ಪ್ರಾಚೀನ ಭಾರತ ಸಸ್ಯಾಹಾರಿಯಾಗಿತ್ತೇ?, ಮಾಂಸಾಹಾರ ಮೊಘಲರ ಹೇರಿಕೆಯೇ?

Update: 2019-01-23 17:36 GMT

ಬಹುಶಃ ನಿಮಗೆಲ್ಲ ತಿಳಿದಿರುವಂತೆ, 1857ರ ದಂಗೆ (ಅಥವಾ ಮೊದಲ ಸ್ವಾತಂತ್ರ್ಯ ಸಂಗ್ರಾಮ ಇಲ್ಲವೇ ಸಿಪಾಯಿ ದಂಗೆ, ನಿಮ್ಮ ದೃಷ್ಟಿಕೋನವನ್ನು ಅವಲಂಬಿಸಿ)ಗೆ ತಕ್ಷಣದ ಕಾರಣವಾದದ್ದು ದೇಶಾದ್ಯಂತ ಹರಡಿದ ಒಂದು ವಿವಾದ. ಇದನ್ನು ಬಲ್ಲವರೆನಿಸಿಕೊಂಡವರು ಹೇಳುವಂತೆ, ಬ್ರಿಟಿಷ್ ಸೇನೆ ಎಲ್ಲ ಬಂದೂಕು ತೋಪುಗಳಿಗೆ ಪ್ರಾಣಿ ಕೊಬ್ಬನ್ನು ಸವರಿದ್ದು. ಸೈನಿಕರು ಇದನ್ನು ಬಳಸಬೇಕಾದರೆ ಹಲ್ಲಿನಿಂದ ಕಚ್ಚಿ ತೋಪುಗಳ ಹೊರಪದರ ತೆಗೆಯಬೇಕಿತ್ತು. ಅಂದರೆ ಸೈನಿಕರು ಸ್ವಲ್ಪವಾದರೂ ಪ್ರಾಣಿಯ ಕೊಬ್ಬನ್ನು ಸೇವಿಸಿದಂತಾಗುತ್ತದೆ.

ಆದರೆ ಈ ಪ್ರತಿಪಾದನೆಯ ಪ್ರಕಾರ ಈ ಕೊಬ್ಬು ಹಸು ಮತ್ತು ಹಂದಿಗಳದ್ದು. ಆದ್ದರಿಂದ ಸೈನಿಕರು ಹಸುವಿನ ಕೊಬ್ಬು ಅಥವಾ ಹಂದಿ ಕೊಬ್ಬು ಸೇವಿಸಬೇಕಾಗಿತ್ತು. ಇವು ಕ್ರಮವಾಗಿ ಹಿಂದೂ ಹಾಗೂ ಮುಸ್ಲಿಮರಿಗೆ ನಿಷಿದ್ಧ. ಇದು ಸೇನಾ ಘಟಕದಲ್ಲಿ ದಂಗೆಗೆ ಕಾರಣವಾಯಿತು.

ಆದರೆ ಇದರಲ್ಲಿ ಹಂದಿ ಅಥವಾ ಹಸುವಿನ ಕೊಬ್ಬು ಸವರಿಲ್ಲ; ಇದು ಕೇವಲ ವದಂತಿ ಎಂದು ಬ್ರಿಟಿಷರು ಹೇಳಿಕೊಂಡರು. ಆದರೆ ಆಹಾರದ ರಾಜಕೀಯ ವಿಚಾರಕ್ಕೆ ಬಂದಾಗ, ಈ ಸತ್ಯಾಂಶಗಳು ಅವರವರ ದೃಷ್ಟಿಗೆ ಅನುಗುಣವಾಗಿರುತ್ತವೆ. (ಬ್ರಿಟಿಷರು ಸುಳ್ಳು ಹೇಳಿರುವ ಎಲ್ಲ ಸಾಧ್ಯತೆಗಳೂ ಇವೆ!). ಇಂದಿನ ಆಹಾರ ಇತಿಹಾಸ ಬಹುಶಃ ಅವರವರ ಮನೋಭಾವಕ್ಕೆ ಅನುಗುಣವಾಗಿದೆ. ಇದರಲ್ಲಿ ಸತ್ಯಾಂಶದ ಸಾಧ್ಯತೆ ವಿರಳಾತಿವಿರಳ.

