×
Ad

ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ: ಮೊದಲ ದಿನವೇ 15 ಸಾವಿರಕ್ಕೂ ಅಧಿಕ ರೈತರ ಭೇಟಿ

Update: 2019-01-23 21:24 IST

ಬೆಂಗಳೂರು, ಜ.23: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಆವರಣದಲ್ಲಿ ಆರಂಭವಾಗಿರುವ ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ಮೊದಲ ದಿನವೇ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೆಸರುಘಟ್ಟದಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ಮೇಳಕ್ಕೆ ರಾಜ್ಯದ ಬೆಳಗಾವಿ, ಹುಬ್ಬಳ್ಳಿ, ತುಮಕೂರು, ಚಿತ್ರದುರ್ಗ, ಕಲಬುರಗಿ ಸೇರಿ ಆಂಧ್ರಪ್ರದೇಶ, ಕೇರಳ, ತಮಿಳುನಾಡು ಇತರೆ ರಾಜ್ಯಗಳಿಂದ ಸಾವಿರಾರು ಮೇಳದಲ್ಲಿ ಭಾಗವಹಿಸಿ ತಮ್ಮ ಭೂಮಿಯಲ್ಲಿ ಯಾವ ಬೆಳೆ ಬೆಳೆಯಬಹುದು, ಹೇಗೆ ಬೆಳೆಯಬೇಕು ಎಂಬ ಮಾಹಿತಿ ಪಡೆದರು. ಸುಮಾರು 15 ಸಾವಿರಕ್ಕೂ ಅಧಿಕ ರೈತರು ಭಾಗವಹಿಸಿದ್ದರು.

ಮೇಳದಲ್ಲಿ ವಿದೇಶಿ ಕುಂಬಳ ಪ್ಯಾಟಿಪಾನ್, ಗುಲಾಬಿ, ಚೆಂಡು ಹೂ, ಸೇವಂತಿಗೆ, ಈರುಳ್ಳಿ, ಹುರುಳಿ ಕಾಯಿ (ಬೀನ್ಸ್), ಹೀರೇಕಾಯಿ, ಟೊಮ್ಯಾಟೋ, ಮೆಣಸಿನ ಕಾಯಿ ಸೇರಿದಂತೆ ಮತ್ತಿತರ ತರಕಾರಿ ಬೆಳೆಗಳು ಉತ್ತಮ ಇಳುವರಿಯೊಂದಿಗೆ ಕಾಯಿ ಬಿಟ್ಟಿರುವುದು ರೈತರನ್ನು ಆಕರ್ಷಿಸಿತು. ಇದೇ ಸಂದರ್ಭದಲ್ಲಿ ಇಂದಿನ ದಿನಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು, ತಂತ್ರಜ್ಞಾನ, ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಬೆಳೆಯುವ ವಿಧಾನ ಸೇರಿದಂತೆ ಮತ್ತಿತರ ತೋಟಗಾರಿಕಾ ಆವಿಷ್ಕಾರಗಳ ಬಗ್ಗೆ ಮಾಹಿತಿ ನೀಡಲಾಯಿತು. 25 ಕೆ.ಜಿ.ಯ ಕುಂಬಳಕಾಯಿ ಮೇಳದ ಕೇಂದ್ರ ಬಿಂದುವಾಗಿತ್ತು.

ಬೆಳೆ ರಕ್ಷಕ ಚೀಲ: ಕೀಟನಾಶಕ ರಹಿತ, ಗಾಳಿ ಮುಕ್ತ ಸಂಗ್ರಹಣೆಗೆ ಯುನಿವರ್ಸಲ್ ಎಂಟರ್‌ಪ್ರೈಸಸ್ ಪ್ರೊ ಹಾರ್ವೆಸ್ಟ್ ಚೀಲ ನಿರ್ಮಿಸಿದ್ದು, ಅಕ್ಕಿ, ತೊಗರಿ, ಜೋಳ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸಬಹುದು. ಮನೆಯಲ್ಲಿ ಜಾಸ್ತಿ ಪ್ರಮಾಣದ ಅಕ್ಕಿ ಸೇರಿ ಇನ್ನಿತರೆ ವಸ್ತುಗಳಿದ್ದರೆ ರಾಸಾಯನಿಕ ಪುಡಿಗಳನ್ನು ಹಾಕಿ ಚೀಲದಲ್ಲಿ ತುಂಬುತ್ತೇವೆ. ಆದರಿಂದ ಆರೋಗ್ಯ ಹಾಳಾಗಲಿದ್ದು, ಆ ದೃಷ್ಟಿಯಿಂದ ಪ್ರೊ ಹಾರ್ವೆಸ್ಟ್ ಚೀಲ ಮಾರುಕಟ್ಟೆಗೆ ಬಂದಿದೆ. 7 ಪದರನ್ನು ಒಳಗೊಂಡಿದೆ. 80, 50, 25, 1, ಅರ್ಧ ಕೆ.ಜಿಯ ಚೀಲಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ: 95134 99299 ಅನ್ನು ಸಂಪರ್ಕಿಸಬಹುದು.

