ಇವಿಎಂಗಳು ಚುನಾವಣಾ ವ್ಯವಸ್ಥೆಯಿಂದ ಹೊರಗುಳಿಯಲೇಬೇಕು, ಏಕೆಂದರೆ…

Update: 2019-01-24 17:34 GMT

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಂದರೆ 2019ರ ಲೋಕಸಭಾ ಚುನಾವಣೆಗೆ ಮುನ್ನ ನಡೆದ ಕೊನೆಯ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳು ದೋಷರಹಿತವಾಗಿರಲಿಲ್ಲ. ಮತಯಂತ್ರಗಳು ದೋಷಯುಕ್ತವಾಗಿರುವುದಕ್ಕೂ (ಅಂದರೆ ತಾಂತ್ರಿಕ ದೋಷ ಹೊಂದಿರುವುದು) ಮತ್ತು ದುರುದ್ದೇಶಪೂರ್ವಕವಾಗಿ ತಿದ್ದುವುದಕ್ಕೂ (ವಂಚನೆ ಉದ್ದೇಶದಿಂದ) ವ್ಯತ್ಯಾಸವಿಲ್ಲದಿದ್ದರೂ, ಹಲವು ಇವಿಎಂಗಳು ವಿಚಿತ್ರವಾಗಿ ನಡೆದುಕೊಂಡ ವರದಿಗಳು ಬಂದಿವೆ. ಆತಂಕಕಾರಿ ಪ್ರಮಾಣದಲ್ಲಿ, ಮಧ್ಯಪ್ರದೇಶವೊಂದರಲ್ಲೇ 230 ಕ್ಷೇತ್ರಗಳ ಪೈಕಿ 204 ಕ್ಷೇತ್ರಗಳಲ್ಲಿ, ಚಲಾವಣೆಯಾದ ಮತಕ್ಕೂ ಎಣಿಕೆಯಾದ ಮತಕ್ಕೂ ಹೊಂದಾಣಿಕೆ ಇರಲಿಲ್ಲ. ಚುನಾವಣಾ ಆಯೋಗ ಇದಕ್ಕೆ ನೀಡಿರುವ ವಿವರಣೆಯೆಂದರೆ, ಎಣಿಕೆಯಾದ ಮತಗಳೇ ವಾಸ್ತವವಾಗಿ ಚಲಾವಣೆಯಾದ ಮತಗಳು. ಆದರೆ ಈ ಸಿದ್ಧಾಂತ ಮರುದೃಢೀಕರಣಕ್ಕೆ ಅವಕಾಶ ನೀಡುವುದಿಲ್ಲ.

ವಾಸ್ತವವಾಗಿ ಚಲಾವಣೆಯಾದ ಮತಕ್ಕೂ ಎಣಿಕೆಯಾದ ಮತಕ್ಕೂ ಒಂದು ಮತ ವ್ಯತ್ಯಾಸ ಬಂದರೆ ಕೂಡಾ ಅದು ಸ್ವೀಕಾರಾರ್ಹವಲ್ಲ. ಈ ಯಂತ್ರಗಳನ್ನು ಹ್ಯಾಕ್ ಮಾಡುವುದು ಸುಲಭವೇ ಅಥವಾ ಕಷ್ಟಸಾಧ್ಯವೇ ಎಂಬ ಬಗ್ಗೆ ನಡೆಯುತ್ತಿರುವ ಚರ್ಚೆಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗುವುದು ಹೆಚ್ಚು ಸಹಕಾರಿಯಾಗಬಹುದು. ಇದಕ್ಕೂ ಮುನ್ನ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯ ತತ್ವವನ್ನು ಪರಿಗಣಿಸಬೇಕಾಗುತ್ತದೆ.