ವಾಸ್ತವವೆಂದರೆ, 1857ರ ಬಳಿಕ ಯಾವುದೇ ಹಂತದಲ್ಲಿ ಆಹಾರ ಇಂದಿನಷ್ಟು ರಾಜಕೀಯಕರಣಗೊಂಡಿಲ್ಲ ಎನ್ನುವುದು ನನ್ನ ನಂಬಿಕೆ. ಬೀಫ್ ಭಕ್ಷಣೆ ಬಗೆಗಿನ ಸಿಟ್ಟು ಬಹುತೇಕ ರಾಜಕೀಯ. ಕಿಚಡಿ ಮತ್ತು ಬಿರಿಯಾನಿ ನಡುವಿನದು ವಾಸ್ತವವಾಗಿ ಈ ಅಕ್ಕಿ ಖಾದ್ಯಗಳ ಹೋರಾಟವಲ್ಲ. ಇದು ಹಿಂದೂ ಆಹಾರ ಮತ್ತು ಮುಸ್ಲಿಂ ಆಹಾರ ಎನ್ನಲಾದ ಎರಡು ಖಾದ್ಯಗಳ ನಡುವಿನ ಮೇಲಾಟ. ಈ ಚರ್ಚೆಯನ್ನು ಅನಗತ್ಯವಾಗಿ ಎಳೆಯುತ್ತಿರುವುದು ರಾಜಕೀಯ ಕಾರಣಗಳಿಗಾಗಿ.

ಜನಸಾಮಾನ್ಯರ ಕಲ್ಪನೆಯಲ್ಲಿ ಭಾರತೀಯ ಆಹಾರ ಹವ್ಯಾಸದ ಬಗ್ಗೆ ಒಂದು ನಿರ್ದಿಷ್ಟ ರೂಪುರೇಷೆ ಇದೆ. ಇದರ ಪ್ರಕಾರ, ಒಳ್ಳೆಯ ಹಿಂದೂಗಳು ಸದಾ ಸಸ್ಯಾಹಾರಿಗಳು. ಮಾಂಸಭಕ್ಷಣೆ ದೊಡ್ಡ ಪಾಪ. ಗೋಮಾಂಸ ಭಕ್ಷಣೆ ಘೋರ ಪಾಪ. ಆ ವೇಳೆಗೆ ಮೊಘಲರ ಆಗಮನವಾಯಿತು. ಇವರು ಮಾಂಸಭಕ್ಷಣೆ ಉತ್ತೇಜಿಸಿದರು. ತಮ್ಮ ಬಿರಿಯಾನಿಯನ್ನು ಭಾರತದಾದ್ಯಂತ ಪಸರಿಸಿದರು ಹಾಗೂ ಭಾರತದ ಪರಿಶುದ್ಧ ಸಸ್ಯಾಹಾರಿ ಭಾರತೀಯ ಪರಂಪರೆ ಕಲುಷಿತಗೊಳಿಸಿದರು.

ಗೋಮಾಂಸ ಭಕ್ಷಕರನ್ನು ವಿಚಾರಣೆಗೆ ಗುರಿಪಡಿಸುವ ಮೂಲಕ ಮತ್ತು ಸಸ್ಯಾಹಾರಿಗಳನ್ನು ಗೌರವಿಸುವ ಮೂಲಕ ನಮ್ಮ ದೇಶ ಪ್ರಾಚೀನ ಭಾರತೀಯ ಸಂಪ್ರದಾಯಕ್ಕೆ ಮರಳುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಈ ಬಗೆಯ ಚಿತ್ರಣದ ಸಮಸ್ಯೆಯೆಂದರೆ, ಇಲ್ಲಿನ ಬಹುತೇಕ ಎಲ್ಲ ಅಂಶಗಳೂ ತಪ್ಪು.

ಮೊಟ್ಟಮೊದಲನೆಯದಾಗಿ ಭಾರತ ಎಂದೂ ಸಸ್ಯಾಹಾರಿ ದೇಶವಾಗಿರಲೇ ಇಲ್ಲ. ಪ್ರಾಚೀನ ಭಾರತದ ಉತ್ತರ ಅಥವಾ ದಕ್ಷಿಣ ಭಾಗಕ್ಕೆ ಬಂದರೂ, ರಾಜರು ಸಾಮಾನ್ಯವಾಗಿ ಮಾಂಸ ಸೇವಿಸುತ್ತಿದ್ದರು. (ನಮ್ಮ ಪುರಾಣದ ದೇವರುಗಳು ಕೂಡಾ ಇದನ್ನೇ ಮಾಡುತ್ತಿದ್ದರು). ಪ್ರಾಚೀನ ಭಾರತೀಯ ರಾಜರು ಕೇವಲ ಮಾಂಸ ಅಥವಾ ಕೋಳಿಯನ್ನಷ್ಟೇ ಸೇವಿಸುತ್ತಿರಲಿಲ್ಲ. ಇವರು ಆಮೆ, ಜಿಂಕೆ, ನವಿಲು ಮತ್ತು ಇತರ ಪ್ರಾಣಿ ಪಕ್ಷಿಗಳನ್ನು ಕೂಡಾ ತಿನ್ನುತ್ತಿದ್ದರು.

