತ್ತಾಯ

Update: 2019-01-23 14:08 GMT

ಬೆಂಗಳೂರು, ಜ. 23: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಜೆಟ್ ಮಂಡನೆ, ಜಂಟಿ ಅಧಿವೇಶನಕ್ಕೆ ಸಿದ್ಧತೆ ನಡೆಸಿದೆ. ಆದರೆ, ಶಕ್ತಿಕೇಂದ್ರ ವಿಧಾನಸೌಧ ಭ್ರಷ್ಟಾಚಾರದ ತಾಣವಾಗಿದೆ ಎಂದು ಮೇಲ್ಮನೆ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಸಿಕ್ಕ ಅಕ್ರಮ ಹಣ ಸಂಬಂಧ ಸಚಿವ ಪುಟ್ಟರಂಗಶೆಟ್ಟಿ ಅವರಿಂದ ಇನ್ನೂ ರಾಜೀನಾಮೆ ಪಡೆದಿಲ್ಲ. ಸಚಿವರಿಂದ ಹೇಳಿಕೆಯನ್ನೂ ಪಡೆದಿಲ್ಲ. ಭ್ರಷ್ಟಾಚಾರ ಮುಚ್ಚಿಹಾಕಲು ಸರಕಾರ ಯತ್ನಿಸುತ್ತಿದೆ ಎಂದು ದೂರಿದರು.

ಅಧಿವೇಶನದೊಳಗೆ ಈ ಬಗ್ಗೆ ಮೈತ್ರಿ ಸರಕಾರ ವರದಿ ನೀಡಬೇಕು. ರಾಜ್ಯದ ಜನತೆಗೆ ಈ ಬಗ್ಗೆ ಸತ್ಯಾಂಶ ಹೇಳದಿದ್ದರೆ ವಿಧಾನ ಮಂಡಲ ಅಧಿವೇಶನದ ಮೊದಲ ದಿನವೇ ವಿಪಕ್ಷ ಬಿಜೆಪಿ ಹೋರಾಟ ನಡೆಸಲಿದೆ ಎಂದು ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.

ಶ್ರೀಗಳಿಗೆ ಅಪಮಾನ: ಸಿದ್ಧಗಂಗಾ ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಸರಕಾರಿ ರಜೆ ಘೋಷಣೆ ಮಾಡಿದ್ದರೂ ಸಮಾಜ ಕಲ್ಯಾಣ ಇಲಾಖೆ ‘ಸಂವಿಧಾನ ಸಂಭಾಷಣೆ’ ಕಾರ್ಯಕ್ರಮ ನಡೆಸಿದ್ದು ಸಲ್ಲ. ಇದು ಶ್ರೀಗಳಿಗೆ ಸರಕಾರ ಮಾಡಿದ ಅಪಮಾನ ಎಂದು ಟೀಕಿಸಿದರು.

ಸ್ಪಷ್ಟಣೆ ನೀಡಿ: ಶಾಸಕರ ಹೊಡೆದಾಟ ಪ್ರಕರಣ ಸಂಬಂಧ ಮೈತ್ರಿ ಸರಕಾರ ಕೂಡಲೇ ಸ್ಪಷ್ಟಣೆ ನೀಡಬೇಕು. ರೆಸಾರ್ಟ್‌ನ ಸಿಸಿ ಟಿವಿ ಕ್ಯಾಮರ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News