ಜ.26ಕ್ಕೆ ‘ಸಂವಿಧಾನ ಬಲಗೊಳಿಸೋಣ’ ಸಮಾವೇಶ

Update: 2019-01-23 17:04 GMT

ಬೆಂಗಳೂರು, ಜ.23: ಸಂವಿಧಾನದ ಆಶಯಗಳನ್ನು ಬಲಿಷ್ಠಗೊಳಿಸಲು ಜ.26 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ‘ಭಾರತದ ಒಕ್ಕೂಟ ಮತ್ತು ಸಂವಿಧಾನವನ್ನು ಬಲಗೊಳಿಸೋಣ ಒಂದು ಸಮಾವೇಶ’ವನ್ನು ಆಯೋಜಿಸಲಾಗಿದೆ ಎಂದು ಪ್ರಗತಿಪರ ಚಿಂತಕ ರುದ್ರಪ್ಪ ಹನಗವಾಡಿ ತಿಳಿಸಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ಜಿ.ಕೆ.ಗೋವಿಂದರಾಜ್ ಸಮಾವೇಶವನ್ನು ಉದ್ಘಾಟಿಸಲಿದ್ದು, ಅಬ್ದುಲ್ ಮಜೀದ್ ಶೋಯಬ್ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಕಡಿದಾಳು ಶಾಮಣ್ಣ, ಪ್ರೊ.ರವಿವರ್ಮ ಕುಮಾರ್, ಪ್ರೊ. ಎಸ್.ಜಿ.ಸಿದ್ದರಾಮಯ್ಯ, ದಿನೇಶ್ ಅಮೀನ್ ಮಟ್ಟು, ಇಂದಿರಾ ಕೃಷ್ಣಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮುಂದಿನ ಪೀಳಿಗೆ ಹಾಗೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ನಮಗೆ ಜವಾಬ್ದಾರಿ ಇಲ್ಲವೇ? ಉತ್ತರದಾಯಿತ್ವವಿಲ್ಲವೇ? ಬನ್ನಿ ನಮ್ಮ ಹೊಣೆಯನ್ನು ಅರಿತು ವರ್ತಮಾನದ ಈ ವಿಷಮತೆಗಳಿಗೆ ಉತ್ತರ ಹುಡುಕೋಣ. ಸಂವಿಧಾನ ನಮ್ಮ ಧರ್ಮ, ಭಾರತ ನಮ್ಮ ಹೆಮ್ಮೆ. ಪ್ರಜಾಪ್ರಭುತ್ವ ನಮ್ಮ ಶಕ್ತಿ. ಹೀಗಾಗಿ, ಒಂದಾಗಿ ದುಷ್ಟ ಶಕ್ತಿಗಳ ವಿರುದ್ಧ, ಭ್ರಷ್ಟರ ವಿರುದ್ಧ ಹೋರಾಡುವ ಮೂಲಕ ದೇಶವನ್ನು ಪ್ರಗತಿಯ ದಾರಿಯಲ್ಲಿ ಮುನ್ನೆಡೆಸಲು, ಯುವಜನತೆಯನ್ನು ಸರಿದಾರಿಗೆ ತರೋಣ ಎಂದು ನುಡಿದರು.