ವಿಶ್ವದ ಅತ್ಯಂತ ಪ್ರಾಚೀನ ನಾಗರೀಕತೆ ಎನಿಸಿದ, ಕ್ರಿಸ್ತ ಹುಟ್ಟುವ 3000 ವರ್ಷ ಮೊದಲಿನ ಸಿಂಧೂ ನದಿ ನಾಗರೀಕತೆಯ ಅವಧಿಯಲ್ಲಿ ಕೂಡಾ ಪ್ರಾಣಿಗಳನ್ನು ಬೆಳೆಸಿ ಆಹಾರಕ್ಕಾಗಿ ವಧೆ ಮಾಡಲಾಗುತ್ತಿತ್ತು. ವೇದ ಕಾಲದಲ್ಲಿ ಕೂಡಾ ಮಾಂಸಾಹಾರ ಸಾಮಾನ್ಯವಾಗಿತ್ತು. ಇಂದು ತೀರಾ ಹಿಂದೂ ಸಸ್ಯಾಹಾರಿ ಸಿದ್ಧಾಂತ ಎನಿಸಿದ ಆಯುರ್ವೇದದಲ್ಲಿ ಕೂಡಾ, ಮಾಂಸ ಆಧರಿತ ಚಿಕಿತ್ಸಾ ಕ್ರಮಗಳನ್ನು ಪ್ರತಿಪಾದಿಸಲಾಗಿದೆ.

ಸಸ್ಯಾಹಾರವನ್ನು ಹೆಚ್ಚು ಜನಪ್ರಿಯಗೊಳಿಸಿದ್ದು ಹಿಂದೂ ಸಂಪ್ರದಾಯಕ್ಕಿಂತ ಹೆಚ್ಚಾಗಿ ಜೈನ ಸಂಪ್ರದಾಯ. ಬುದ್ಧ ಕೂಡಾ (ಜೈನಧರ್ಮ ಹುಟ್ಟುಹಾಕಿದ ಮಹಾವೀರನ ನಂತರ ಬಂದವರು) ಸಸ್ಯಾಹಾರವನ್ನು ಪ್ರತಿಪಾದಿಸಿಲ್ಲ. (ದಲೈಲಾಮಾ ಮಾಂಸ ಸೇವಿಸುತ್ತಾರೆ ಎನ್ನುವುದು ತಿಳಿದಾಗ ಭಾರತೀಯರಿಗೆ ಆಘಾತವಾಗಿತ್ತು; ರೆಡ್ ಮೀಟ್ ಕಡಿಮೆ ಸೇವಿಸಿ ಎಂದು ವೈದ್ಯರು ಸಲಹೆ ಮಾಡುವವರೆಗೂ ಅವರು ಗೋಮಾಂಸ ಭಕ್ಷಿಸುತ್ತಿದ್ದರು). ಅರ್ಥಶಾಸ್ತ್ರದಂಥ ಪ್ರಾಚೀನ ಗ್ರಂಥಗಳು ಕೂಡಾ ಮಾಂಸ ಭಕ್ಷಣೆಯನ್ನು ಉಲ್ಲೇಖಿಸಿವೆ.

ಆದ್ದರಿಂದ ಎಲ್ಲ ಪ್ರಾಚೀನ ಹಿಂದೂಗಳು ಸಸ್ಯಾಹಾರಿಗಳು ಎನ್ನುವುದು ಸುಳ್ಳು.

ಇಂದಿನ ದಿನಗಳಲ್ಲಿ ಹೆಚ್ಚು ಭೀತಿಯ ಮೂಲ ಎಂದು ಬಿಂಬಿಸಲಾಗುತ್ತಿರುವ ಮೊಘಲರ ಬಗ್ಗೆ ಏನು ಹೇಳುತ್ತೀರಿ?... ಬಹುಶಃ ನೀವು ಜನಪ್ರಿಯ ಇಂಟರ್‍ನೆಟ್ ತಾಣಗಳಲ್ಲಿ ಮೊಘಲರ ಬಗ್ಗೆ ಓದಿರುವ ಬಹುತೇಕ ಅಂಶಗಳು ಸುಳ್ಳು.