ಮತದಾನದ ಮೊದಲ ತತ್ವಗಳು

ಯಾವುದೇ ಒಂದು ದೇಶ ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೆಂದರೆ, ಅದು ಸರ್ಕಾರಕ್ಕೆ ನೈತಿಕವಾದ ಕಾನೂನುಬದ್ಧತೆಯನ್ನು ದೊರಕಿಸಿಕೊಡುತ್ತದೆ. ಈ ಕಾನೂನುಬದ್ಧತೆಯ ಮೂಲ ಇರುವುದು ಜನರ ಇಚ್ಛಾಶಕ್ತಿಯಲ್ಲಿ. ಜನರ ಇಚ್ಛೆಯನ್ನು ಮತದ ಮೂಲಕ ಅನಾಮಧೇಯವಾಗಿ (ರಹಸ್ಯ ಮತದಾನದ ತತ್ವ) ಅಭಿವ್ಯಕ್ತಪಡಿಸಲಾಗುತ್ತದೆ. ಈ ಮತವನ್ನು ಸಮರ್ಪಕವಾಗಿ ದಾಖಲು ಮಾಡಿಕೊಳ್ಳುವುದು ಮಾತ್ರವಲ್ಲದೇ, ಇದನ್ನು ಸರಿಯಾಗಿ ಎಣಿಕೆ ಮಾಡಬೇಕಾದದ್ದೂ ಅಗತ್ಯ. ಆದ್ದರಿಂದ ಸರಿಯಾಗಿ ದಾಖಲಾಗುವಂತೆ ಹಾಗೂ ಎಣಿಕೆಯಾಗುವಂತೆ ನೋಡಿಕೊಳ್ಳಬೇಕು. ದಾಖಲಾತಿ ಮತ್ತು ಎಣಿಕೆ ಪ್ರಕ್ರಿಯೆ ಸಾರ್ವಜನಿಕರಿಗೆ ನೋಡುವಂತಿರಬೇಕು ಹಾಗೂ ದೃಢೀಕರಿಸಿಕೊಳ್ಳಲು ಸಾಧ್ಯವಾಗುವಂತಿರಬೇಕು. ಆದ್ದರಿಂದ ಪಾರದರ್ಶಕತೆ, ದೃಢೀಕರಣ ಹಾಗೂ ರಹಸ್ಯ, ಇವು ಮೂರು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯ ಆಧಾರಸ್ತಂಭಗಳು.

ಒಬ್ಬ ವ್ಯಕ್ತಿ ಇವಿಎಂಗೆ ಪರ ಅಥವಾ ವಿರೋಧವಾಗಿರುವ ಹೊರತಾಗಿಯೂ, ಯಾವುದೇ ಮತದಾನ ವ್ಯವಸ್ಥೆ, ಕ್ರಮಬದ್ಧತೆಯನ್ನು ಸಮರ್ಥಿಸಿಕೊಳ್ಳಲು ಪ್ರಮುಖ ಮೂರು ಪರೀಕ್ಷೆಗಳಲ್ಲಿ ಉತ್ತೀರ್ಣವಾಗಲೇಬೇಕು. ಮತಪತ್ರಗಳ ಮೂಲಕ ಮಾಡುವ ಮತದಾನ ಖಚಿತವಾಗಿ ಇದನ್ನು ಮಾಡುತ್ತದೆ. ಮತದಾರ ಸ್ವತಃ ತನ್ನ ಆಯ್ಕೆ ಸೂಕ್ತವಾಗಿ ದಾಖಲಾಗಿದೆ ಎಂದು ದೃಢೀಕರಿಸಿಕೊಳ್ಳಬಹುದು; ಮತದಾನ ರಹಸ್ಯವಾಗಿ ನಡೆಯುತ್ತದೆ ಹಾಗೂ ಮತಗಳ ಎಣಿಕೆ ಅವರ ಪ್ರತಿನಿಧಿಗಳ ಕಣ್ಣೆದುರೇ ನಡೆಯುತ್ತದೆ.