ಮಳೆ ಮಾಹಿತಿ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮೇಳದಲ್ಲಿ ಮಳಿಗೆ ನಿರ್ಮಾಣ ಮಾಡಲಾಗಿತ್ತು. ರೈತರು ಮಳೆ ಬರುತ್ತದೆಂದು ಬೆಳೆ ಬೆಳೆಯಲು ಮುಂದಾಗಿ ನಷ್ಟ ಅನುಭವಿಸುತ್ತಿದ್ದು, ಇದನ್ನು ತಡೆಗಟ್ಟಲು ಮತ್ತು ಜನರಿಗೆ ಜಾಗೃತಿ ಮಾಹಿತಿ ನೀಡಲು ಮುಂದಾಗಿದೆ. 2013ರಲ್ಲಿ 2.26 ಲಕ್ಷ, 14ರಲ್ಲಿ 4.1 ಲಕ್ಷ, 15ರಲ್ಲಿ 7.20 ಲಕ್ಷ, 16ರಲ್ಲಿ 9.92 ಲಕ್ಷ, 17ರಲ್ಲಿ 12.98 ಲಕ್ಷ, 18ರಲ್ಲಿ 13.33 ಲಕ್ಷ ಜನರು ವರುಣಮಿತ್ರಕ್ಕೆ ಕರೆಮಾಡಿ ಮಾಹಿತಿ ಪಡೆದಿದ್ದು, ಎಲ್ಲಾ ರೈತರು ಮಳೆ ಸಂಬಂಧಿತ ಮಾಹಿತಿ ಪಡೆದು ಉತ್ತಮ ಬೆಳೆ ಪಡೆಯಬಹುದು. ಸಹಾಯವಾಣಿ ಸಂಖ್ಯೆ: 92433 45433 ಅನ್ನು ಸಂಪರ್ಕಿಸಬಹುದು.

ವಾಹನ ವ್ಯವಸ್ಥೆ: ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ರೈತರಿಗೆ ಅಗತ್ಯ ಮಾಹಿತಿ ನೀಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಮೂರು ದಿನಗಳವರೆಗೂ ಸುಮಾರು 20ರಿಂದ 25 ಸಾವಿರ ರೈತರು ಆಗಮಿಸುವ ನಿರೀಕ್ಷೆ ಇದೆ. ರೈತರ ಅನುಕೂಲಕ್ಕಾಗಿ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.

ನನಗೆ ಕಲಬುರಗಿಯಲ್ಲಿ 8ಎಕರೆ ಭೂಮಿ ಇದ್ದು, ತರಕಾರಿ ಬೆಳೆ ಬೆಳೆಯಬೇಕು ಎಂದು ನಿರ್ಧರಿಸಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ಮೇಳಕ್ಕೆ ಬಂದಿದ್ದು, ಅಧಿಕಾರಿಗಳಲ್ಲಿ ಮಣ್ಣಿನ ಅಂಶ, ನೀರಿನ ಅವಶ್ಯಕತೆ ತಿಳಿಸಿದ್ದೇನೆ. ಬೆಂಡೆಕಾಯಿ, ಹೀರೇಕಾಯಿ, ಸೌತೇಕಾಯಿ ಬೀಜ ಕೊಂಡುಕೊಂಡಿದ್ದೇನೆ.

-ಮಲ್ಲಿಕಾರ್ಜುನ್, ರೈತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News