ಮೊಟ್ಟಮೊದಲನೆಯದಾಗಿ ಅವರು ತಮ್ಮನ್ನು ಎಂದೂ ಮೊಘಲರು ಎಂದು ಕರೆದುಕೊಳ್ಳಲಿಲ್ಲ. ಹಲವು ಶತಮಾನಗಳ ಬಳಿಕ ಬ್ರಿಟಿಷ್ ಇತಿಹಾಸಕಾರರು ಇವರಿಗೆ ಈ ಹೆಸರು ಕೊಟ್ಟರು. ಬಾಬರನ ತಾಯಿ ಚೆಂಘಿಸ್‍ ಖಾನ್‍ ನ ವಂಶಸ್ಥಳು ಎಂಬ ಕಾರಣಕ್ಕಾಗಿ ಈ ಹೆಸರು ಕೊಟ್ಟರು. ಮಂಗೋಲ್ ಅಥವಾ ಮೊಘಲ್ ಎಂದು ಕರೆದಿದ್ದರೆ ಬಹುಶಃ ಬಾಬರ್‍ ಗೇ ಆಘಾತವಾಗುತ್ತಿತ್ತು.

ಎರಡನೆಯದಾಗಿ ಭಾರತಕ್ಕೆ ಬಂದ ಮುಸ್ಲಿಮರಲ್ಲಿ ಮೊಘಲರೇ ಮೊದಲಿಗರಲ್ಲ. ಪರಾಕ್ರಮಿ ಹಿಂದೂ ರಾಜರನ್ನು ಸೋಲಿಸಿ, ಗೋಮಾಂಸ ಭಕ್ಷಿಸುವ ದಬ್ಬಾಳಿಕೆಯ ಸಾಮ್ರಾಜ್ಯವನ್ನು ಅವರು ಕಟ್ಟಲಿಲ್ಲ. ಶತಮಾನಗಳಿಂದ ಭಾರತದಲ್ಲಿ ಮುಸ್ಲಿಂ ಅರಸರಿದ್ದರು. ಬಾಬರ್ ಸೋಲಿಸಿದ್ದು, ಮುಸ್ಲಿಂ ಸಾಮ್ರಾಜ್ಯದ ದೆಹಲಿ ಸುಲ್ತಾನರನ್ನೇ ಹೊರತು, ರಾಮರಾಜ್ಯದಂತಿದ್ದ ಪ್ರದೇಶವನ್ನಲ್ಲ.

ಮೂರನೆಯದಾಗಿ ಮೊಘಲರು ಶಾಂತಿಪ್ರಿಯ, ಹುಲ್ಲು ಮೇಯಿಸುವ, ಮಾಂಸ ತ್ಯಜಿಸಿದ ಜನಸಾಮಾನ್ಯರನ್ನು ಮಾಂಸಾಹಾರಿಗಳನ್ನಾಗಿ ಮಾಡಲಿಲ್ಲ. ಮೊಘಲರ ಆಗಮನಕ್ಕಿಂತ ಮೊದಲು ಕೂಡಾ ಬಹಳಷ್ಟು ಮಂದಿ ಮುಸ್ಲಿಂ ರಾಜರು ಮಾತ್ರವಲ್ಲದೇ ಹಿಂದೂಗಳು ಕೂಡಾ ಮಾಂಸಾಹಾರಿಗಳಾಗಿದ್ದರು.

ವಾಸ್ತವವಾಗಿ ಮೊಘಲ್ ರಾಜರು, ಹಿಂದೂ ರಾಜರಷ್ಟು ಮಾಂಸಪ್ರಿಯರಾಗಿರಲಿಲ್ಲ. ಹಲವು ಮಂದಿ ಮೊಘಲ್ ರಾಜರು ಮತ್ತು ಪ್ರಾಜ್ಞರು ಯುದ್ಧಕ್ಕೆ ಮುನ್ನ ಮಾಂಸ ತ್ಯಜಿಸುತ್ತಿದ್ದರು. ಚಕ್ರವರ್ತಿ ಅಕ್ಬರ್ ಮಾಂಸಾಹಾರದಿಂದ ಎಷ್ಟು ಅಂತರ ಕಾಯ್ದುಕೊಂಡಿದ್ದರು ಎಂದರೆ, ತಮ್ಮ ಜೀವನದ ಉತ್ತರಾರ್ಧದಲ್ಲಿ ಅವರು ಅಕ್ಷರಶಃ ಸಸ್ಯಾಹಾರಿಯಾಗಿದ್ದರು. ಹಸುವಿನ ಬಗೆಗಿನ ಮಧ್ಯಯುಗದ ಹಿಂದೂ ಭಾವನೆಗಳ ಹಿನ್ನೆಲೆಯಲ್ಲಿ, ಆತ ವಾಸ್ತವವಾಗಿ ಗೋಹತ್ಯೆಯನ್ನು ನಿಷೇಧಿಸಿದ್ದ. ಆತ ಗಂಗಾ ಜಲವನ್ನಷ್ಟೇ ಕುಡಿಯುತ್ತಿದ್ದ.