ಆದರೆ ಜರ್ಮನ್ ಸಂವಿಧಾನ ನ್ಯಾಯಾಲಯ 2009ರಲ್ಲಿ ನೀಡಿದ ಸ್ಪಷ್ಟ ತೀರ್ಪಿನಂತೆ ಇವಿಎಂಗಳು ಮೇಲಿನ ಮೂರೂ ಪರೀಕ್ಷೆಯಲ್ಲೂ ಅನುತ್ತೀರ್ಣವಾಗುತ್ತವೆ. ನ್ಯಾಯಾಲಯದ ಆದೇಶದ ಅನ್ವಯ ಆ ದೇಶವು ಇವಿಎಂ ವ್ಯವಸ್ಥೆಯನ್ನು ಕೈಬಿಟ್ಟು, ಮತ್ತೆ ಮತಪತ್ರ ಮೂಲಕ ಮತದಾನ ಮಾಡುವ ವ್ಯವಸ್ಥೆಗೆ ಹಿಂದಿರುಗಬೇಕಾಯಿತು. ತಾಂತ್ರಿಕವಾಗಿ ಮುಂದುವರಿದ ಇತರ ದೇಶಗಳಾದ ನೆದರ್ ಲ್ಯಾಂಡ್ಸ್ ಮತ್ತು ಐರ್ಲೆಂಡ್ ಕೂಡಾ ಇವಿಎಂ ವ್ಯವಸ್ಥೆಯನ್ನು ಕೈಬಿಟ್ಟಿವೆ.

ಮೊದಲ ಎರಡು ಮಾನದಂಡಗಳನ್ನು ನಾವು ತೆಗೆದುಕೊಂಡರೆ, ಇವಿಎಂ ಪಾರದರ್ಶಕವೂ ಅಲ್ಲ; ಇದನ್ನು ದೃಢೀಕರಿಸಿಕೊಳ್ಳುವುದೂ ಸಾಧ್ಯವಿಲ್ಲ. ಮತದಾರ ತನ್ನ ಮತ ಸರಿಯಾಗಿ ದಾಖಲಾಗಿದೆಯೇ ಎಂದು ದೃಢೀಕರಿಸಿಕೊಳ್ಳಲು ಅವಕಾಶವಿಲ್ಲ. ದೃಢೀಕರಿಸಬಹುದಾದ ಅಂಶವೆಂದರೆ, ಒಟ್ಟು ಎಷ್ಟು ಸಂಖ್ಯೆಯ ಮತ ಚಲಾವಣೆಯಾಗಿದೆ ಎನ್ನುವುದೇ ವಿನಃ ಪ್ರತಿ ಮತದಲ್ಲಿ ಅಭಿವ್ಯಕ್ತಪಡಿಸಿದ ಆಯ್ಕೆಯನ್ನಲ್ಲ. ಎಲೆಕ್ಟ್ರಾನಿಕ್ ವಿಧಾನದ ಮೂಲಕ ಮತದಾರನ ಆಯ್ಕೆಯನ್ನು ಪ್ರದರ್ಶಿಸಿದರೂ, ಅದು ಎಲೆಕ್ಟ್ರಾನಿಕ್ ವಿಧಾನದ ಮೂಲಕ ಮೆಷಿನ್‍ನ ಮೆಮೊರಿಯಲ್ಲಿ ಸಂಗ್ರಹವಾದ ಮತವೇ ಆಗಿರಬೇಕಿಲ್ಲ. ಈ ಅಂತರದ ಕಾರಣದಿಂದಲೇ ವೋಟರ್ ವೆರಿಫಯೇಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ವ್ಯವಸ್ಥೆಯನ್ನು ಆರಂಭಿಸಲಾಗಿದೆ.

ಆದರೆ ವಿವಿಪಿಎಟಿಗಳು, ಇವಿಎಂಗಳ ಪಾರದರ್ಶಕತೆ/ ದೃಢೀಕರಣ ಸಮಸ್ಯೆಯ ಅರ್ಧವನ್ನು ಮಾತ್ರ ಬಗೆಹರಿಸುತ್ತವೆ. ಅದೆಂದರೆ ಮತದ ಭಾಗ. ಆದರೆ ಎಣಿಕೆಯ ಭಾಗ ಅಪಾರದರ್ಶಕ ಕಾರ್ಯಾಚರಣೆಯಾಗಿಯೇ ಉಳಿಯುತ್ತದೆ. ಯಾರಿಗಾದರೂ ಎಣಿಕೆಯ ದೋಷದ ಬಗ್ಗೆ ಅನುಮಾನ ಬಂದರೆ, ಅದಕ್ಕೆ ಯಾವುದೇ ಅವಲಂಬನೆ ಇಲ್ಲ. ಎಲೆಕ್ಟ್ರಾನಿಕ್ ಮರುಎಣಿಕೆಯ ವ್ಯಾಖ್ಯಾನವೇ ಅಸಂಬದ್ಧ. ವಿವಿಪಿಎಟಿಗಳು ಅಂಕಿ ಅಂಶಗಳ ಮೂಲಕ ಈ ಸಮಸ್ಯೆಯನ್ನು ಕೂಡಾ ನಿವಾರಿಸುತ್ತವೆ ಎಂದು ಕೆಲವರು ನಂಬುತ್ತಾರೆ.