ಜನರಿಂದ ಆಯ್ಕೆಯಾದ ಶಾಸಕರು ಹರಾಜಿಗೆ ಒಡ್ಡಿಕೊಂಡಿದ್ದಾರೆ. ಈ ಗೊಂದಲಗಳ ನಡುವೆ ಸಂವಿಧಾನ ಮೀಸಲಾತಿ ನೀತಿಯನ್ನೇ ವಿರೂಪಗೊಳಿಸಿ ಮೇಲ್ಜಾತಿಯವರಿಗೂ ಮೀಸಲಾತಿ ಎಂಬ ಕಾನೂನು ಜಾರಿಗೊಳಿಸಲಾಗಿದೆ. ಪ್ರಾದೇಶಿಕ ಭಾಷೆಗಳ ಕತ್ತು ಹಿಸುಕಲಾಗಿದೆ. ಉದ್ಯೋಗನೀತಿಯಲ್ಲಿ ರಾಜ್ಯಗಳ ಸ್ಥಳೀಯ ಆದ್ಯತೆಯನ್ನು ಗೌರವಿಸದೆ ಹೊರಗಿನವರನ್ನು ಹೇರಲಾಗುತ್ತಿದೆ. ದಲಿತರು, ಆದಿವಾಸಿಗಳು, ಹಿಂದುಳಿದವರು ಹಾಗೂ ಮುಸ್ಲಿಮರ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ವ್ಯವಸ್ಥೆಯಲ್ಲಿಯೂ ಕೋಮುದ್ವೇಷವನ್ನು ಬಿತ್ತಲಾಗಿದೆ. ವಿಚಾರವಾದಿಗಳನ್ನು ಬೇಟೆಯಾಡಲಾಗುತ್ತಿದೆ. ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಬರ್ಬರವಾಗಿ ಕೊಲ್ಲಲಾಗುತ್ತಿದೆ. ರಾಜಕೀಯ ವಿರೋಧಿಗಳ ವಿರುದ್ಧ ಐಟಿ ದಾಳಿ ನಡೆಸಿ ಅವರನ್ನು ಹೆದರಿಸಿ ಬಾಯಿಮುಚ್ಚಿಸಲಾಗುತ್ತಿದೆ. ಅಥವಾ ತಮ್ಮ ಪಕ್ಷಕ್ಕೆ ಸೆಳೆಯುವುದು ನಡೆಯುತ್ತಿದೆ. ಸಾಚಾ ಇರುವ ರಾಜಕಾರಣಿಗಳನ್ನು ಎದುರಿಸಲಾಗದೆ ಆಪರೇಷನ್ ರಾಜಕಾರಣದ ಮೂಲಕ ಪ್ರಜಾಪ್ರಭತ್ವುದ ಮೌಲ್ಯಗಳನ್ನು ಭ್ರಷ್ಟಗೊಳಿಸಲಾಗುತ್ತಿದೆ ಎಂದು ಅಸಮಾಧಾನಪಟ್ಟರು.

ಪ್ರಗತಿಪರ ಚಿಂತಕರಾದ ಲಕ್ಷ್ಮಿನಾರಾಯಣ ನಾಗವಾರ, ಪ್ರೊ.ಜಿ.ಬಿ.ಶಿವರಾಜು, ವಿ.ನಾಗರಾಜ್, ಮೌಲಾನಾ ಮುತಾಹಿರ್ ಶಿರಾಜಿ, ಆರ್.ನಾಗರಾಜ್, ನರಸಿಂಹ ಮೂರ್ತಿ ಹಾಗೂ ರಾಜಗೋಪಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಇದುವರೆಗೂ ದೇಶದ ಆಡಳಿತ ನಡೆಯುತ್ತಿತ್ತು. ಆದರೆ, ಇಂದೇನಾಗಿದೆ ಭಾರತಕ್ಕೆ? ಮುಂದಿನ ದಿನಗಳಲ್ಲಿ ಏನಾಗಬಹುದು. ಏಕದೇಶ, ಏಕಭಾಷೆ ಏಕಧರ್ಮದ ಪರಿಕಲ್ಪನೆಯಲ್ಲಿ ಮನಸ್ಸುಗಳನ್ನು ಒಡೆಯಲಾಗುತ್ತಿದೆ. ಬಹುತ್ವಗಳನ್ನು ನಾಶ ಮಾಡುವ ರೀತಿಯಲ್ಲಿ ಕೋಮು ದ್ವೇಷಗಳನ್ನು ಬಿತ್ತಲಾಗುತ್ತಿದೆ.

-ಮೌಲಾನಾ ಮುತಾಹಿರ್ ಶಿರಾಜಿ, ಪ್ರಗತಿಪರ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News