×
Ad

ಶಿವಕುಮಾರಸ್ವಾಮಿಗೆ 'ಭಾರತ ರತ್ನ' ನೀಡುವಂತೆ ಕ್ರೈಸ್ತರ ಕನ್ನಡ ಸಂಘ ಒತ್ತಾಯ

Update: 2019-01-23 20:57 IST

ಬೆಂಗಳೂರು, ಜ.23: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕೆಂದು ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ ಒತ್ತಾಯಿಸಿದೆ.

ಬುಧವಾರ ನಗರದ ಪುರಭವನದ ಮುಂಭಾಗ ಶಿವಕುಮಾರ ಸ್ವಾಮೀಜಿಯ ನಿಧನಕ್ಕೆ ಕನ್ನಡ ಕ್ರೈಸ್ತ ಬಾಂಧವರು ಜ್ಯೋತಿ ಬೆಳಗಿಸಿ ಗೀತನಮನ ಸಲ್ಲಿಸಿ, ಶಿವಕುಮಾರ ಸ್ವಾಮೀಜಿ ಕೇವಲ ಒಂದು ಜಾತಿಗೆ, ಧರ್ಮಕ್ಕೆ ಸೀಮಿತವಾದವರಲ್ಲ. ಇಡೀ ಮನುಕುಲದ ಒಳಿತಿಗಾಗಿ ಜೀವಿಸಿದವರು. ಅಂತಹವರಿಗೆ ಭಾರತ ರತ್ನ ನೀಡಿದರೆ, ಪ್ರಶಸ್ತಿಯ ಘನತೆ ಹೆಚ್ಚುತ್ತದೆ ಎಂದು ಒಕ್ಕೊರಲಿನಿಂದ ಅಭಿಪ್ರಾಯಿಸಿದರು.

ರಾಜ್ಯದಲ್ಲಿ ಶಿಕ್ಷಣದಲ್ಲಿ ಕ್ರಾಂತಿ ಮಾಡುವ ಮೂಲಕ ತಮ್ಮ ಮಠದಲ್ಲಿ ಎಲ್ಲ ಜಾತಿ, ಸಮುದಾಯದ ಮಕ್ಕಳಿಗೂ ಅನ್ನ ಹಾಗೂ ಶಿಕ್ಷಣ ದಾಸೋಹ ನೀಡಿದ ಮಹಾನ್ ಮಾನವತಾವಾದಿ. ಇವರ ಪ್ರೇರಣೆಯಿಂದ ಇತರೆ ಸಂಘ, ಸಂಸ್ಥೆಗಳು ಉಚಿತ ಶಿಕ್ಷಣ ನೀಡಲು ಮುಂದಾದರು ಎಂದು ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಯಲ್‌ ರಾಜ್ ತಿಳಿಸಿದರು.

ಹಲವು ಜಾತಿ, ಧರ್ಮಾಧಾರಿತವಾಗಿರುವ ಭಾರತದಂತಹ ದೇಶದಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ತತ್ವಗಳು ಸರ್ವಧರ್ಮ ಸೌಹಾರ್ದತೆಗೆ ಮುಖ್ಯವಾದ ಅಂಶವಾಗಿದೆ. ಹೀಗಾಗಿ ಇವರಿಗೆ ಭಾರತ ರತ್ನ ನೀಡುವ ಮೂಲಕ ಸರ್ವಧರ್ಮ ಸೌಹಾರ್ದತೆಯ ತತ್ವಗಳು ದೇಶದಲ್ಲಿ ನೆಲೆಯೂರಲು ಸರಕಾರಗಳು ಕಾರಣವಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿ, ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಉಪಾಧ್ಯಕ್ಷ ದೇವಕುಮಾರ್, ಗೌರವ ಕಾರ್ಯದರ್ಶಿ ಚನ್ನೇಗೌಡ, ಧರ್ಮಗುರು ಫಾ.ಬರ್ತಲೋಮಿಯ, ಫಾ.ಸಂದ್ಯಾಗು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News