ಪ್ರಸ್ತುತ ಚುನಾವಣಾ ಆಯೋಗದ ವಿವಿಪಿಎಟಿ ಪರಿಶೋಧನೆಯು ಪ್ರತಿ ಕ್ಷೇತ್ರದಲ್ಲಿ ಯಾದೃಚ್ಛಿಕವಾಗಿ ಆಯ್ಕೆ ಮಾಡಲಾದ ಒಂದು ಮತಗಟ್ಟೆಗಷ್ಟೇ ಸೀಮಿತವಾಗಿದೆ. ಈ ಮಾದರಿ ಗಾತ್ರವು ಶೇಕಡ 98-99ರಷ್ಟು ಬಾರಿ ಕೂಡಾ ದೋಷಯುಕ್ತ ಇವಿಎಂಗಳನ್ನು ಪತ್ತೆಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಇತ್ತೀಚಿನ ಲೇಖನವೊಂದರಲ್ಲಿ ಅಶೋಕ್ ವರ್ಧನ್ ಶೆಟ್ಟಿ ಎಂಬ ಮಾಜಿ ಐಎಎಸ್ ಅಧಿಕಾರಿಯೊಬ್ಬರು ನಿರೂಪಿಸಿದ್ದಾರೆ. ವಿವಿಪಿಎಟಿ ವ್ಯವಸ್ಥೆ ಅಕ್ರಮವನ್ನು ತಡೆಯಲು ಪರಿಣಾಮಕಾರಿಯಾಗಬೇಕಾದರೆ, ಒಂದು ಕ್ಷೇತ್ರದಲ್ಲಿ ಒಂದು ದೋಷಯುಕ್ತ ಇವಿಎಂ ಪತ್ತೆಯಾದರೂ, ಇಡೀ ಕ್ಷೇತ್ರದ ಎಲ್ಲ ಮತಗಟ್ಟೆಗಳ ವಿವಿಪಿಎಟಿಯನ್ನು ಕೈಯಿಂದ ಎಣಿಕೆ ಮಾಡಬೇಕಾಗುತ್ತದೆ ಎಂದೂ ಅವರು ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಅವಕಾಶವಿಲ್ಲದಿದ್ದರೆ, ವಿವಿಪಿಎಟಿಗಳು ತಮ್ಮ ಪ್ರಾಮಾಣಿಕತೆಯ ಕಾಂತಿಯನ್ನಷ್ಟೇ ಪ್ರದರ್ಶಿಸಬಹುದೇ ವಿನಃ ಅದರಲ್ಲಿ ಯಾವ ತಿರುಳೂ ಇರುವುದಿಲ್ಲ.

