ಸಂವಿಧಾನದ ಆಶಯಗಳು ಜಾರಿಗೆ ಬರಲಿ: ಸಮತಾ ಸೈನಿಕ ದಳದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ
ಬೆಂಗಳೂರು, ಜ.24: ಸಂವಿಧಾನದ ಆಶಯಗಳು ಸೂಕ್ತ ರೀತಿಯಲ್ಲಿ ಜಾರಿಯಾದರಷ್ಟೇ ಎಲ್ಲರಿಗೂ ಸಮಾನವಾದ ಅವಕಾಶಗಳು ಸಿಗಲು ಸಾಧ್ಯ ಎಂದು ಸಮತಾ ಸೈನಿಕ ದಳದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದ್ದಾರೆ.
ಗುರುವಾರ ಅಂಬೇಡ್ಕರ್ ದಲಿತ ಸೇನೆ ವತಿಯಿಂದ ಸಂವಿಧಾನೋತ್ಸವ-2019 ರ ಅಂಗವಾಗಿ ಯಶವಂತಪುರದ ಸಂವಿಧಾನ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯಿಂದ ಆಯೋಜಿಸಿದ್ದ ಸಂವಿಧಾನೋತ್ಸವ-2019 ಜನ ಜಾಗೃತಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಸರ್ವರೂ ಸಮಾನವಾಗಿ ಬದುಕುವ, ಸಮಾನತೆ, ಸ್ವಾತಂತ್ರವನ್ನು ಕಲ್ಪಿಸಲಾಗಿದೆ. ಅವರ ದೂರದೃಷ್ಟಿಯಿಂದಲೇ ನಮ್ಮ ದೇಶಕ್ಕೆ ಶ್ರೇಷ್ಠವಾದ ಸಂವಿಧಾನ ನೀಡಲು ಸಾಧ್ಯವಾಗಿದೆ ಎಂದ ಅವರು, ಜನರು ಸಂವಿಧಾನವನ್ನು ನಮ್ಮ ಜೀವನ ವಿಧಾನ ಗ್ರಂಥ ಎಂದುಕೊಂಡರೆ ಅದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಹೇಳಿದರು.
ಸಂವಿಧಾನ ರಚನೆ ಸಂದರ್ಭದಲ್ಲಿ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದವರೇ ಇಂದು ಸಂವಿಧಾನವನ್ನು ವಿರೋಧಿಸುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಮನುಸ್ಮತಿಯನ್ನು ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ, ಸಂವಿಧಾನ ಉಳಿವಿಗಾಗಿ ದೇಶದಾದ್ಯಂತ ತೀವ್ರ ಚಳವಳಿ ರೂಪಗೊಳ್ಳಬೇಕಾದ ಅಗತ್ಯವಿದೆ. ಸಂವಿಧಾನ ಉಳಿದರಷ್ಟೇ ದೇಶ, ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದು ನುಡಿದರು.
ಸಂವಿಧಾನ ನಮ್ಮ ಧರ್ಮ ಗ್ರಂಥ: ದೇಶದಾದ್ಯಂತ ನೆಲೆಸಿರುವ ಎಲ್ಲ ಜಾತಿ, ಧರ್ಮದ ಜನರಿಗೆ ಸಮಾನವಾದ ಹಕ್ಕುಗಳನ್ನು ಎತ್ತಿ ಹಿಡಿದಿರುವ ಸಂವಿಧಾನವೇ ನಮ್ಮೆಲ್ಲರಿಗೂ ಧರ್ಮ ಗ್ರಂಥವಾಗಿದೆ. ಆದರೆ, ಇಂದು ಅಧಿಕಾರದಲ್ಲಿರುವವರು ಸಂವಿಧಾನ ಬದಲಿಸುವ ಮಾತುಗಳನ್ನಾಡುತ್ತಾರೆ. ಕೆಲವರು ಅದನ್ನೇ ಸುಡುತ್ತಾರೆ ಎಂದರೆ ಮನುವಾದಿಗಳ ಮನಸ್ಥಿತಿ ಎಷ್ಟರಮಟ್ಟಿಗೆ ಕೆಟ್ಟಿದೆ ಎಂದು ಅರ್ಥವಾಗುತ್ತದೆ ಎಂದರು.
ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಆಶಾಕಿರಣವಾಗಿದ್ದು, ಅವರ ಪ್ರತಿಭೆ, ಸಾಮರ್ಥ್ಯವನ್ನು ಭಾರತೀಯರಿಗಿಂತ ವಿದೇಶಿಯರೇ ಹೆಚ್ಚು ಗುರುತಿಸಿದ್ದಾರೆ. ಅವರು ಸಂಪಾದಿಸಿದಷ್ಟು ವಿದ್ಯೆಯನ್ನು ವಿಶ್ವದಲ್ಲಿ ಯಾರೂ ಸಂಪಾದಿಸಿಲ್ಲ. ಹೀಗಾಗಿ, ಸಂವಿಧಾನಕ್ಕೆ ಸಂಬಂಧಿಸಿದ ಪಠ್ಯವನ್ನು ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗೂ ಕಡ್ಡಾಯವಾಗಿ ಶಿಕ್ಷಣದಲ್ಲಿ ಅಳವಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ದಲಿತ ಸಂಘಟನೆಗಳು ಒಟ್ಟುಗೂಡಿ ಸರಕಾರಗಳ ಮೇಲೆ ಒತ್ತಡ ತರುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.