ಈ ಹಲವು ಪದ್ಧತಿಗಳನ್ನು ಆತನ ಮಗ ಜಹಾಂಗೀರ್ ಮತ್ತು ಮೊಮ್ಮಗ ಶಹಜಹಾನ್ ಕೂಡಾ ಮುಂದುವರಿಸಿದರು. ಈ ಇಬ್ಬರೂ ವಾರದ ಕೆಲ ನಿರ್ದಿಷ್ಟ ದಿನಗಳಲ್ಲಿ ಸಸ್ಯಾಹಾರಿಗಳಾಗಿದ್ದರು ಹಾಗೂ ಅಕ್ಬರನ ಗೋಹತ್ಯೆ ನಿಷೇಧವನ್ನು ಮುಂದುವರಿಸಿದರು. (ಇವರು ಕೂಡಾ ಗಂಗಾ ಜಲ ಕುಡಿಯುತ್ತಿದ್ದರು).

ಆದ್ದರಿಂದ ಮೊಘಲರು ಮಾಂಸಾಹಾರಿಗಳಾಗಿದ್ದರು ನಿಜ; ಅಂತೆಯೇ ಹಲವು ಮಂದಿ ಹಿಂದೂಗಳು ಕೂಡಾ. ಆದ್ದರಿಂದ ಇಂದು ಹೋಟೆಲ್‍ಗಳಲ್ಲಿ ಉಣಬಡಿಸುತ್ತಿರುವ ಮೊಘಲಾಯ್ ಖಾದ್ಯಗಳು ಮೊಘಲರಿಗೆ ಅನ್ಯಾಯ ಮಾಡುತ್ತಿವೆ ಎಂದೇ ಹೇಳಬೇಕು. ಈ ಪೈಕಿ ಬಹುತೇಕ ಖಾದ್ಯಗಳಿಗೂ ಮೊಘಲ್ ಆಸ್ಥಾನಕ್ಕೂ ಯಾವ ಸಂಬಂಧವೂ ಇಲ್ಲ.

ಇದು ನಮಗೆ ಕಿಚಡಿ ಮತ್ತು ಬಿರಿಯಾನಿ ಚರ್ಚೆಯನ್ನು ಮುನ್ನಲೆಗೆ ತರುತ್ತದೆ. ಇಂದಿನ ಜನಸಾಮಾನ್ಯರ ನಂಬಿಕೆ ಪ್ರಕಾರ, ಕಿಚಡಿ ನಿಜವಾಗಿಯೂ ಹಿಂದೂ ಖಾದ್ಯ ಮತ್ತು ಬಿರಿಯಾನಿ ಮಧ್ಯಪ್ರಾಚ್ಯದ ಆಹಾರವಾಗಿದ್ದು, ಮೊಘಲರು ಇದನ್ನು ಭಾರತಕ್ಕೆ ಪರಿಚಯಿಸಿದರು.

ಆದರೆ ಇದು ಅಸಂಬದ್ಧ....

ಕಿಚಡಿ ಭಾರತೀಯ ಖಾದ್ಯ ನಿಜ; ಆದರೆ ಇದು ಎಂದೂ ಕೇವಲ ಹಿಂದೂಗಳಿಗೆ ಸೀಮಿತವಾಗಿರಲಿಲ್ಲ. ಭಾರತದ ಎಲ್ಲ ಧರ್ಮೀಯರು ಅಂದರೆ ಬೌದ್ಧರು, ಜೈನರು ಮತ್ತು ಮುಸ್ಲಿಮರು ಕೂಡಾ ಇದನ್ನು ಸೇವಿಸುತ್ತಿದ್ದರು. ಅಂತೆಯೇ ಆಗ ಬಳಕೆಯಲ್ಲಿದ್ದುದು ಒಂದೇ ಬಗೆಯ ಕಿಚಡಿಯೂ ಅಲ್ಲ.