ಮೂರನೇ ಮಾನದಂಡ ಗೌಪ್ಯತೆ. ಇಲ್ಲಿ ಕೂಡಾ ಇವಿಎಂಗಳು ನಿರಾಸೆ ಹುಟ್ಟಿಸುತ್ತವೆ. ಕಾಗದ ಮತಪತ್ರ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗ ಎಣಿಕೆಗೆ ಮುನ್ನ ವಿವಿಧ ಮತಗಟ್ಟೆಗಳ ಮತಪತ್ರಗಳನ್ನು ಮಿಶ್ರ ಮಾಡಬಹುದು. ಆದ್ದರಿಂದ ನಿರ್ದಿಷ್ಟ ಪ್ರದೇಶದ ಮತದಾನ ಆದ್ಯತೆ ರಹಸ್ಯವಾಗಿಯೇ ಉಳಿಯುತ್ತದೆ. ಆದರೆ ಇವಿಎಂಗಳಲ್ಲಿ, ಮತಗಟ್ಟೆವಾರು ಎಣಿಕೆಗೆ ನಾವು ವಾಪಾಸು ಹೋಗಿದ್ದೇವೆ. ಇದರಿಂದಾಗಿ ಮತದಾನದ ವಿಧಾನ ಸುಲಭವಾಗಿ ಗೊತ್ತಾಗುತ್ತದೆ ಹಾಗೂ ದುರ್ಬಲ ವರ್ಗದವರು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಖಚಿತವಾಗಿ ಇದೆ. ಎಲ್ಲವನ್ನೂ ಒಟ್ಟುಗೂಡಿಸುವ ಟೋಟಲೈಸರ್ ಯಂತ್ರಗಳು ಇದಕ್ಕೆ ಪರಿಹಾರವಾದರೂ, ಚುನಾವಣಾ ಆಯೋಗ ಇದನ್ನು ಅಳವಡಿಸಿಕೊಳ್ಳಲು ಮುಂದಾಗಿಲ್ಲ.

ಆದ್ದರಿಂದ ಈ ಎಲ್ಲ ಮೂರೂ ಮಾನದಂಡಗಳಲ್ಲಿ ಅಂದರೆ ಪಾರದರ್ಶಕತೆ, ದೃಢೀಕರಣ ಮತ್ತು ಗೌಪ್ಯತೆ ವಿಚಾರಗಳಲ್ಲಿ ಇವಿಎಂಗಳು ದೋಷಪೂರಿತ ಎನಿಸುತ್ತವೆ. ಅಗಾಧತೆಯ ಸವಾಲುಗಳ ಹಿನ್ನೆಲೆಯಲ್ಲಿ ವಿವಿಪಿಎಟಿ ಕೂಡಾ ಇದಕ್ಕೆ ಉತ್ತರವಲ್ಲ. ಇವಿಎಂಗಳ ಇತ್ತೀಚಿನ ಸಾಧನೆಗಳಿಂದ ತಿಳಿದುಬರುವಂತೆ, ರಾಷ್ಟ್ರಮಟ್ಟದ ಚುನಾವಣೆಯಲ್ಲಿ ದೋಷಯುಕ್ತ ಯಂತ್ರಗಳ ಸಂಖ್ಯೆ ಅಧಿಕ. ಮತಯಂತ್ರಗಳ ದೋಷ ಕಂಡುಬಂದ ಕ್ಷೇತ್ರದ ಎಲ್ಲ ಇವಿಎಂ ಯಂತ್ರಗಳ ಮತಗಳನ್ನು ಕೈಯಿಂದ ಎಣಿಕೆ ಮಾಡುವ ನೀತಿಯನ್ನು ಚುನಾವಣಾ ಆಯೋಗ ಆಯ್ಕೆ ಮಾಡಿಕೊಳ್ಳದಿರುವ ಸಾಧ್ಯತೆಯೇ ಅಧಿಕ. ಆದ್ದರಿಂದ ಇವಿಎಂಗಳ ಮೂಲ ಉದ್ದೇಶವೇ ಸೋಲುತ್ತದೆ. ಇಷ್ಟಾಗಿಯೂ, ಈ ತತ್ವ ಇಲ್ಲದಿದ್ದರೆ ವಿವಿಪಿಎಟಿಗಳು ಅರ್ಥಹೀನವಾಗುತ್ತವೆ.

