ಶುಲ್ಕದ ಮಾಹಿತಿ ಶಾಲೆಗಳ ಫಲಕದಲ್ಲಿ ಅಳವಡಿಸುವ ವಿಚಾರ: ಸುತ್ತೋಲೆಯನ್ನು 2 ವಾರದಲ್ಲಿ ಅನುಷ್ಠಾನಗೊಳಿಸಿ- ಹೈಕೋರ್ಟ್
ಬೆಂಗಳೂರು, ಜ.23: ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದ ಮಾಹಿತಿಯುಳ್ಳ ಫಲಕವನ್ನು ಎಲ್ಲ ಶಾಲೆಗಳ ಮುಂದೆ ಅಳವಡಿಸುವುದನ್ನು ಕಡ್ಡಾಯಗೊಳಿಸಿ 2015ರಲ್ಲಿ ಹೊರಡಿಸುವ ಸುತ್ತೋಲೆಯನ್ನು ಎರಡು ವಾರದಲ್ಲಿ ಅನುಷ್ಠಾನಗೊಳಿಸಿ, ಆ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಈ ಕುರಿತು ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ. ವಿಚಾರಣೆ ಸಂದರ್ಭದಲ್ಲಿ ಸರಕಾರಿ ವಕೀಲರು ವಾದ ಮಂಡಿಸಿ, ಶುಲ್ಕದ ವಿವರದ ಫಲಕವನ್ನು ಎಲ್ಲ ಶಾಲೆಗಳ ಮುಂದೆ ಅಳವಡಿಸುವುದನ್ನು ಕಡ್ಡಾಯಗೊಳಿಸಿ 2015ರ ಎ.13ರಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯನ್ನು ಅನುಷ್ಠಾನಗೊಳಿಸಿ, ಪ್ರಮಾಣಪತ್ರ ಸಲ್ಲಿಸಲಾಗುವುದು. ಅದಕ್ಕಾಗಿ ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಅದಕ್ಕೆ ಪತಿಕ್ರಿಯಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯೊಳಗೆ ರಾಜ್ಯದ ಎಲ್ಲ ಖಾಸಗಿ ಶಾಲೆಗಳ ಮುಂದೆ ಶುಲ್ಕದ ವಿವರ ಇರುವ ಫಲಕ ಹಾಕುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿ ವಿಚಾರಣೆಯನ್ನು ಎರಡು ವಾರ ಮುಂದೂಡಿತು. ಕರ್ನಾಟಕ ಶಿಕ್ಷಣ (ವರ್ಗೀಕರಣ ಮತ್ತು ನಿಯಂತ್ರಣ) ಕಾಯ್ದೆ-1995ರ ನಿಯಮ 10(4) ಹಾಗೂ 14(2)ರ ಅನ್ವಯ ಎಲ್ಲ ಶಾಲೆಗಳ ಮುಂದೆ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದ ವಿವರ ಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು 2015ರ ಎ.13ರಂದು ಶಿಕ್ಷಣ ಇಲಾಖೆಯೇ ಸುತ್ತೋಲೆ ಹೊರಡಿಸಿದೆ. ಆದರೆ ಬಹುತೇಕ ಶಾಲೆಗಳು ಈ ನಿಯಮ ಪಾಲಿಸುತ್ತಿಲ್ಲ. ಸುತ್ತೋಲೆ ಪ್ರಕಟಗೊಂಡು ಮೂರು ವರ್ಷ ಕಳೆದರೂ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಜಾರಿಗೆ ತಂದಿಲ್ಲ. ಆ ಕುರಿತು ಸರಕಾರ ಹಾಗೂ ಶಿಕ್ಷಣ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.