ಮಧ್ಯಕಾಲೀನ ಭಾರತದಲ್ಲಿ, ಆಹಾರಧಾನ್ಯ ಮತ್ತು ಬೇಳೆಕಾಳುಗಳನ್ನು ಒಳಗೊಂಡ ಎಲ್ಲ ಖಾದ್ಯಗಳನ್ನೂ ಕಿಚಡಿ ಎಂದು ಕರೆಯಲಾಗುತ್ತಿತ್ತು. ಇದರಲ್ಲಿ ನೂರಾರು ವೈವಿಧ್ಯಗಳಿದ್ದವು.

ಉದಾಹರಣೆಗೆ ಹುಮಾಯೂನ್ ಮತ್ತು ಪರ್ಶಿಯಾದ ಶಹಾ ಅವರಿಗೆ ಇಷ್ಟವಾಗಿದ್ದ ಒಂದು ಬಗೆಯ ಕಿಚಡಿಯನ್ನು ತೆಗೆದುಕೊಳ್ಳೋಣ. ಪರ್ಶಿಯನ್ನರ ಪ್ರತಿಪಾದನೆಯಂತೆ, ಪಲಾವ್ ಮೊಟ್ಟಮೊದಲ ಬಾರಿಗೆ ಕಂಡುಹಿಡಿದದ್ದು ಪರ್ಶಿಯಾದಲ್ಲಿ ಹಾಗೂ ವಿಶ್ವಾದ್ಯಂತ ಅದನ್ನು ಪರಿಚಯಿಸಲಾಯಿತು. ಇದು ಟರ್ಕಿಯ ‘ಪಿಲಾಫ್’ ಆದರೆ, ಸ್ಪೇನ್‍ನಲ್ಲಿ ಪಿಯೆಲ್ಲಾ, ಇಟೆಲಿಯಲ್ಲಿ ರಿಸೊಟ್ಟೊ ಆಯಿತು. ಇಷ್ಟಾಗಿಯೂ ಪರ್ಶಿಯನ್ನರು ಒಪ್ಪಿಕೊಳ್ಳುವಂತೆ ಇವರು ಒಂದು ಶ್ರೇಷ್ಠ ಅಕ್ಕಿಯ ಅಡುಗೆಯನ್ನು ಭಾರತದಿಂದ ಎರವಲು ಪಡೆದದ್ದು.

ಹುಮಾಯೂನ್ ಪಟ್ಟ ಕಳೆದುಕೊಂಡ ಬಳಿಕ 15 ವರ್ಷ ಗಡೀಪಾರು ಶಿಕ್ಷೆ ಅನುಭವಿಸಿದ. ಈ ಪೈಕಿ ಬಹುತೇಕ ಸಮಯವನ್ನು ಈತ ಕಳೆದದ್ದು ಪರ್ಶಿಯಾದಲ್ಲಿ. ಅಲ್ಲಿನ ಶಹಾ ಅವರ ನೆರವು ಕೋರಿ ಅಲ್ಲಿ ನೆಲೆಸಿದ್ದ. ಈ ಅವಧಿಯಲ್ಲಿ ಆತನ ಅಡುಗೆಯವರು ಶಹಾ ಅವರ ಸ್ಥಳೀಯ ಅಡುಗೆಯವರಿಗೆ ಕಿಚಡಿ ಮಾಡುವುದನ್ನು ಹೇಳಿಕೊಟ್ಟರು. ಈ ಕಿಚಡಿ ವಿಧದಲ್ಲಿ ಬಟಾಣಿ ಬಳಸಲಾಗಿತ್ತು ಹಾಗೂ ಇದು ಶಹಾಗೆ ಅತ್ಯಂತ ಪ್ರಿಯವಾಯಿತು.