ಸಮರ್ಥನೀಯ ಅನುಮಾನಗಳು

ಈ ಸಮಸ್ಯೆಗಳ ಹೊರತಾಗಿಯೂ, ಇವಿಎಂಗಳು ಚುನಾವಣಾ ಆಯೋಗದ ವಿಶ್ವಾಸವನ್ನು ಉಳಿಸಿಕೊಂಡಿವೆ. ಭಾರತದ ಇವಿಎಂಗಳು ಪಾಶ್ಚಿಮಾತ್ಯ ದೇಶಗಳ ಇವಿಎಂಗಳಂತಲ್ಲ. ಇದನ್ನು ತಿರುಚಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಆದರೆ ಇದು ವಿಶ್ವಾಸದ ವಿಚಾರ. ಸಾಫ್ಟ್‍ ವೇರನ್ನು ಮೈಕ್ರೊಚಿಪ್‍ ಗೆ ಬರ್ನ್ ಮಾಡಲಾಗಿದ್ದರೂ, ನಿರ್ದಿಷ್ಟ ಇವಿಎಂನಲ್ಲಿ ಯಾವ ಸಾಫ್ಟ್‍ವೇರ್ ಕೆಲಸ ಮಾಡುತ್ತಿದೆ ಎನ್ನುವುದು ಮತದಾರರಿಗಾಗಲೀ, ಚುನಾವಣಾ ಆಯೋಗಕ್ಕಾಗಲೀ ತಿಳಿದಿರುವುದಿಲ್ಲ. ಜನ ಉತ್ಪಾದಕರನ್ನು ಹಾಗೂ ಚುನಾವಣಾ ಆಯೋಗವನ್ನು ನಂಬಲೇಬೇಕು. ಆದರೆ ಜರ್ಮನ್ ಕೋರ್ಟ್ ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವಂತೆ, "ಈ ವಿಶ್ವಾಸದ ಪೂರ್ವಷರತ್ತು ಎಂದರೆ, ಚುನಾವಣೆಯನ್ನು ದೃಢೀಕರಿಸುವುದು. ಆದರೆ ಇವಿಎಂಗಳಲ್ಲಿ ಚುನಾವಣಾ ಫಲಿತಾಂಶದ ಲೆಕ್ಕಾಚಾರ, ಲೆಕ್ಕಾಚಾರದ ಕಾಯ್ದೆಗೆ ಅನುಗುಣವಾಗಿ ನಡೆಯುತ್ತದೆ ಹಾಗೂ ಇದನ್ನು ಹೊರಗಿನಿಂದ ಪರಿಶೀಲಿಸಲು ಸಾಧ್ಯವಿಲ್ಲ"

ಮತಪತ್ರಗಳ ಚುನಾವಣೆಗೆ ಹೋಲಿಸಿದರೆ ಫಲಿತಾಂಶ ತ್ವರಿತವಾಗಿ ಬರುತ್ತದೆ ಮತ್ತು ಇದು ಮಿತ ವೆಚ್ಚದಾಯಕ ಕೂಡಾ. ಈ ಅಂಶವನ್ನು ಅಲ್ಲಗಳೆಯುವಂತಿಲ್ಲವಾದರೂ ಅದು ಚುನಾವಣೆಯ ವಿಶ್ವಾಸಾರ್ಹತೆಯ ವಿಚಾರ ಬಂದಾಗ ಎರಡನೇ ಅಂಶವಾಗಿ ಪರಿಗಣನೆಯಾಗುತ್ತದೆ. ಇವಿಎಂ ಪರವಾಗಿ ಕೇಳಿಬರುವ ಮತ್ತೊಂದು ಪ್ರತಿಪಾದನೆ ಎಂದರೆ, ಇದು ಮತಗಟ್ಟೆ ವಶ ಮತ್ತು ಮತಪೆಟ್ಟಿಗೆಗೆ ಬಲಾತ್ಕಾರವಾಗಿ ತುಂಬುವಂಥ ಅಕ್ರಮವನ್ನು ತಡೆಯುತ್ತದೆ ಎನ್ನುವುದು. ಸ್ಮಾರ್ಟ್‍ಫೋನ್‍ ನ ಈ ಯುಗದಲ್ಲಿ ಮತಪೆಟ್ಟಿಗೆಗೆ ತುಂಬುವ ಅವಕಾಶದ ವೆಚ್ಚ ಮತ್ತು ಅದು ಬಹಿರಂಗವಾಗುವ ಅಪಾಯ ಸಾಧ್ಯತೆಗಳು ಅಧಿಕ. ಇದಕ್ಕೆ ವಿರುದ್ಧವಾಗಿ ನಿರ್ದಿಷ್ಟ ಸಂಕೇತದ ಮೂಲಕ ಮತಯಂತ್ರವನ್ನು ತಿದ್ದುವುದು ಸುಲಭ ಹಾಗೂ ಇದು ಮತಗಟ್ಟೆ ವಶಕ್ಕಿಂತ ದೊಡ್ಡ ಪ್ರಮಾಣದಲ್ಲಿ ಊಹೆಗೂ ನಿಲುಕದಷ್ಟು ದೊಡ್ಡಮಟ್ಟದ ಅಕ್ರಮಕ್ಕೆ ಅವಕಾಶ ಮಾಡಿಕೊಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇವಿಎಂ ತಿದ್ದುಪಡಿ ಮಾಡುವುದನ್ನು ಪತ್ತೆ ಮಾಡುವುದು ಬಹುತೇಕ ಅಸಾಧ್ಯ.

