ಫೆ.6 ರಿಂದ 15ರ ವರೆಗೆ ವಿಧಾನ ಮಂಡಲ ಅಧಿವೇಶನ

Update: 2019-01-25 13:28 GMT

ಬೆಂಗಳೂರು, ಜ. 25: ವಿಧಾನ ಮಂಡಲ ಜಂಟಿ ಅಧಿವೇಶನ ಫೆಬ್ರವರಿ 6ರ ಬೆಳಗ್ಗೆ 11ಗಂಟೆಗೆ ಆರಂಭಗೊಳ್ಳಲಿದ್ದು, ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲ ವಜುಬಾಯಿ ವಾಲಾ ಅವರು ಭಾಷಣ ಮಾಡಲಿದ್ದಾರೆ.

ಫೆ.8ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ಮಹತ್ವದ ಎರಡನೆ ಆಯವ್ಯಯ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ.

ವಿಧಾನ ಮಂಡಲ ಜಂಟಿ ಅಧಿವೇಶದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಇಂದು ಬೆಳಗ್ಗೆ ರಾಜ್ಯಪಾಲ ವಜುಬಾಯಿ ವಾಲಾರನ್ನು ಭೇಟಿ ಮಾಡಿದ್ದು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವಂತೆ ಆಹ್ವಾನಿಸಿದ್ದು, ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಒಪ್ಪಿಗೆ ನೀಡಿದ್ದಾರೆ. ಫೆ.6ರಿಂದ 15ರ ವರೆಗೆ ಒಟ್ಟು 8 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರ ಭಾಷಣದ ಬಳಿಕ ಅವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದ್ದು, ಭಾಷಣದ ಮೇಲಿನ ಚರ್ಚೆಗೆ ಸರಕಾರ ಉತ್ತರ ನೀಡುವ ಸಾಧ್ಯತೆಗಳಿವೆ.

ಫೆ.8 ರಂದು ಮೈತ್ರಿ ಸರಕಾರದ ಎರಡನೆ ಪೂರ್ಣಪ್ರಮಾಣದ ಬಜೆಟ್ ಮಂಡಿಸಲು ಸಿಎಂ ಕುಮಾರಸ್ವಾಮಿ ಉದ್ದೇಶಿಸಿದ್ದು, ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಇಂದು ರೈತ ಮುಖಂಡರ ಜತೆ ಸಿಎಂ ಕುಮಾರಸ್ವಾಮಿ ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News