ಹುಮಾಯೂನ್ ಮತ್ತೆ ಪಟ್ಟಕ್ಕೆ ಬಂದ ಬಳಿಕ, ಈ ಉತ್ತರ ಭಾರತೀಯ ಕಿಚಡಿ, ಮೊಘಲ್ ಅರಮನೆಯ ತಿನಿಸಾಗಿ ಮೊಮ್ಮಗ ಜಹಾಂಗೀರನ ಕಾಲದವರೆಗೂ ಮುಂದುವರಿಯಿತು. ಆ ಬಳಿಕ ಜಹಾಂಗೀರ್, ಗುಜರಾತ್‍ನಲ್ಲಿ ಪ್ರವಾಸ ಮಾಡುತ್ತಿದ್ದ ವೇಳೆ ಹೊಸ ಬಗೆಯ ಕಿಚಡಿಯ ರುಚಿ ಹಿಡಿದರು. ಈ ಕಿಚಡಿಯನ್ನು ಅಕ್ಕಿಯ ಬದಲಾಗಿ ತೃಣಧಾನ್ಯದಿಂದ ತಯಾರಿಸಲಾಗಿತ್ತು ಹಾಗೂ ಅದು ತಕ್ಷಣವೇ ರಾಜನ ನೆಚ್ಚಿನ ತಿನಿಸು ಎನಿಸಿಕೊಂಡಿತು. (ಗುಜರಾತಿ ಮೂಲ ಕಿಚಡಿಗಿಂತ ಹೆಚ್ಚಾಗಿ ಆಸ್ಥಾನದ ಅಡುಗೆಯವರು ತುಪ್ಪ ಬಳಸುತ್ತಿದ್ದರು). ಅರಮನೆಯ ಪಾಕಶಾಲೆಯಲ್ಲಿ ಬಹುತೇಕ ಪ್ರತಿದಿನ ಕಿಚಡಿ ಸಿದ್ಧಪಡಿಸಲಾಗುತ್ತಿತ್ತು.

ಭಾರತದ ಎಲ್ಲೆಡೆ ಈ ಕಿಚಡಿ ಏಕೆ ಜನಪ್ರಿಯ? ಇದು ಸಸ್ಯಾಹಾರಿ ಖಾದ್ಯ ಎಂಬ ಪ್ರೀತಿಯಿಂದಲ್ಲ; ಅದು ಒಂದೇ ಪಾತ್ರೆಯಲ್ಲಿ ಬೇಳೆ ಹಾಗೂ ಆಯಾ ಸ್ಥಳದಲ್ಲಿ ಲಭ್ಯವಿರುವ ಒಂದು ಆಹಾರಧಾನ್ಯವನ್ನು (ಅಕ್ಕಿ ಮಾತ್ರವಲ್ಲ) ಒಟ್ಟಿಗೇ ಬೇಯಿಸುವ ವಿಧಾನ. ಇದು ಅಗ್ಗ ಹಾಗೂ ಅಡುಗೆಗೆ ಸುಲಭ ಎಂಬ ಕಾರಣಕ್ಕೆ ಜನ ಇದನ್ನು ಬಳಸುತ್ತಿದ್ದರು. ಯುದ್ಧದ ಸಂದರ್ಭದಲ್ಲಿ ಸೈನಿಕರು ತಮ್ಮ ಅಡುಗೆಯನ್ನು ತಾವೇ ಸಿದ್ಧಪಡಿಸಿಕೊಳ್ಳುವ ಅವಧಿಯಲ್ಲಿ, ಪ್ರತಿ ಸೈನಿಕರೂ ತಮ್ಮ ಕಿಚಡಿಯನ್ನು ತಯಾರಿಸಿಕೊಳ್ಳಲು ನೂರಾರು ಕಡೆ ಒಲೆ ಹೂಡುತ್ತಿದ್ದರು.

ಬಹುತೇಕ ಕಿಚಡಿಗಳು ಸಸ್ಯಾಹಾರಿ; ಏಕೆಂದರೆ, ಮಾಂಸಾಹಾರಿ ಭಾರತೀಯರು ಕೂಡಾ ಮಾಂಸವನ್ನು ದುಬಾರಿ ಎಂದು ಪರಿಗಣಿಸಿದ್ದರು. (ವಿಶ್ವದ ಇತರ ಭಾಗಗಳಲ್ಲೂ ಈ ಅಂಶ ಅನ್ವಯಿಸುತ್ತದೆ. ಹೆನ್ರಿ 6 ಅವಧಿಯಲ್ಲಿ ಇಂಗ್ಲೆಂಡ್ ಕೂಡಾ, ಪ್ರಾಜ್ಞರು ಎಲ್ಲ ಬಗೆಯ ಪ್ರಾಣಿಗಳನ್ನು ಸೇವಿಸುತ್ತಿದ್ದರು; ಆದರೆ ರೈತರಿಗೆ ಮಾತ್ರ ಅಷ್ಟು ಮಾಂಸ ಖರೀದಿಸುವ ಶಕ್ತಿ ಇರಲಿಲ್ಲ ಎಂದು ಹೇಳಲಾಗುತ್ತಿತ್ತು).