ಮತಗಳನ್ನು ದಾಖಲಿಸುವಲ್ಲಿ ಯಂತ್ರಗಳು ನಿಷ್ಕ್ರಿಯವಾಗುವುದನ್ನು ಮಾತ್ರ ಪತ್ತೆ ಮಾಡಲು ಸಾಧ್ಯವಿದ್ದು, ಈ ಕಾರಣದಿಂದ ಮತಗಳನ್ನು ಹೊಂದಾಣಿಕೆ ಮಾಡುವಲ್ಲಿನ ಶಂಕಿತ ತಿದ್ದುಪಡಿ ದೊಡ್ಡ ಸಂಶಯದ ಹುತ್ತವಾಗಿಯೇ ಉಳಿಯುತ್ತದೆ.  ಇಂಥ ವಂಚನೆ ದೃಢಪಡದೇ ಇರುವ ಅಂಶ ಸದ್ಯಕ್ಕೆ ಇವಿಎಂ ಅಸ್ತಿತ್ವವನ್ನು ರಕ್ಷಿಸಬಹುದಾದರೂ, ಇದರ ಅಸ್ತಿತ್ವ ಮಾತ್ರ ಅಪಾಯಕಾರಿ ಬೆಲೆ ತೆರಬೇಕಾಗುತ್ತದೆ. ಅದೆಂದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಜನತೆಯ ವಿಶ್ವಾಸ ಅಳಿಸಿಹೋಗುವುದು.

ಇಷ್ಟಾಗಿಯೂ ದೇಶ ಮತಪತ್ರದ ಚುನಾವಣೆಗೆ ಮರಳಲು ಅಗತ್ಯ ಎನಿಸಿದ, ಇವಿಎಂ ತಿದ್ದುಪಡಿಗೆ ಸೂಕ್ತ ಪುರಾವೆಗಳು ಇಲ್ಲ. ಆದರೆ ಸಂದೇಹವೇ ಸಾಕು, ಈಗಾಗಲೇ ಸಾಕಷ್ಟು ಸಂದೇಹಗಳು ಇವೆ. ಚುನಾವಣಾ ಆಯೋಗ ಈಗಾಗಲೇ ಇವಿಎಂ ವಿರುದ್ಧದ ಸಂದೇಹಗಳು ಸಮರ್ಥನೀಯವಲ್ಲ ಎಂದು ಪ್ರತಿಪಾದಿಸುತ್ತಿದೆ. ಇದರ ಬದಲಾಗಿ ಚುನಾವಣಾ ಆಯೋಗವು ಭಾರತದ ಜನತೆಗೆ ಸಮರ್ಥನೀಯವಲ್ಲದ ಸಂದೇಹಗಳನ್ನು ಕೂಡಾ ನಿರಾಕರಿಸಲು ಸಮರ್ಥವಾದ ಚುನಾವಣಾ ಪ್ರಕ್ರಿಯೆಯನ್ನು ಒದಗಿಸುವ ಬದ್ಧತೆ ಹೊಂದಿದೆ. ಇದು ಪ್ರಜಾಸತ್ತಾತ್ಮಕ ಕ್ರಮಬದ್ಧತೆಗೆ ಮೂಲ ಅಗತ್ಯತೆಯೇ ವಿನಃ ಇದು ಐಚ್ಛಿಕ ಪರಿಕರವಲ್ಲ.

Writer - ಜಿ.ಸಂಪತ್, thehindu.com

contributor

Editor - ಜಿ.ಸಂಪತ್, thehindu.com

contributor

Similar News