ಡಿಡಿ ಪಡೆಯಲು ನಿರಾಕರಣೆ ವಿಚಾರ: ಆರ್‌ಬಿಐಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜ.24: ಅಲ್ಪ ಮೊತ್ತದ ಡಿಮ್ಯಾಂಡ್ ಡ್ರಾಫ್ಟ್‌ಗಳಿಗೆ(ಡಿಡಿ) ನಗದು ಸ್ವೀಕರಿಸದೇ ಚೆಕ್ ಮೂಲಕ ಪಾವತಿಸಿ ಇಲ್ಲವೇ ಬ್ಯಾಂಕ್ ಖಾತೆ ಹೊಂದಿರಬೇಕೆಂಬ ಬೇಡಿಕೆ ಇಡುವ ಸಾರ್ವಜನಿಕ ವಲಯದ ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂದಿಸಿದಂತೆ ಆರ್‌ಬಿಐಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದರೆ, ನೀವು ಚೆಕ್ ಬುಕ್‌ನ್ನು ಪಡೆದಿದ್ದರೆ ಮಾತ್ರ ಡಿಮ್ಯಾಂಡ್ ಡ್ರಾಫ್ಟ್(ಡಿಡಿ) ನೀಡುತ್ತೇವೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆರ್‌ಬಿಐ, ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು. ಈ ಸಂಬಂಧ ವಕೀಲ ರಮೇಶ್ ನಾಯ್ಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.
ಆರ್‌ಬಿಐನ ಕೆವೈಸಿ ಡೈರೆಕ್ಷನ್-2016 ಪ್ರಕಾರ 50 ಸಾವಿರ ರೂ.ವರೆಗಿನ ಡಿಮ್ಯಾಂಡ್ ಡ್ರಾಫ್ಟ್‌ಗಳಿಗೆ ನಗದು ಸ್ವೀಕರಿಸಲು ಅವಕಾಶವಿದೆ. ಆದರೆ ಆರ್‌ಬಿಐನ ಈ ನಿಯಮವನ್ನು ಸಾರ್ವಜನಿಕ ವಲಯದ ಬಹುತೇಕ ಬ್ಯಾಂಕುಗಳು ಪಾಲಿಸುತ್ತಿಲ್ಲ. 100, 200, 500 ಮತ್ತು ಸಾವಿರ ರೂಪಾಯಿ ಅಲ್ಪ ಮೊತ್ತದ ಡಿ.ಡಿಗಳಿಗೂ ನಗದು ಸ್ವೀಕರಿಸಲು ನಿರಾಕರಿಸಿ ಚೆಕ್ ಕೊಡಬೇಕು ಅಥವಾ ಅದೇ ಶಾಖೆಯಲ್ಲಿ ಖಾತೆ ಹೊಂದಿರಬೇಕು ಹೇಳಿ ಗ್ರಾಹಕರಿಗೆ ಅನಗತ್ಯವಾಗಿ ಕಿರಿಕಿರಿ ಉಂಟು ಮಾಡಲಾಗುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಅರ್ಜಿದಾರರ ವಾದವಾಗಿದೆ. ಗ್ರಾಹಕರಿಗೆ ಆಗುತ್ತಿರುವ ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆರ್‌ಬಿಐನ ಓಂಬಡ್ಸ್‌ಮನ್, ಬೆಂಗಳೂರಿನಲ್ಲಿರುವ ಆರ್‌ಬಿಐ ಪ್ರಾದೇಶಿಕ ನಿರ್ದೇಶಕರು ಮತ್ತು ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್‌ಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಆರ್‌ಬಿಐ ನಿಯಮ ಪಾಲನೆ ಮಾಡದೆ ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕ ವಲಯದ ಎಲ್ಲ ಬ್ಯಾಂಕುಗಳಿಗೆ 50 ಸಾವಿರ ದೊಳಗಿನ ಮೊತ್ತದ ಡಿಡಿಗೆ ನಗದು ಸ್ವೀಕರಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ನ್ಯಾಯಪೀಠವನ್ನು ಕೋರಿದ್ದಾರೆ.