ಇದು ನಮ್ಮನ್ನು ಬಿರಿಯಾನಿಯತ್ತ ಕರೆದೊಯ್ಯುತ್ತದೆ. ಇದರ ಪೂರ್ವಜ ಪಲಾವ್ ಆಗಿತ್ತೇ? ಬಹುಶಃ ಹೌದು; ಆದರೆ ಇದು ಹೆಚ್ಚು ತೋಯಿಸಿದ, ಅಧಿಕ ಸಾಂಬಾರ ಬಳಸಿದ, ಸಾಮಾನ್ಯವಾಗಿ ಮತ್ತೆ ಬೆರೆಸಲಾದ (ಬಹುತೇಕ ಬಿರಿಯಾನಿಗಳಲ್ಲಿ ಮಾಂಸ ಹಾಗೂ ಅನ್ನವನ್ನು ಪ್ರತ್ಯೇಕವಾಗಿ ಬೇಯಿಸಲಾಗುತ್ತದೆ. ಆದರೆ ಪಲಾವ್‍ನಲ್ಲಿ ಎಲ್ಲವನ್ನೂ ಜತೆಗೇ ಬೇಯಿಸಲಾಗುತ್ತದೆ) ಖಾದ್ಯ. ಬಿರಿಯಾನಿ ಮುಖ್ಯ ಆಹಾರ ಎನಿಸಿದರೆ, ಪಲಾವ್ ಪೂರಕ ಆಹಾರ.

ಇದು ಯಾವಾಗ ಕಂಡುಹಿಡಿಯಲ್ಪಟ್ಟದ್ದು ಎಂಬ ಬಗ್ಗೆ ಅಭಿಪ್ರಾಯ ಭೇದವಿದೆ. (ಒಂದು ಪ್ರತಿಪಾದನೆಯ ಪ್ರಕಾರ, ಇದರ ಕೀರ್ತಿ ಅಕ್ಬರನ ಅಡುಗೆಯವರಿಗೆ ಸಲ್ಲುತ್ತದೆ. ಆದರೆ ಇದಕ್ಕೂ ಒಂದು ಶತಮಾನ ಮೊದಲೇ ಇದನ್ನು ಸೃಷ್ಟಿಸಲಾಗಿತ್ತು ಎಂದು ಮತ್ತೆ ಕೆಲವರು ಹೇಳುತ್ತಾರೆ). ಆದರೆ ಇದು ಪರಿಪೂರ್ಣವಾಗಿ ಭಾರತೀಯ ಖಾದ್ಯ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

ಆದ್ದರಿಂದ ಪರಿಶುದ್ಧ ಸಸ್ಯಾಹಾರಿಗಳು ಮತ್ತು ದುಷ್ಟ ಗೋಮಾಂಸ ಭಕ್ಷಕ ದಾಳಿಕೋರರು ಎಂಬ ಜನಪ್ರಿಯ ಸುಳ್ಳನ್ನು ಮಾತ್ರ ನಂಬಬೇಡಿ. ಎಲ್ಲವೂ ಹಿಂದೂ ಕಿಚಡಿಗಳಲ್ಲ ಅಥವಾ ಬಿರಿಯಾನಿ ಆಕ್ರಮಣಕಾರರ ಖಾದ್ಯವೂ ಅಲ್ಲ. ಭಾರತೀಯ ಆಹಾರದ ಇತಿಹಾಸ ಎಷ್ಟು ಸಂಕೀರ್ಣವೆಂದರೆ, ಅದು ಸರಳ ಅಥವಾ ಏಕರೂಪದ್ದಲ್ಲ. ನಮ್ಮ ಅಡುಗೆಗಳನ್ನು ಕೂಡಾ ಪ್ರಸ್ತುತ ರಾಜಕೀಯ ಚರ್ಚೆಯ ಅಗತ್ಯತೆಗೆ ಅನುಸಾರವಾಗಿ ತಿರುಚಲಾಗಿದೆ.

ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಭಾರತದ ಅದ್ಭುತ ಅಡುಗೆಗಳು ಮಾತ್ರ ಇವರೆಲ್ಲರನ್ನೂ ಮೀರಿಸುವಂಥವು.

Writer - ವೀರ್ ಸಾಂಘ್ವಿ, hindustantimes.com

contributor

Editor - ವೀರ್ ಸಾಂಘ್ವಿ, hindustantimes.com

contributor

Similar News