ಇಂಡೋನೇಶ್ಯ ಮಾಸ್ಟರ್ಸ್: ಸೈನಾ ಶುಭಾರಂಭ

Update: 2019-01-23 18:48 GMT

ಜಕಾರ್ತ, ಜ.23: ಪ್ರಬಲ ಹೋರಾಟದ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ದಿನಾರ್ ದ್ಯಾಹ್ ಅಯುಸ್ಟಿನ್ ಅವರನ್ನು 7-21, 21-16, 21-11 ಗೇಮ್‌ಗಳ ಅಂತರದಿಂದ ಮಣಿಸಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬುಧವಾರ ಇಂಡೋನೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಕಳೆದ ಮಲೇಶ್ಯ ಮಾಸ್ಟರ್ಸ್ ಟೂರ್ನಿಯಲ್ಲಿ ಸೆಮಿಫೈನಲ್‌ವರೆಗೂ ತಲುಪಿದ್ದ 8ನೇ ಶ್ರೇಯಾಂಕದ ಸೈನಾ, ಈ ಪಂದ್ಯದ ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ಆ ಆತಂಕವನ್ನು ದೂರ ತಳ್ಳಿದ ಅವರು ಸತತ ಎರಡು ಗೇಮ್‌ಗಳಲ್ಲಿ ಗೆಲುವಿನ ನಗೆ ಬೀರಿ ಜಯ ತಮ್ಮದಾಗಿಸಿಕೊಂಡರು. 50ನೇ ಶ್ರೇಯಾಂಕದ ಅಯಸ್ಟಿನ್ ವಿರುದ್ಧ ಸೈನಾ ಅವರ ಮೂರನೇ ಗೆಲುವು ಇದಾಗಿದೆ. ಮುಂದಿನ ಪಂದ್ಯದಲ್ಲಿ ಸೈನಾ, ಇಂಡೋನೇಶ್ಯದವರೇ ಆದ ಫಿಟ್ರಿಯಾನಿ ಫಿಟ್ರಿಯಾನಿ ಅವರ ಸವಾಲಿಗೆ ಸಜ್ಜಾ ಗಲಿದ್ದಾರೆ. ಫಿಟ್ರಿಯಾನಿ ವಿರುದ್ಧ ಸೈನಾ ಅವರದು 4-0 ಹೆಡ್-ಟು-ಹೆಡ್ ಗೆಲುವಿನ ದಾಖಲೆಯಿದೆ.

ಪುರುಷರ ಡಬಲ್ಸ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ಗಳಾದ ಮನು ಅತ್ರಿ ಹಾಗೂ ಬಿ. ಸುಮಿತ್‌ರೆಡ್ಡಿ ಜೋಡಿ ಡೆನ್ಮಾರ್ಕ್‌ನ ಮ್ಯಾಡ್ಸ್ ಪೀಲರ್ ಕೊಲ್ಡಿಂಗ್ ಹಾಗೂ ನಿಕ್ಲಾಸ್ ನೊರ್ ಅವರನ್ನು 14-21, 21-19, 21-15ರಿಂದ ಮಣಿಸಿ ಎರಡನೇ ಸುತ್ತಿಗೆ ತಲುಪಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಪ್ರಣೀತ್ ಅವರು ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಚೆನ್ ಲಾಂಗ್ ವಿರುದ್ಧ 12-21, 16-21 ಗೇಮ್‌ಗಳಿಂದ ಸೋತರು. ಅಲ್ಲದೆ ಭಾರತದ ಇನ್ನೊಬ್ಬ ಆಟಗಾರ ಶುಭಾಂಕರ್ ಅವರು ಹೋರಾಟಕಾರಿ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಎಕ್ಸೆಲ್ಸೆನ್ ವಿರುದ್ಧ ವೀರೋಚಿತ ಸೋಲು ಅನುಭವಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಕಂಚು ಪದಕ ವಿಜೇತ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ ಕೂಡ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಅವರು ಥಾಯ್ಲೆಂಡ್‌ನ ಜಾಂಗ್ ಕೊಲ್ಪನ್ ಕಿತಿಥಾರಕುಲ್ ಹಾಗೂ ರಾವಿಂದಾ ಪ್ರಜೊಂಗ್ಜಾ ಜ್ ವಿರುದ್ಧ 14-21, 14-21ರಿಂದ ಶರಣಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News